ಪುತ್ತೂರು: ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಮಹಾನ್ ಪುರುಷ ಸಂತ ಸೇವಾಲಾಲ್ ಅವರು ಸಮಾಜದಲ್ಲಿ ಒಗ್ಗಟ್ಟಿನ ಬದುಕಿನ ಪಾಠ ಮಾಡಿದ್ದಾರೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದರು.
ಪುತ್ತೂರು ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ಫೆ.15ರಂದು ನಡೆದ ಸಂತ ಸೇವಾಲಾಲ್ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾತಿಪದ್ಧತಿಯಂತಹ ದುಷ್ಟ ವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸಿದ ದಾರ್ಶನಿಕರು ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡಿದ್ದಾರೆ. ಅವರ ಮಾರ್ಗದರ್ಶನ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಅವರು ಉಪನ್ಯಾಸ ನೀಡಿದರು. ಹರಪ್ಪ ಮೊಹೆಂಜೊದಾರ್ ಕಾಲದಲ್ಲೇ ಬಂಜಾರ ಸಮುದಾಯದವರ ಕುರಿತು ಇತಿಹಾಸ ಇದೆ. ವ್ಯಾಪಾರವನ್ನು ಪ್ರಧಾನ ವೃತ್ತಿಯಾಗಿಸಿಕೊಂಡಿದ್ದ ಈ ಸಮುದಾಯದ ಧೀಮಂತ ವ್ಯಕ್ತಿ ಸಂತ ಸೇವಾಲಾಲ್. ನಿಜಾಮರ ಅವಧಿಯಲ್ಲಿ ಕಾಲಾರ ರೋಗವನ್ನು ದೂರ ಮಾಡಿದ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಧರ್ಮ ಮತ್ತು ನೀತಿ ಒಂದೇ ಆಗಿರಬೇಕು. ಹಾಗೆಯೇ ಧರ್ಮಗಳ ಮಧ್ಯೆ ಸಮಾನತೆ ಇರಬೇಕು ಎಂದು ಸಾರಿದವರು ಸಂತ ಸೇವಾಲಾಲರು ಎಂದು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕರಾದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಕಂದಾಯ ಇಲಾಖೆಯ ರವಿಕುಮಾರ್, ಚೆನ್ನಪ್ಪ ಗೌಡ, ಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿಗಳು ಪಾಲ್ಗೊಂಡರು. ಕಂದಾಯ ಇಲಾಖೆಯ ದಯಾನಂದ್ ಸ್ವಾಗತಿಸಿ, ಉಪ ತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.