ಕಂಬಳದ ಮಧ್ಯೆ ರಾಜ್ಯಮಟ್ಟದ ಕೆಸರುಗದ್ದೆ ಓಟಕ್ಕೆ ತೀರ್ಮಾಣ
ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಸಮಾಲೋಚನಾ ಸಭೆಯು ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಪುತ್ತೂರಿನಲ್ಲಿ ನಡೆಯುವ ಕಂಬಳದ ಮಧ್ಯೆ ಈ ಬಾರಿ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಕೆಸರುಗದ್ದೆ ಓಟ ಕಂಬಳದ ಒಂದು ಅಂಗವಾಗಿದ್ದು ಮುಂದಕ್ಕೆ ಯುವಕರಿಗೆ ಪ್ರೇರಣೆಯಾಗಲು ಹಾಗೂ ಇಂತಹ ಕಾರ್ಯಕ್ರಮದಲ್ಲಿ ಯುವಕರು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತಾಗಲು ಕಂಬಳದ ಮಧ್ಯೆ ಬಿಡುವಿನ ವೇಳೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಓಟವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಯಿತು.
ಕಂಬಳಕ್ಕೆ ಗೃಹ ಸಚಿವರನ್ನು ಆಹ್ವಾನಿಸಲು ತೀರ್ಮಾನ:
ಕಂಬಳ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ| ಜಿ ಪರಮೇಶ್ವರ್ ಹಾಗೂ ಸಚಿವ ಸಂತೋಷ್ ಲಾಡ್ರವರನ್ನು ಆಹ್ವಾನಿಸುವುದೆಂದು ತೀರ್ಮಾನಿಸಲಾಯಿತು.
ಐದು ಮಂದಿ ಸಾಧಕರಿಗೆ ಸನ್ಮಾನ:
ಕೃಷಿ ಕ್ಷೇತ್ರ, ಕಂಬಳ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಂದಿ ಮಹನೀಯರನ್ನು ಸನ್ಮಾನಿಸುವುದಾಗಿ ತೀರ್ಮಾನಿಸಲಾಯಿತು.
ಸನ್ಮಾನ:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಕೋಟಿ ಚೆನ್ನಯ ಕಂಬಳ ಸಮಿತಿಯ ಖಜಾಂಜಿಯೂ ಆಗಿರುವ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಹಾಗೂ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಪುತ್ತೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಸುಧಾಕರ್ ಶೆಟ್ಟಿ ಬೀಡಿನಮಜಲುರವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂತಾಪ:
ಕೆಲವು ದಿನಗಳ ಹಿಂದೆ ನಿಧನರಾದ ಕಂಬಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಹಕರಿಸುತ್ತಿದ್ದ ಸತ್ಯಾನಂದ ರೈ ರವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ, ಪುತ್ತೂರಿನ ಕೋಟಿ ಚೆನ್ನಯ ಕಂಬಳವು ಬಹಳ ಪ್ರಸಿದ್ಧಿ ಪಡೆದ ಕಂಬಳವಾಗಿದ್ದು ವರ್ಷದಿಂದ ವರ್ಷಕ್ಕೆ ಇಲ್ಲಿನ ಕಂಬಳವು ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿಯ ಕಂಬಳದಲ್ಲಿ ಬಿಡುವಿನ ವೇಳೆಯಲ್ಲಿ ನಡುನಡುವೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಕಾರ್ಯಕ್ರಮವನ್ನು ಜೋಡಣೆ ಮಾಡಿಕೊಂಡು ಉತ್ತಮ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಕಂಬಳವನ್ನು ಇನ್ನಷ್ಟು ಸುಂದರಗೊಳಿಸಿ ಜನರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಸಂಘಟನಾತ್ಮಕವಾಗಿ ಕೃಷಿಕರ ಕ್ರೀಡೆಯಾದ ಕಂಬಳಕ್ಕೆ ಒತ್ತು ನೀಡುವ ಸಲುವಾಗಿ ಸ್ಥಳೀಯ ಯುವಕರನ್ನು ಒಟ್ಟುಗೂಡಿಸಿ ಜನಾಕರ್ಷಣೆ ಮಾಡುವ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ. ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ಜೆನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ಪದಾಧಿಕಾರಿಗಳಾದ ವಿಕ್ರಂ ಶೆಟ್ಟಿ ಅಂತರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮಂಜುನಾಥ ಗೌಡ ಬನ್ನೂರು, ನವೀನ್ಚಂದ್ರ ನಾಯ್ಕ್ ಬೆದ್ರಾಳ.ರಂಜಿತ್ ಬಂಗೇರ, ರೋಷನ್ ರೈ ಬನ್ನೂರು, ಪ್ರಶಾಂತ್ ಮುರ, ಸುರೇಶ್ ಕುಮಾರ್, ಶಿವಪ್ರಸಾದ್ ರೈ, ಮಠಂತಬೆಟ್ಟು, ಶಶಿಕಿರಣ ರೈ ನೂಜಿಬೈಲು, ಶಶಿಕುಮಾರ್ ನೆಲ್ಲಿ ಕಟ್ಟೆ ,ವಿಕ್ರಂ ಆಳ್ವ ,ಬಿಪಿನ್ ಶೆಟ್ಟಿ ಸವಣೂರು ,ಪ್ರವೀಣ್ ಕುಮಾರ್, ಪ್ರಶಾಂತ್ ಗೌಡ ಸವಣೂರು, ಜಯಪ್ರಕಾಶ್ ಬದಿನಾರು, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ವಿನಯ ಕುಮಾರ್ ಸಹಿತ ಹಲವಾರು ಮಂದಿ ಪಾಲ್ಗೊಂಡು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ, ಮಠಂತಬೆಟ್ಟು ಸ್ವಾಗತಿಸಿ ವಂದಿಸಿದರು.