ರೋಟರಿ ಸಮಾಜಮುಖಿ ಕಾರ್ಯಗಳು ವಿಶ್ವವ್ಯಾಪಿಯಾಗಿವೆ-ವಿಕ್ರಂ ದತ್ತ
ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದ ಅಭಿವೃದ್ಧಿಗೆ ರೊಟೇರಿಯನ್ಸ್‌ಗಳ ಮೂಲಕ ಅನೇಕ ಕೊಡುಗೆಗಳನ್ನು ಸಾದರಪಡಿಸಿದ್ದು ಜಗಜ್ಜಾಹೀರವಾಗಿದೆ. ಸಮಾಜಕ್ಕೆ ತನ್ನಿಂದ ಏನು ಕೊಡುಗೆ ಮುಖ್ಯವಾಗಿದೆ ಹೊರತು ಸಮಾಜದಿಂದ ತನಗೆ ಏನು ಸಿಕ್ಕಿದೆ ಎಂಬುದು ಮುಖ್ಯವಲ್ಲ. ಆದ್ದರಿಂದ ರೋಟರಿ ಸಮಾಜಮುಖಿ ಕಾರ್ಯಗಳು ವಿಶ್ವವ್ಯಾಪಿಯಾಗಿ ಪರಿಣಮಿಸಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ಫೆ.11 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್‌ರವರ ಅಧಿಕೃತ ಭೇಟಿ ಸಂದರ್ಭ ಅವರು ಕ್ಲಬ್‌ನ ವಿವಿಧ ಸಾಮಾಜಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಕುಟುಂಬದ ಓಳಿತಿಗಾಗಿ ಆಸ್ತಿ ಮಾಡುವುದರ ಜೊತೆಗೆ ಸಮಾಜದ ಒಳಿತಿಗಾಗಿ, ಸಮಾಜವನ್ನು ಪೋಷಿಸುವ ಸಲುವಾಗಿ ತಮ್ಮ ಕೊಡುಗೆಯ ಮೂಲಕ ಸಮಾಜವನ್ನು ಆಸ್ತಿಯನ್ನಾಗಿಸಬೇಕು ಎಂದರು.
![](https://puttur.suddinews.com/wp-content/uploads/2025/02/IMG_20250212_152238.jpg)
ರೋಟರಿಯಲ್ಲಿ ಮೈಗೂಡಿಸಿಕೊಂಡರೆ ರೋಟರಿ ಏನೆಂಬುದು ತಿಳಿಯುತ್ತದೆ-ಜಯರಾಮ್ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಜಯರಾಮ್ ರೈಯವರು ಡಾ.ಹರಿಕೃಷ್ಷ ಪಾಣಾಜೆರವರ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಸನ್ಯಾಸಿಯಾಗಲಿ, ಶಿಕ್ಷಕನಾಗಲಿ, ಸೈನಿಕನಾಗಲಿ ಅವರಲ್ಲಿ ಕೆಲ ಹೊತ್ತು ಮಾತನಾಡಿದಾಗ ನಮಗೆ ಅವರಂತೆ ಆಗುವಂತೆ ಭಾಸವಾಗುತ್ತದೆ. ಹಾಗೆಯೇ ರೋಟರಿಯಲ್ಲಿ ನಾವು ತಮ್ಮನ್ನು ತಾವು ಮೈಗೂಡಿಸಿಕೊಂಡಾಗ ರೋಟರಿ ಏನೆಂಬುದು ತಿಳಿಯುತ್ತದೆ. ನಾನು ರೋಟರಿ ವಿಟ್ಲ ಕ್ಲಬ್ ಸದಸ್ಯ. ವಿಟ್ಲ ಕ್ಲಬ್ ಅನ್ನು ಇದೇ ರೋಟರಿ ಸಿಟಿ ಪ್ರಾಯೋಜಿಸಿದ್ದು ನನಗೆ ಇದು ತರವಾಡು ಎನಿಸಿದೆ ಎಂದರು.
ರೋಟರಿ ಸಿಟಿ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ-ಗ್ರೇಸಿ ಗೊನ್ಸಾಲ್ವಿಸ್:
ರೋಟರಿ ವಲಯ ಸೇನಾನಿ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ನಾವು ನಮ್ಮ ಕುಟುಂಬದಲ್ಲಿ ಹೇಗೆ ಹಬ್ಬ ಹರಿದಿನಗಳನ್ನು ಯಶಸ್ವಿಯಾಗಿ ಆಚರಿಸುತ್ತೇವೆಯೋ ಹಾಗೆಯೇ ರೋಟರಿ ಕುಟುಂಬದಲ್ಲಿ ಜಾತಿ, ಧರ್ಮ ಮರೆತು ಹಬ್ಬದ ಆಚರಣೆಯಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಜಿಲ್ಲಾ ಕಾರ್ಯಕ್ರಮವೆನಿಸಿದ ರಸ್ತೆ ಸುರಕ್ಷತಾ ಜಾಗೃತಿಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಬೇಕಾಗಿದೆ. ರೋಟರಿ ಸಿಟಿ ಕ್ಲಬ್ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸದಸ್ಯರ ಸಹಕಾರದೊಂದಿಗೆ ಕ್ಲಬ್ ಮುನ್ನೆಡೆಸಿದ ಸಂತೋಷವಿದೆ-ಮೊಹಮದ್ ಸಾಹೇಬ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್‌ರವರು ಸ್ವಾಗತಿಸಿ, ಮಾತನಾಡಿ, ರೋಟರಿ ಭೀಷ್ಮ ಕೆ.ಆರ್ ಶೆಣೈರವರಿಗೆ ನಾನು ಅಧ್ಯಕ್ಷನಾಗಬೇಕೆಂದು ಕೆಲವು ವರ್ಷಗಳ ಹಿಂದೆ ಹೇಳಿದ್ದರು. ಅವರ ಕನಸನ್ನು ನಾನು ಪೂರೈಸಿದೆ ಮಾತ್ರವಲ್ಲ ಕ್ಲಬ್ ಅಧ್ಯಕ್ಷನಾಗಿ ಕ್ಲಬ್ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕ್ಲಬ್ ಮುನ್ನೆಡೆಸಿದ ಸಂತೋಷವಿದೆ ಎಂದರು.
ಅಭಿನಂದನೆ:
ರಾಷ್ಟ್ರಮಟ್ಟದ ಹೈಜಂಪ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈಯ್ದ ಫಿಲೋಮಿನಾ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಯಶ್ವಿನ್‌ರವರಿಗೆ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಸಾಹೇಬ್ ಪ್ರಾಯೋಜಕತ್ವದಲ್ಲಿ ರೂ.5 ಸಾವಿರ ಮೊತ್ತದ ಆರ್ಥಿಕ ನೆರವನ್ನು ಯೂತ್ ಸರ್ವಿಸ್‌ನಡಿಯಲ್ಲಿ ಜಿಲ್ಲಾ ಗವರ್ನರ್‌ರವರು ಯಶ್ವಿನ್‌ರವರಿಗೆ ಹಸ್ತಾಂತರಿಸಿದರು.
ಪಿ.ಎಚ್.ಎಫ್ ಗೌರವ;
ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಗಳಿಸಿದ ಕಾರ್ಯದರ್ಶಿ ರಾಮಚಂದ್ರ ಬನ್ನೂರು, ಡಾ.ಹರಿಕೃಷ್ಣ ಪಾಣಾಜೆ, ಜೋನ್ ಕುಟಿನ್ಹಾ, ಸುರೇಂದ್ರ ಕಿಣಿ, ಡಾ.ಶಶಿಧರ್ ಕಜೆ, ಲಕ್ಷ್ಮೀಕಾಂತ್ ಆಚಾರ್, ಜಯಕುಮಾರ್ ರೈ ಎಂ.ಆರ್‌ರವರಿಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೂ ನೀಡಿ ಗೌರವಿಸಿದರು. ಅಲ್ಲದೆ ಕ್ಲಬ್ ಸದಸ್ಯರಿಂದ ಶೇ.ನೂರು ದೇಣಿಗೆ ನೀಡುವ ಭರವಸೆಯನ್ನು ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ನಟೇಶ್ ಉಡುಪರವರು ಸಭೆಗೆ ನೀಡಿ ದೇಣಿಗೆ ಚೆಕ್ ಅನ್ನು ಜಿಲ್ಲಾ ಗವರ್ನರ್‌ರವರಿಗೆ ಹಸ್ತಾಂತರಿಸಿದರು.
ಸೇವಾ ಕೊಡುಗೆಗಳು:
ಕಮ್ಯೂನಿಟಿ ಸರ್ವಿಸ್ ವತಿಯಿಂದ ಸಂಪ್ಯ ಅಕ್ಷಯ ಕಾಲೇಜಿಗೆ ರೋಟರಿ ಭೀಷ್ಮ ಕೆ.ಆರ್. ಶೆಣೈರವರ ರೂ.15 ಸಾವಿರ ಪ್ರಾಯೋಜಕತ್ವದಲ್ಲಿ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್, ಹಳೇನೇರಂಕಿ ಸರಕಾರಿ ಶಾಲೆಯ ಕಮ್ಯೂನಿಟಿ ಸಭಾಂಗಣಕ್ಕೆ ಕ್ಲಬ್ ಕಾರ್ಯದರ್ಶಿ ರಾಮಚಂದ್ರ ಬನ್ನೂರುರವರ ರೂ.20 ಸಾವಿರ ಪ್ರಾಯೋಜಕತ್ವದಲ್ಲಿ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಡಿಜಿ ಕಾರ್ಯಕ್ರಮ:
ಬೆಳಿಗ್ಗೆ ವಿವೇಕಾನಂದ ಕಾಲೇಜ್ ಕ್ರಾಸ್‌ನಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ರೋಟರಿ ಸಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿದ ಬಳಿಕ ವಿವೇಕಾನಂದ ಕಾಲೇಜು ಸಮೀಪದ ನಿವೇದಿತಾ ಶಿಶು ಮಂದಿರದಲ್ಲಿ ಆಟದ ಸಲಕರಣೆಗಳ ಉದ್ಘಾಟನೆ, ಪರ್ಲಡ್ಕ ಬೈಪಾಸ್ ಜಂಕ್ಷನ್‌ನಲ್ಲಿನ ಬಸ್ ತಂಗುದಾಣದ ಉದ್ಘಾಟನೆ, ಮೌಂಟನ್ ವ್ಯೂ ಶಾಲೆಯ ಗ್ರಂಥಾಲಯದ ಉದ್ಘಾಟನೆ, ಮುಂಡೂರು ಬಳಿಯ ಬಸ್ಸು ತಂಗುದಾಣದ ಉದ್ಘಾಟನೆ, ಮುಂಡೂರು ಎಸ್.ಡಿ.ಪಿ ರೆಮಿಡೀಸ್‌ಗೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನಲ್ಲಿ ಜನ್ಮದಿನ ಆಚರಿಸಿದ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸಿದ ಸದಸ್ಯರಿಗೆ ಹೂ ನೀಡಿ ಅಭಿನಂದಿಸಲಾಯಿತು. ಕ್ಲಬ್ ನಿಯೋಜಿತ ಅಧ್ಯಕ್ಷ ಉಲ್ಲಾಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಪ್ರೇಮ್ ಕುಮಾರ್ ಪ್ರಾರ್ಥಿಸಿದರು. ಜಯಕುಮಾರ್ ರೈ ಎಂ.ಆರ್, ಜೋನ್ ಕುಟಿನ್ಹಾ, ಲಾರೆನ್ಸ್ ಗೊನ್ಸಾಲ್ವಿಸ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರೋಟರಿ ಸಿಟಿ ಕಾರ್ಯದರ್ಶಿ ರಾಮಚಂದ್ರ ಬನ್ನೂರು ವರದಿ ಮಂಡಿಸಿ, ವಂದಿಸಿದರು. ಜಿಲ್ಲಾ ಗವರ್ನರ್‌ರವರ ಪರಿಚಯವನ್ನು ಶ್ರೀಮತಿ ಲೀನಾ ಪಾಯಿಸ್, ಸಮರ್ಥ ಅವಾರ್ಡ್ ವಿಜೇತರ ಪರಿಚಯವನ್ನು ನ್ಯಾಯವಾದಿ ಮಹೇಶ್ ಕಜೆ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಧರ್ಣಪ್ಪ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಶ್ರೀಮತಿ ಸ್ವಾತಿ ಮಲ್ಲಾರ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪ್ರಜ್ವಲ್ ರೈ ಸೊರಕೆ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ನಟೇಶ್ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಗುರುರಾಜ್ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಧರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.
‘ಸಮರ್ಥ’ ಪ್ರಶಸ್ತಿ ಪ್ರದಾನ..
ಪುತ್ತೂರಿನಲ್ಲಿ ಜನಿಸಿ, ಶಿಕ್ಷಣ ಪಡೆದು, ಉದ್ಯಮವನ್ನು ಸ್ಥಾಪಿಸಿ ಬಳಿಕ ವಿದೇಶದಲ್ಲಿ ಉದ್ಯಮವನ್ನು ಮುಂದುವರೆಸಿ ಓರ್ವ ಯಶಸ್ವಿ ಉದ್ಯಮಿಯಾಗಿ ಪ್ರಸಿದ್ಧಿ ಹೊಂದಿದ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರನ್ನು ಗುರುತಿಸಿ ಅವರಿಗೆ ‘ಸಮರ್ಥ’ ಅವಾರ್ಡ್ ಪ್ರದಾನ ಮಾಡಲಾಯಿತು. ಮೈಕೆಲ್ ಡಿ’ಸೋಜರವರು ತಮ್ಮ ಉದ್ಯಮ ಪಯಣದಲ್ಲಿ ಸಾವಿರಾರು ಅರ್ಹ ಫಲಾನುಭವಿಗಳ ಶಿಕ್ಷಣಕ್ಕಾಗಿ, ಮನೆ ನಿರ್ಮಾಣ, ಶಿಕ್ಷಣ ಸಂಸ್ಥೆಗಳ, ಆಸ್ಪತ್ರೆಗಳ, ಆಶ್ರಮಗಳ ಅಭಿವೃದ್ಧಿಗೆ ಧನಸಹಾಯದ ಜೊತೆಗೆ ಅವರು ಮಾಡುವ ಸೇವೆಗೆ ರಚನಾ ಪ್ರಶಸ್ತಿ, ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಸಂಘ ಶಾರ್ಜಾ ಮಯೂರ ಅವಾರ್ಡ್, ದಾಯ್ಜಿ ದುಬಾಯಿ ಸಮಾಜರತ್ನ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ವೃತ್ತಿಯೊಂದಿಗೆ ಅನನ್ಯವಾದ ಅನುಕರಣೀಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ ರೋಟರಿ ಸದಸ್ಯರಲ್ಲದ ವ್ಯಕ್ತಿಗೆ ಕಳೆದ 12 ವರ್ಷಗಳಿಂದ ವರ್ಷಂಪ್ರತಿ ರೋಟರಿ ಸಿಟಿಯು ವೊಕೇಶನಲ್ ಎಕ್ಸೆಲೆನ್ಸ್ ‘ಸಮರ್ಥ’ ಈ ಅವಾರ್ಡ್‌ನ್ನು ನೀಡುತ್ತಾ ಬಂದಿದೆ.
ರೂ.50 ಸಾವಿರ ದೇಣಿಗೆ..
ಜೀವನದ ಪಯಣದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ನಿಸ್ವಾರ್ಥ ಸೇವೆ, ಪ್ರಯತ್ನವಿದ್ದರೆ ಯಶಸ್ಸು ತನ್ನದಾಗುವುದರ ಜೊತೆಗೆ ರಿಸ್ಕ್ ಅನ್ನು ತೆಗೆದುಕೊಂಡಾಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನನ್ನ ಪಯಣದಲ್ಲೂ ಏಳು-ಬೀಳನ್ನು ಕಂಡಿದ್ದೇನೆ. ನನ್ನ ತಾಯಿ ನಿರಾಶರಾಗಬೇಡ, ಧೈರ್ಯದಿಂದ ಮುನ್ನುಗ್ಗು ಎಂಬ ಆತ್ಮಸ್ಥೈರ್ಯವನ್ನು ತುಂಬಿಸಿದಾಗ ನನಗೆ ಸಾಧನೆ ಮಾಡಲು ಸಾಧ್ಯವಾಗಿದೆ. ನಾವು ಸಮಾಜದಿಂದ ಗಳಿಸಿದ ಲಾಭಾಂಶವು ಅದು ಸೇವೆಯ ಮೂಲಕ ಸಮಾಜದಲ್ಲಿ ಇಂಪ್ಯಾಕ್ಟ್ ಆಗಬೇಕು. ನನ್ನ ಹುಟ್ಟೂರು ಪುತ್ತೂರನ್ನು ಎಂದಿಗೂ ಮರೆಯುವುದಿಲ್ಲ. ರೋಟರಿ ಉದ್ಧೇಶ ಸೇವೆಯಾಗಿದ್ದು ಈ ಸೇವೆಗೆ ನಾನು ರೂ.50 ಸಾವಿರ ದೇಣಿಗೆ ನೀಡುತ್ತಿದ್ದೇನೆ.
-ಮೈಕಲ್ ಡಿ’ಸೋಜ, ಅನಿವಾಸಿ ಉದ್ಯಮಿ ಹಾಗೂ ಸಮರ್ಥ ಪ್ರಶಸ್ತಿ ಪುರಸ್ಕೃತರು
ಸನ್ಮಾನ..
ತಂದೆಯ ಬೈಕ್ ಕ್ರೇಝಿ ಮತ್ತು ತಾಯಿಯ ಡ್ರೈವಿಂಗ್‌ನಿಂದ ಪ್ರೇರಣೆಗೊಂಡು ಬೈಕ್ ರೈಡಿಂಗ್‌ನ್ನು ಬಾಲ್ಯದಿಂದಲೇ ಆರಂಭಿಸಿ ಚೆನ್ನೈ ಟ್ರ್ಯಾಕ್ ರೇಸಿಂಗ್, ರಾಷ್ಟ್ರೀಯ ಮಟ್ಟದ ಟಿವಿಎಸ್ ರೇಸಿಂಗ್ ಭಾಗವಹಿಸಿ, ಕಾರ್ಗಿಲ್‌ನ್ನು ಕ್ರಮಿಸಿದ್ದು ಜೊತೆಗೆ ತನ್ನದೇ ಥಾರ್ ಜೀಪಿನಲ್ಲಿ ಮಂಗಳೂರಿನಿಂದ ಕನ್ಯಾಕುಮಾರಿ, ಕನ್ಯಾಕುಮಾರಿಯಿಂದ ಮಂಗಳೂರಿಗೆ 1800ಕಿ.ಮೀಗಳನ್ನು 39 ಗಂಟೆಗಳಲ್ಲಿ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಗೊಂಡ ನ್ಯಾಯವಾದಿ ಪುರುಷೋತ್ತಮ ಹಾಗೂ ಉಷಾ ದಂಪತಿ ಪುತ್ರಿ ವೃಷ್ಠಿ ಮಲ್ಕಾಜಿರವರನ್ನು ಮತ್ತು ವಿಟಿಯುನ ಎಂಬಿಎ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಗಳಿಸಿದ ಬಾಲಕೃಷ್ಣ ಪೈ ಹಾಗೂ ರಾಧಿಕಾ ಪೈ ದಂಪತಿ ಪುತ್ರಿ ಸ್ನೇಹ ಪೈ ಕೆ, ರಾಜ್‌ಕೋಟ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆ, ಬೆಂಗಳೂರು, ವಿಜಯವಾಡದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಅನೇಕ ಪದಕಗಳನ್ನು ಪಡೆದ ಅಂಬಿಕಾ ಪಿಯು ಕಾಲೇಜಿನ ವಿದ್ಯಾರ್ಥಿನಿ ನರಸಿಂಹ ಶೆಣೈ ಹಾಗೂ ಶ್ರೀಲಕ್ಷ್ಮೀ ಶೆಣೈ ದಂಪತಿ ಪುತ್ರಿ ಪ್ರತೀಕ್ಷಾ ಎನ್.ಶೆಣೈರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.