ನೆಲ್ಯಾಡಿ: ಕರ್ನಾಟಕ ಸರಕಾರ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಬೆಂಗಳೂರು ದಕ್ಷಿಣ ಜಿಲ್ಲೆ ಇವರ ವತಿಯಿಂದ ಫೆ.8 ಮತ್ತು 9ರಂದು ಬೆಂಗಳೂರಿನ ಚುಂಚನಗಟ್ಟದಲ್ಲಿ ನಡೆದ ರಾಜ್ಯಮಟ್ಟದ 17 ಹಾಗೂ 14ರ ವಯೋಮಾನದ ಬಾಲಕ, ಬಾಲಕಿಯರ ರೋಪ್ ಸ್ಕಿಪಿಂಗ್/ಜಂಪ್ರೋಪ್ ಸ್ಪರ್ಧೆಯಲ್ಲಿ ಉಜಿರೆ ಎಸ್ಡಿಎಂ ಎಜುಕೇಶನಲ್ ಸೊಸೈಟಿ ಆಡಳಿತಕ್ಕೆ ಒಳಪಟ್ಟ ಕಾಂಚನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಚರಣ್ ಎಸ್. ಅವರು ಚಿನ್ನದ ಪದಕ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಕಾಂಚನ ನಿವಾಸಿ ಶಂಕರನಾರಾಯಣ ನಾಯಕ್ ಹಾಗೂ ಶಾಂತ ದಂಪತಿ ಪುತ್ರ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅದ್ವಿತ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈತ ಡೆಂಬಲೆ ನಿವಾಸಿ ಬಾಬಿ ಪೂಜಾರಿ ಹಾಗೂ ಹರ್ಷಿಣಿ ದಂಪತಿಯ ಪುತ್ರ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇವರಿಗೆ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್ ಮಯ್ಯ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಗೌಡ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಹೇಮೋಧರ ಅವರು ತರಬೇತಿ ನೀಡಿದ್ದರು.