*ತರಬೇತಿಗೂ ಸೂಕ್ತವಾಗಿರುವ ಈಜುಕೊಳ
*ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಅತಿಥಿ ಕೊಠಡಿಗಳು
*ದಕ್ಷಿಣ ಕನ್ನಡದಲ್ಲೇ ಪ್ರಥಮ ಸಿಂಥೆಟಿಕ್ ಅತ್ಯಾಧುನಿಕ ಟೆನ್ನಿಸ್ ಕೋರ್ಟ್
*ಆರೋಗ್ಯವಂತ ಜೀವನಕ್ಕೆ ಮಲ್ಟಿ ಜಿಮ್
*ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್, ಟೇಬಲ್ ಟೆನ್ನಿಸ್ ಸಹಿತ ಹಲವು ಸೌಲಭ್ಯ
ಪುತ್ತೂರು:ಮರೀಲ್ನಲ್ಲಿರುವ ದಿ ಪುತ್ತೂರು ಕ್ಲಬ್ನಲ್ಲಿ 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಹೊಸ ಸೌಲಭ್ಯಗಳಾದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್, 1ಸಾವಿರ ಜನರ ಸಾಮರ್ಥ್ಯದ ವಿಶಾಲ ಹಾಲ್, 200 ಜನ ಸಾಮರ್ಥ್ಯದ 2400 ಚದರ ಅಡಿಯ ಎಸಿ ಹಾಲ್, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್, ಹವಾನಿಯಂತ್ರಿತ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ಫೆ.8ರಂದು ನಡೆಯಿತು.

ಸ್ವಸ್ಥ ಸಮಾಜದ ಚಟುವಟಿಕೆಗಳು ನಿರಂತರ ನಡೆಯಲಿ:
ಟೆನ್ನಿಸ್ ಕೋರ್ಟ್ ಉದ್ಘಾಟಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಅವರು ಮಾತನಾಡಿ ಕ್ಲಬ್ ಪ್ರಾರಂಭ ಮಾಡುವುದು ಸುಲಭವಾದರೂ ಪ್ರಾರಂಭಿಕ ಹಂತದಿಂದ ಕಡೆಯ ಸದಸ್ಯರ ವಿಶ್ವಾಸಗಳಿಸುವುದು ಅಷ್ಟು ಸುಲಭದ ಮಾತಲ್ಲ.ಆದರೆ ಡಾ.ದೀಪಕ್ ರೈ ಮತ್ತು ಅವರ ತಂಡ ಸದಸ್ಯರೆಲ್ಲರ ವಿಶ್ವಾಸ ಗಳಿಸಿ ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ.ಸಮಾಜ ಮೆಚ್ಚುವ ಕೆಲಸ ಮಾಡಲು ಕ್ಲಬ್ನಲ್ಲಿ ವಿಶಾಲ ಅವಕಾಶವಿದೆ.ಅದನ್ನು ಬಳಸಿಕೊಳ್ಳಬೇಕು.ಕ್ಲಬ್ನಲ್ಲಿ ಚಟುವಟಿಕೆಗಳು ದುರುಪಯೋಗ ಆಗಬಾರದು ಎಂದು ಸರಕಾರ ಕ್ಲಬ್ ಕಮಿಟಿ ರಚಿಸಿದೆ.ಅದರಲ್ಲಿ ನಾನೂ ಇದ್ದೇನೆ.ನಾವು ಕ್ಲಬ್ಗಳಿಗೆ ಸಲಹೆ ನೀಡುತ್ತೇವೆ.ಹಾಗಾಗಿ ಕೆಲವು ವಿಚಾರದಲ್ಲಿ ಕ್ಲಬ್ನ ಅಧ್ಯಕ್ಷರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದರು.ಸ್ವಸ್ಥ ಸಮಾಜ ನಮ್ಮ ಹಿರಿಯರು ಕಟ್ಟಿದ್ದಾರೆ.ಅಂತಹ ಸ್ವಸ್ಥ ಸಮಾಜದ ಚಟುವಟಿಕೆಗಳು ಕ್ಲಬ್ನಲ್ಲಿ ನಿರಂತರ ನಡೆಯಬೇಕು ಎಂದ ಅವರು, ನಾವೆಲ್ಲ ನಮ್ಮನಮ್ಮ ಕಾರ್ಯಕ್ಷೇತ್ರದಲ್ಲಿ ಕಾಯ, ವಾಚ, ಮನಸ ನಿಷ್ಠೆ, ಪ್ರಾಮಾಣಿಕತೆಯಿಂದ ನಮ್ಮ ನಮ್ಮ ಕೆಲಸಗಳನ್ನು ಸಮಾಜ ಸೇವೆಗಾಗಿ ಮಾಡಿದಾಗ ಇಂತಹ ಕ್ಲಬ್ಗಳನ್ನು ಹುಟ್ಟು ಹಾಕಲು ಸಾಧ್ಯ ಆಗುತ್ತದೆ.ಈ ಕ್ಲಬ್ಗಳಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿ ಶುಭಹಾರೈಸಿದರು.
ವೇಗವಾಗಿ ರಾಜ್ಯದಲ್ಲಿ ಬೆಳೆದಿರುವುದು ಪುತ್ತೂರಿನ ಕ್ಲಬ್:
೧ ಸಾವಿರ ಜನ ಸಾಮರ್ಥ್ಯದ ವಿಶಾಲ ಹಾಲ್ ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಸುಮಾರು ೯೯ ಕ್ಲಬ್ಗಳ ಒಡಂಬಡಿಕೆಯೊಂದಿಗೆ ಬಹಳ ವೇಗವಾಗಿ ರಾಜ್ಯದಲ್ಲಿ ಬೆಳೆದಿರುವ ಕ್ಲಬ್ ಅದು ಪುತ್ತೂರಿನ ಪುತ್ತೂರು ಕ್ಲಬ್.ಹಾಗಾಗಿ ಡಾ.ದೀಪಕ್ ರೈ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕೆಂದರು.ಮನುಷ್ಯ ಒತ್ತಡದ ಮಧ್ಯೆ ನೆಮ್ಮದಿಯಿಂದ ಬದುಕುವ ಸಂದರ್ಭ ಶಾಂತವಾಗಿ ಯೋಚನೆ ಮಾಡಲು ಪ್ರಶಾಂತವಾದ ವಾತಾವರಣ ಹೊಂದಿರುವ ಸ್ಥಳ ಹುಡುಕುವ ಕಾಲಘಟ್ಟದಲ್ಲಿ ಇಂತಹ ಕ್ಲಬ್ ಮಹತ್ವ ಬೀರುತ್ತದೆ.ತಮ್ಮ ಕಾರ್ಯದ ಒತ್ತಡದ ಮಧ್ಯೆ ಪ್ರಶಾಂತವಾಗಿರುವುದಕ್ಕೆ ಮಂಗಳೂರಿನಲ್ಲಿ ಇರುವಂಥ ವ್ಯವಸ್ಥೆಯನ್ನು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ವಿಶೇಷತೆಯಾಗಿದೆ.ಈ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.
ಸಮಾಜಕ್ಕೆ ಏನು ಬೇಕೋ ಅದೆಲ್ಲವೂ ಮೂಡಿಬರಲಿ:
ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ ಈ ಕ್ಲಬ್ ಪ್ರಾರಂಭ ಆದಂದಿನಿಂದ ಇವತ್ತಿನ ತನಕ ಎಲ್ಲದರಲ್ಲೂ ಸೇರಿಕೊಂಡ ಏಕೈಕ ವ್ಯಕ್ತಿ ನಾನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ.ಜಿಲ್ಲೆಯಲ್ಲೇ ಪುತ್ತೂರಿನ ಕ್ಲಬ್ ದಾಖಲೆಯ ಕೆಲಸ ಮಾಡಲು ಕಾರಣರಾದ ಡಾ.ದೀಪಕ್ ರೈ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಎಲ್ಲರೂ ಸೇರಿಕೊಂಡು ಒಂದೇ ಮನಸ್ಸಿನಲ್ಲಿ ಯೋಜನೆ ರೂಪಿಸಿದ್ದರಿಂದ ಇಂತಹ ಯಶಸ್ವಿ ಕಾರ್ಯ ನಡೆಸಲು ಸಾಧ್ಯವಾಗಿದೆ.ಇವತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂ ರಾವ್ ಅವರಿಗೆ ಬರಲಿಕ್ಕೆ ಆಸೆ ಇತ್ತು.ಆದರೆ ಅವರು ಅನ್ಯ ಕಾರ್ಯಕ್ರಮದ ನಿಮಿತ್ತ ಬರಲಿಲ್ಲ.ಯು.ಟಿ.ಖಾದರ್ ಅವರು ದುಬೈಯಲ್ಲಿ ಅಮ್ಮ ಕಾರ್ಯಕ್ರಮಕ್ಕೆ ಹೋಗಿದ್ದಾರೆ.ಊರಿನಲ್ಲಿದ್ದ ನಾವೆಲ್ಲ ಬಂದಿದ್ದೇವೆ.ಮುಂದಿನ ದಿನ ಈ ಕ್ಲಬ್ನಿಂದ ಸಮಾಜಕ್ಕೆ ಏನೇನು ಬೇಕೋ ಅದೆಲ್ಲವೂ ನಿಮ್ಮ ತಂಡದಿಂದ ಮೂಡಿ ಬರಲಿ.ಮಹಾಲಿಂಗೇಶ್ವರ ದೇವರ ಆಶೀರ್ವಾದ ನಿಮಗಿರಲಿ ಎಂದರು.
ಕ್ಲಬ್ನ ಸದುಪಯೋಗವನ್ನು ಎಲ್ಲರೂ ಪಡೆಯಬೇಕು:
ಹವಾನಿಯಂತ್ರಿತ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಸಂಪತ್ತನ್ನು ಗಳಿಸಿದಾಗ ನೆಮ್ಮದಿಯನ್ನು ಕಳೆದುಕೊಳ್ಳುವ ಈ ಸಮಾಜದಲ್ಲಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಒಟ್ಟಿಗೆ ಕೊಂಡುಹೋಗಲು ಮನುಷ್ಯನಿಗೆ ವಿಶ್ರಾಂತಿ ತಾಣದ ಅವಶ್ಯಕತೆ ಇದೆ.ಅದು ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಲ್ಲಿದೆ.ಇವತ್ತು ಪುತ್ತೂರು ನಗರಸಭೆ ಪ್ರದೇಶದಲ್ಲೂ ಕೂಡಾ ವಿಶ್ರಾಂತಿ ತಂಗುದಾಣ ಹತ್ತು ವರ್ಷದ ಹಿಂದೆ ಪುತ್ತೂರಿನ ಮರೀಲ್ ಭಾಗದಲ್ಲಿ ಆಗಿದೆ.ಇವತ್ತು ಅದು ರಾಜ್ಯದ ಪ್ರತಿಷ್ಠಿತ ಕ್ಲಬ್ ಆಗಿ ಮೂಡಿ ಬಂದಿದೆ.ಆಧುನಿಕತೆಯ ಸೊಗಡನ್ನು ಪುತ್ತೂರಿನ ಜನತೆಗೆ ಕ್ಲಬ್ನಿಂದ ನೀಡಲಾಗಿದೆ.ಪುತ್ತೂರಿನ ಜನತೆ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು.ಪುತ್ತೂರು ಮುಂದೆ ಜಿಲ್ಲಾ ಕೇಂದ್ರವಾಗಿ ಮೂಡಿ ಬರಲು ಇಂತಹ ಲಕ್ಷಣ ಕಾಣುತ್ತಿದೆ ಎಂದರು.
ಪುತ್ತೂರು ಕ್ಲಬ್ ಟೌನ್ಶಿಪ್ ಮೆರುಗು ನೀಡಿದೆ:
ಇಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಪಾಯಿಂಟ್ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಟ್ಟದ ಯೋಜನೆಯೊಂದಿಗೆ ಮಾಡಿದ ಈ ಕ್ಲಬ್ ಎಲ್ಲರಿಗೂ ಪ್ರಯೋಜನವಾಗಲಿ.ಡಾ.ದೀಪಕ್ ರೈ ಅವರು ಈ ಪ್ರದೇಶಕ್ಕೆ ಟೌನ್ಶಿಪ್ ಮೆರುಗು ನೀಡಿದ್ದಾರೆ.ಒಂದೇ ಸೂರಿನಡಿಯಲ್ಲಿ ಎಲ್ಲಾ ಸೌಲಭ್ಯ ದ.ಕ.ಜಿಲ್ಲೆಯಲ್ಲಿ ಎಲ್ಲೂ ಸಿಗಲಿಕ್ಕಿಲ್ಲ. ಆದರೆ ಅದು ಪುತ್ತೂರು ಕ್ಲಬ್ನಲ್ಲಿ ಸಿಗಲಿದೆ ಎಂದರು.
ಸಿಟಿ ಡೆವೆಲಪ್ ಆಗಲು ಸಿವಿಲ್ ಸೊಸೈಟಿಯೂ ಅಗತ್ಯ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ನಿರ್ಗಮಿತ ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಅವರು ಮಾತನಾಡಿ ನಗರಾಭಿವೃದ್ಧಿ ವಿಚಾರದಲ್ಲಿ ನೋಡಿದಾಗ ಬೇರೆ ಬೇರೆ ರೀತಿಯಲ್ಲಿ ಸಿಟಿ ಡೆವಲಪ್ ಮಾಡಬೇಕಾಗುತ್ತದೆ.ಅದಕ್ಕೆ ಕೇವಲ ಸರಕಾರದಿಂದ ಮೂಲಭೂತ ಸೌಕರ್ಯ ಅಳವಡಿಸಿದರೆ ಅಭಿವೃದ್ಧಿಯಾಗುವುದಿಲ್ಲ.ಸಿವಿಲ್ ಸೊಸೈಟಿಯೂ ಬೇಕಾಗುತ್ತದೆ.ಈ ನಿಟ್ಟಿನಲ್ಲಿ ಪುತ್ತೂರು ಕ್ಲಬ್ ಉತ್ತಮ ಸೌಲಭ್ಯ ನೀಡುತ್ತಿದೆ ಎಂದರು.
ಪುತ್ತೂರು ಕ್ಲಬ್ ಉತ್ತಮ ಕೆಲಸ ಮಾಡುತ್ತಿದೆ:
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಮಾತನಾಡಿ ಹಲವು ಜನರು ದುರುದ್ದೇಶದಿಂದ ಕ್ಲಬ್ಗಳನ್ನು ತೆರೆದು ಸಮಾಜವನ್ನು ಹಾಳು ಮಾಡುವ ಕೆಲಸ ಮಾಡುತ್ತಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಆದರೆ ಕ್ರೀಡೆ, ಲಂಚ್, ಈಜು, ಟೆನ್ನಿಸ್, ಕಲ್ಚರ್ ಕಾರ್ಯಕ್ರಮದ ಮೂಲಕ ದಿ ಪುತ್ತೂರು ಕ್ಲಬ್ನಲ್ಲಿ ಒಳ್ಳೆಯ ವ್ಯವಸ್ಥೆಯೊಂದಿಗೆ ಕುಟುಂಬ ಸಮೇತರಾಗಿ ಬರಬೇಕು ಅನ್ನುವ ರೀತಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ.ಕೇವಲ ೧೦ ವರ್ಷದ ಅವಽಯಲ್ಲಿ ಅತಿ ಹೆಚ್ಚು ಕ್ಲಬ್ಗಳ ಒಡಂಬಡಿಕೆ ಮಾಡಿರುವುದು ಸಣ್ಣ ವಿಷಯವಲ್ಲ.ಇಷ್ಟೆಲ್ಲ ಸಾಧನೆ ಮಾಡಿದ ಈ ಕ್ಲಬ್ ಇನ್ನೂ ಉತ್ತಮ ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.
ಗೌರವ ಸಮರ್ಪಣೆ:
ಕ್ಲಬ್ನ ನೂತನ ಸೌಲಭ್ಯಗಳ ಕಾಮಗಾರಿಗಳ ವಿನ್ಯಾಸ ರಚನೆ ಮಾಡಿದ ಮಂಗಳೂರು ಆಳ್ವ ಎಸೋಸಿಯೇಶನ್ನ ಮಾಲಕ ಸುಪ್ರಿತ್ ಆಳ್ವ, ಕನ್ಸ್ಟ್ರಕ್ಷನ್ ನಿರ್ವಹಿಸಿದ ರಾಜಶೇಖರ್, ಸೈಟ್ ಸೂಪರ್ವೈಸರ್ ತಿಲಕ್ ಗೌಡ ಅವರನ್ನು ಗಣ್ಯರು ಗೌರವಿಸಿದರು.ದಿ ಪುತ್ತೂರು ಕ್ಲಬ್ನ ಉಪಾಧ್ಯಕ್ಷ ದೀಪಕ್ ಕೆ.ಪಿ ಅವರು ಗೌರವ ಸಮರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.
ಸರ್ವಿಸ್ ಮೆಂಬರ್ಶಿಪ್ ಕಾರ್ಡ್ ಬಿಡುಗಡೆ:
ಕ್ಲಬ್ನಲ್ಲಿ ನೂತನವಾಗಿ ಸರ್ವಿಸ್ ಮೆಂಬರ್ಶಿಪ್ ಕಾರ್ಡ್ ಅನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಿಡುಗಡೆಗೊಳಿಸಿದರು.ಇದೇ ಸಂದರ್ಭ ಡಾ.ದೀಪಕ್ ರೈ ಅವರು ಗೌರವ ಸದಸ್ಯತನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡರಿಗೆ ನೀಡಿದರು.
ಎಲ್ಲದರಲ್ಲೂ ಕೈ ಹಾಕಿದ್ದೇವೆ, ಯಶಸ್ವಿಯಾಗಿದ್ದೇವೆ:
ದಿ ಪುತ್ತೂರು ಕ್ಲಬ್ನ ಅಧ್ಯಕ್ಷ ಡಾ.ದೀಪಕ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಬಹಳಷ್ಟು ಜನ ಈಗ ಸದಸ್ಯತನ ಬಯಸಿದ್ದಾರೆ.ಇದೇ ಮಾತನ್ನು ಹತ್ತು ವರ್ಷದ ಹಿಂದೆ ಹೇಳುವಾಗ ರೂ.೩೫ ಸಾವಿರ ನೀಡಲು ಮೇಲೆಕೆಳಗೆ ನೋಡುತ್ತಿದ್ದರು.ಆದರೆ ಯಾವುದಕ್ಕೂ ನಿಷ್ಠೆ ಬೇಕು.ಆ ನಿಷ್ಠೆ ನನ್ನಲ್ಲಿ ಮತ್ತು ನಮ್ಮ ಆಡಳಿತ ಸದಸ್ಯರಲ್ಲೂ ಇತ್ತು.ಇವತ್ತಿಗೆ ಹತ್ತು ವರ್ಷದಲ್ಲಿ ಕನಸು ಕಾಣುವುದಕ್ಕಿಂತ ಮೂರು ಪಾಲು ಹೆಚ್ಚು ಮಾಡಿ ತೋರಿಸಿದ್ದೇವೆ.೧೦ ವರ್ಷದಲ್ಲಿ ಇಷ್ಟು ಎತ್ತರಕ್ಕೆ ಬೆಳೆದ ಕ್ಲಬ್ ಎಲ್ಲೂ ಇಲ್ಲ.ಒಂದು ಉದ್ದೇಶವಿಟ್ಟು ಈ ಕ್ಲಬ್ ಮಾಡಿದ್ದೆ.ನಾವು ಕೇವಲ ಸೌಲಭ್ಯಗಳನ್ನು ಮಾತ್ರ ಅಭಿವೃದ್ಧಿ ಮಾಡಿದ್ದಲ್ಲ.ಬೇರೆ ವಿವಿಧ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದೇವೆ.ಕ್ರೀಡೆ, ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲೂ ಸಮಾಜ ಸೇವೆ ಮಾಡಿದ್ದೇವೆ.ನಾವು ಎಲ್ಲದರ್ಲಲೂ ಕೈ ಹಾಕಿದ್ದೇವೆ.ಯಶಸ್ವಿಯಾಗಿದ್ದೇವೆ.ನನ್ನ ತಾಯಿಯ ಆಶೀರ್ವಾದ, ನನ್ನ ಪತ್ನಿ ಬೆಂಬಲದಿಂದ ಎಲ್ಲವೂ ಆಗಿದೆ.ನನ್ನ ಸ್ನೇಹಿತರ ಸಹಾಯವೂ ಇತ್ತು.ಇದು ನನ್ನ ಕನಸು.ನಾವು ಕನಸು ಕಂಡಿದ್ದೇವೆ.ಇವತ್ತು ಪೂರ್ಣಗೊಂಡಿದೆ.ಆದರೆ ಇನ್ನೊಂದು ಹೊಸ ಕನಸು ಬರುತ್ತಿದೆ. ಮಹಾಲಿಂಗೇಶ್ವರನ ಆಶೀರ್ವಾದ ಇದ್ದರೆ ಪುತ್ತೂರಿನ ಭವಿಷ್ಯಕ್ಕೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವ ಚಿಂತನೆ ಇದೆ.ಈ ಪ್ರದೇಶದಲ್ಲಿ ಪರಿಸರ ಉಳಿವಿನ ಕೆಲಸವೂ ಮಾಡಿದ್ದೇವೆ.ಇಲ್ಲಿನ ಮಳೆ ನೀರು ಎಲ್ಲಾ ನಮ್ಮ ಬೋರ್ವೆಲ್ಗೆ ಹೋಗುತ್ತದೆ.ಉಪಯೋಗಿಸಿದ ಎಲ್ಲಾ ನೀರು ಮರುಶುದ್ದೀಕರಣಗೊಂಡು ಉದ್ಯಾನವನಕ್ಕೆ ಉಪಯೋಗ ಆಗುತ್ತದೆ ಎಂದ ಅವರು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ಬಯಸಿದರು.
ತನ್ವಿ ಶೆಣೈ ಪ್ರಾರ್ಥಿಸಿದರು.ದಿ ಪುತ್ತೂರು ಕ್ಲಬ್ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ವಂದಿಸಿದರು.ಕ್ಲಬ್ನ ಉಪಾಧ್ಯಕ್ಷ ದೀಪಕ್ ಕೆ.ಪಿ, ಕೋಶಾಧಿಕಾರಿ ದಿವಾಕರ್ ಕೆ.ಪಿ, ಜೊತೆ ಕಾರ್ಯದರ್ಶಿ ಪ್ರಭಾಕರ್ ಎ.ಎಮ್, ರೂಪೇಶ್ ಶೇಟ್, ಆಡಳಿತ ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ, ನಿತಿನ್ ಪಕ್ಕಳ, ಮನೋಜ್ ರೈ, ಚಂದ್ರಶೇಖರ್, ಪ್ರಶಾಂತ್ ಶೆಣೈ, ಜಯಂತ್ ನಡುಬೈಲು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಆಡಳಿತ ನಿರ್ದೇಶಕ ಕ್ಸೇವಿಯರ್ ಡಿ’ಸೋಜ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸುಹಾನ ಸಫರ್ ಕಾರ್ಯಕ್ರಮ ನಡೆಯಿತು.ಕುಂಬ್ಳೆ ಡಾ|ಅನಂತ ಪ್ರಭು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು.ಕುಂಬ್ಳೆ ನರಸಿಂಹ ಪ್ರಭು ಅವರು ಮಿಮಿಕ್ರಿ ನಡೆಸಿದರು.ವಿದುಷಿ ಪವಿತ್ರಾ ರೂಪೇಶ್, ವಿದ್ಯಾ ಸುವರ್ಣ ಮತ್ತು ಉಮಾಕಾಂತ್ ನಾಯಕ್, ರಾಜೇಶ್ ಭಾಗವತ್ ಮತ್ತು ತಂಡ ಮುಲ್ಕಿ, ವಿವಿಧ ಹಾಡುಗಳನ್ನು ಹಾಡಿದರು.
ಸುದ್ದಿಯಲ್ಲಿ ನೇರಪ್ರಸಾರ:
ಕಾರ್ಯಕ್ರಮದ ನೇರಪ್ರಸಾರ ಪುತ್ತೂರು ಸುದ್ದಿ ಯೂ ಟ್ಯೂಬ್ ಚಾನೆಲ್ನಲ್ಲಿ ಮೂಡಿ ಬಂದಿತ್ತು
ಬೆಂಗಳೂರು, ಮೈಸೂರು, ಹಾಸನ, ಉಡುಪಿ, ಮೂರು ವಿದೇಶಗಳನ್ನು ಸೇರಿ ಒಟ್ಟು ೯೯ ಕ್ಲಬ್ಗಳ ಒಡಂಬಡಿಕೆ (ಅಫಿಲಿಯೇಶನ್)ಪಡೆದುಕೊಂಡು ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮನೋರಂಜನಾ ಕ್ಲಬ್ ಆಗಿ ದಿ ಪುತ್ತೂರು ಕ್ಲಬ್ ಮೂಡಿ ಬಂದಿದೆ.ಪ್ರಸ್ತುತ ೧೩೦೦ ಸದಸ್ಯರುಗಳನ್ನು ನಮ್ಮ ಕ್ಲಬ್ ಹೊಂದಿದ್ದು ಕ್ಲಬ್ ಸಾಮಾಜಿಕ ಚಟುವಟಿಕೆಯಲ್ಲೂ ಬಹಳಷ್ಟು ಮುಂಚೂಣಿಯಲ್ಲಿದೆ.ತನ್ನ ಸದಸ್ಯರಿಗೆ ಬಲೆಬಲಿಪುಗ ಮೆರಥಾನ್ ಆಯೋಜಿಸಿದ್ದೆವು.ಕೋವಿಡ್ ಸಂದರ್ಭ ಅದನ್ನು ನಿಲ್ಲಿಸಿ ಇದೀಗ ಮತ್ತೆ ಆರಂಭಿಸಲಿದ್ದೇವೆ.ಮೋಟಾರು ವಾಹನಗಳಲ್ಲಿ ಟ್ರೆಷರ್ ಹಂಟ್, ಅಡುಗೆ ಸ್ಪರ್ಧೆಗಳು, ಶ್ವಾನ ಪ್ರದರ್ಶನ, ಬಾಕ್ಸ್ ಕ್ರಿಕೆಟ್ ಲೀಗ್, ಲಗೋರಿ, ವಾಲಿಬಾಲ್ ಪಂದ್ಯಾವಳಿಗಳು ಮತ್ತು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಸಾಧಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಹಳಷ್ಟು ಮಕ್ಕಳಿಗೆ ಸಹಕಾರ, ಅಂಗನವಾಡಿ ಶಾಲೆಗಳಿಗೆ ಸಮವಸ ವಿತರಣೆ, ಕೋವಿಡ್ ಸಮಯದಲ್ಲಿ ಮನೆಮನೆಗೆ ತೆರಳಿ ಕಿಟ್ ವಿತರಣೆ, ಅನೇಕ ಶಾಲೆಗಳಿಗೆ ಸಿಸಿಟಿವಿ ಅಳವಡಿಕೆ, ಪುಣ್ಯಕ್ಷೇತ್ರದ ಪ್ರವಾಸೋದ್ಯಮಕ್ಕೆ ಟೆಂಪಲ್ ಟೂರಿಸಮ್, ಮಕ್ಕಳಿಗೆ ಈಜು ತರಬೇತಿ, ಬ್ಯಾಡ್ಮಿಂಟನ್ ತರಬೇತಿ ಮತ್ತು ಮುಂದಿನ ದಿನ ಟೆನ್ನಿಸ್ ತರಬೇತಿ ನೀಡುವ ದೃಷ್ಟಿಕೋನ ಮತ್ತು ಸಾಧಕರಿಗೆ ಗೌರವ ಸದಸ್ಯತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
-ಡಾ.ದೀಪಕ್ ರೈ, ಅಧ್ಯಕ್ಷರು ದಿ ಪುತ್ತೂರು ಕ್ಲಬ್