ಪುತ್ತೂರು: ಹೆರಿಗೆ ನಂತರ ಕನಿಷ್ಟ 48 ಘಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾದ ಬಾಣಂತಿಯರು ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾದ ಅಥವಾ ಅನಾರೋಗ್ಯ ಪೀಡಿತ ಶಿಶುಗಳನ್ನು ಕರೆದೊಯ್ಯಲು ನೆರವಾಗಲೆಂದು ಸರಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯವಾಗಿದ್ದ ‘ನಗು-ಮಗು’ ಆಂಬ್ಯುಲೆನ್ಸ್ ಕಳೆದ 20 ದಿನಗಳಿಂದ ಚಾಲನೆ ಬಂದ್ ಮಾಡಿ ಮೂಲೆ ಸೇರಿದೆ. ರಾಜ್ಯದ 250 ಸಾರ್ವಜನಿಕ ಸರಕಾರಿ ಆಸ್ಪತ್ರೆಗಳ ಸಹಿತ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಆಂಬ್ಯುಲೆನ್ಸ್ ಗಳಿಗೆ ಇನ್ಶೂರೆನ್ಸ್ ಕಟ್ಟದ ಕಾರಣ ಇದೀಗ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೂ ನಗು-ಮಗು ನಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
ನಗು-ಮಗು ಆಂಬ್ಯುಲೆನ್ಸ್ ಗೆ ವಾರ್ಷಿಕ ಸುಮಾರು ರೂ.10 ಸಾವಿರ ಇನ್ಶೂರೆನ್ಸ್ ಪಾವತಿ ಮಾಡಬೇಕಾಗಿದೆ. ಇದನ್ನು ಭರಿಸುವಂತೆ ಸಾರ್ವಜನಿಕ ಸರಕಾರಿ ಆಸ್ಪತ್ರೆಗಳಿಂದ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಇಲಾಖೆ ಈ ಅನುದಾನ ನೀಡಿಲ್ಲ. ಇದರಿಂದಾಗಿ ಇನ್ಶೂರೆನ್ಸ್ ಅವಧಿ ಮುಗಿದಿರುವುದರಿಂದ ಇದೀಗ ನಗು-ಮಗು ಆಂಬ್ಯುಲೆನ್ಸ್ ಓಡಾಟವನ್ನೇ ಸ್ಥಗಿತಗೊಳಿಸಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬೇರೆ ಆಂಬ್ಯುಲೆನ್ಸ್ ಗಳಿದ್ದರೂ ನಗು-ಮಗುವಿಗೆ ಪ್ರತ್ಯೇಕವಾದ ಸ್ಥಾನವೊಂದಿದೆ. ವಿಶೇಷವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ನಂತರ ಮಗು ಮತ್ತು ಬಾಣಂತಿ ತಾಯಿಯನ್ನು ಅವರ ಮನೆಗೆ ಕ್ಷೇಮವಾಗಿ ತಲುಪಿಸುವ ಜವಾಬ್ದಾರಿ ಈ ಆಂಬ್ಯುಲೆನ್ಸ್ ನದ್ದಾಗಿದೆ. ಜೊತೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾದ ಶಿಶುಗಳಿಗೂ ಇದರ ಸೌಲಭ್ಯವಿದೆ. ಇದೀಗ ಈ ಸೌಲಭ್ಯದಿಂದ ತಾಯಿ-ಮಗು ವಂಚಿತರಾಗುತ್ತಿದ್ದಾರೆ.
ಸ್ಥಳೀಯವಾಗಿ ಕಟ್ಟುವಂತಿಲ್ಲ:
ಆಂಬ್ಯುಲೆನ್ಸ್ ಗಳಿಗೆ ಇನ್ಶೂರೆನ್ಸ್ ಕಟ್ಟಲು ಆರೋಗ್ಯ ವಿಕಾಸ ಸೌಧದ ಕಚೇರಿ ಸಾರ್ವಜನಿಕ ಆಸ್ಪತ್ರೆಗೆ ಹಣ ನೀಡಬೇಕು. ಈ ಹಣ ಆಸ್ಪತ್ರೆಯ ಡ್ರಾಯಿಂಗ್ ಆಫೀಸರ್ ಎಕೌಂಟಿಗೆ ಹಾಕಬೇಕು. ಬಳಿಕ ಇನ್ಶೂರೆನ್ಸ್ ಪಾವತಿ ಮಾಡುವ ಕೆಲಸ ಮಾಡಲಾಗುತ್ತದೆ. ಖಜಾನೆ-2 ಅಡಿಯಲ್ಲಿಯೇ ಈ ಹಣ ಪಾವತಿ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಹಣ ಹೊಂದಾಣಿಕೆ ಮಾಡಿಕೊಂಡು ಇನ್ಶೂರೆನ್ಸ್ ಕಟ್ಟುವ ಹಾಗಿಲ್ಲ. ಆದರೆ ಆರೋಗ್ಯ ವಿಕಾಸ ಸೌಧದಿಂದ ಇನ್ನೂ ಹಣ ಬಾರದೇ ಇರುವುದರಿಂದ ಇನ್ಶೂರೆನ್ಸ್ ಪಾವತಿಸಲಾಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.
ತಕ್ಷಣ ವ್ಯವಸ್ಥೆಗೆ ಕ್ರಮ
ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಈಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜತೆಗೆ ಚರ್ಚೆ ನಡೆಸಿ ತಕ್ಷಣ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ. ಸರಕಾರ ಹಣ ಪಾವತಿಸದೇ ಇರಲು ತಾಂತ್ರಿಕ ಸಮಸ್ಯೆ ಇದೆಯಾ ಎಂದು ವಿಚಾರಿಸುತ್ತೇನೆ. ಗುತ್ತಿಗೆದಾರರ ಬದಲಾವಣೆಯ ಕಾರಣವೇ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಏನೇ ಇದ್ದರೂ ‘ನಗು-ಮಗು’ ಆಂಬ್ಯುಲೆನ್ಸ್ ಚಾಲನೆಗೆ ಬೇಕಾದ ವ್ಯವಸ್ಥೆಯನ್ನು ಸರಕಾರದಿಂದ ಮಾಡಿಸುವುದು ನನ್ನ ಜವಾಬ್ದಾರಿ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆ ಮತ್ತು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಗಳಿವೆ. ಯಾವುದೇ ಜನರಿಗೆ ಸೌಲಭ್ಯದ ಕೊರತೆಯಾಗದಂತೆ ಕ್ರಮ ವಹಿಸಲು ಸೂಚಿಸುತ್ತೇನೆ.
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು