ಪುತ್ತೂರು : ನೆಹರುನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಫೆಬ್ರವರಿ 5 ರಂದು, ‘ರಥ ಸಪ್ತಮಿ’ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.
ದೈಹಿಕ ಮತ್ತು ಯೋಗ ಶಿಕ್ಷಕರಾದ ನವೀನ್ ಕುಮಾರ್ ರವರ ನೇತೃತ್ವದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.
ಅತಿಥಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ಅವರು ಮಕ್ಕಳನ್ನು ಉದ್ದೇಶಿಸಿ, ರಥ ಸಪ್ತಮಿ ಹಿಂದೂ ಧರ್ಮೀಯರ ಧಾರ್ಮಿಕ ದಿನಗಳಲ್ಲೊಂದು. ಮಾಘಮಾಸ ಶುಕ್ಲಪಕ್ಷದ ಏಳನೆಯ (ಸಪ್ತಮಿ) ದಿನದಂದು ಸೂರ್ಯನು ದಕ್ಷಿಣದಿಂದ ಉತ್ತರದತ್ತ ಚಲಿಸುವನು. ಮುಂದಕ್ಕೆ ಚಳಿಗಾಲವು ಹಿಂದಕ್ಕೆ ಸರಿದು, ತೀವ್ರವಾದ ಬೇಸಿಗೆಯ ಬಿರುಬಿಸಿಲಿನ ಅನುಭವ ಉಂಟಾಗುತ್ತದೆ. ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗೆ ಜೀವದಾತನು ಈ ಸೂರ್ಯ, ಸೂರ್ಯ ನಮಸ್ಕಾರ ಮತ್ತು ಇತರ ಆಸನಗಳನ್ನು ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
![](https://puttur.suddinews.com/wp-content/uploads/2025/02/cf432e1d-0ede-4d02-a225-345cc910505b.jpg)
ಆಡಳಿತ ಮಂಡಳಿಯ ಸದಸ್ಯೆ ಶಂಕರಿ ಶರ್ಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಆರೋಗ್ಯವಂತರಾಗಿ ಜೀವಿಸಲು ಯೋಗ ಅತಿ ಮುಖ್ಯ ಅದರಲ್ಲೂ ಸೂರ್ಯ ನಮಸ್ಕಾರ ಮಾಡುವುದರಿಂದ ಶರೀರದ ಎಲ್ಲಾ ಅವಯವಗಳಿಗೆ ಉತ್ತಮ ವ್ಯಾಯಾಮ ಲಭಿಸುತ್ತದೆ ಎಂದರು.
ಶಾಲಾ ಪ್ರಾಂಶುಪಾಲೆ ಸಿಂಧು ವಿ. ಜಿ, ಶೈಕ್ಷಣಿಕ ಸಲಹೆಗಾರ್ತಿ ಅನುರಾಧ ಶಿವರಾಂ, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಶಿಕ್ಷಕರಾದ ನವೀನ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಲತಾ ಶಂಕರಿ ಕಾರ್ಯಕ್ರಮವನ್ನು ನಿರೂಪಿಸಿದರು.