ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ, ಹಾಲು ಉತ್ಪಾದಕ ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ದಂಪತಿ ಫೆ. 16 ರಂದು ಪ್ರಯಾಗ, ಕಾಶಿ, ಅಯೋಧ್ಯೆ ತೀರ್ಥಯಾತ್ರೆ ಕೈಗೊಂಡಿದ್ದು, ದಂಪತಿಗೆ ಸನ್ಯಾಸಿಗುಡ್ಡೆ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ವಠಾರದಲ್ಲಿ ಶುಭ ಹಾರೈಕೆ ನಡೆಯಿತು.
ಶ್ರೀರಾಮ ಮಂದಿರ ಸನ್ಯಾಸಿಗುಡ್ಡೆ ಕೆದಂಬಾಡಿ ಇದರ ಮಾಜಿ ಅಧ್ಯಕ್ಷ ಅರಿಯಡ್ಕ ಕರುಣಾಕರ ರೈಯವರು ʻಕೃಷಿಕ ಕಡಮಜಲುರವರು ಕೃಷಿಗೆ ಪೂರಕವಾದ ಹೈನುಗಾರರಾಗಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ರಾಜಕೀಯ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತೀರ್ಥಯಾತ್ರೆ ಕೈಗೊಂಡಿರುವ ಅವರ ದುಡಿಮೆಯ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಡಾಳಗುತ್ತು ಮೋಹನ ಆಳ್ವರವರು ʻಅಜ್ಜ ಕಡಮಜಲುರವರು ದಾಂಪತ್ಯದ 45 ಮತ್ತು ಬದುಕಿನ 75 ರ ಅಮೃತ ವರ್ಷಾಚರಣೆ ಪೂರೈಸಿದ ಸಂದರ್ಭದಲ್ಲಿಯೇ ತೀರ್ಥಯಾತ್ರೆ ಕೈಗೊಳ್ಳುವುದು ವಿಶಿಷ್ಟ ಮತ್ತು ವಿಶೇಷವಾಗಿದೆʼ ಎಂದರು. ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕೆದಂಬಾಡಿ ಶ್ರೀರಾಮ ಮಂದಿರದ ಅಧ್ಯಕ್ಷ ಬೆದ್ರುಮಾರ್ ಜೈಶಂಕರ ರೈರವರು ಸುಭಾಸ್ ರೈ ದಂಪತಿಯನ್ನು ಗೌರವಿಸಿ ತೀರ್ಥಯಾತ್ರೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸುಜಾತ ಯಶೋಧರ ಚೌಟ, ಯಶೋಧರ ಚೌಟ ಪಟ್ಟೆತ್ತಡ್ಕ, ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ, ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಕರುಣಾಕರ ರೈ ಕೋರಂಗ, ಇದ್ಯಪ್ಪೆ ನೇಮಣ್ಣ ಗೌಡ, ಸದಾಶಿವ ರೈ ಪಯಂದೂರು, ಅಮಿತಾ ವಿಜಯ ಕುಮಾರ್ ರೈ ಮುಂಡಾಳಗುತ್ತು, ಸಂಘದ ಸಹಾಯಕಿ ಪುಷ್ಪ ಕೋಡಿಯಡ್ಕ, ಯತೀಶ್ ಕಾವು, ಇದ್ಯಪ್ಪೆ ಕೃಷ್ಣಕುಮಾರ್ ಗೌಡ, ರಾಜೀವಿ ವಿ. ರೈ ಕೋರಂಗ, ಹನೀಫ್ ಇದ್ಪಾಡಿ, ವೆಂಕಟರಾಜ ಉಪಾಧ್ಯಾಯ ಪಟ್ಲಮೂಲೆ ಉಪಸ್ಥಿತರಿದ್ದರು.
ಇದೇ ವೇಳೆ ಕಡಮಜಲು ಸುಭಾಸ್ ರೈಯವರು ತಾನು ಬರೆದು ಇತ್ತೀಚೆಗೆ ಬಿಡುಗಡೆಗೊಳಿಸಿರುವ ʻಪ್ರೀತಿಯಿಂದ ಪ್ರೀತಿಗೆʼ ಕೃತಿಯನ್ನು ಹಾಲು ಉತ್ಪಾದಕರಿಗೆ ʻಪ್ರೀತಿಯ ಓದುʼ ಬೆಲೆಗೆ ನೀಡಿ, ತಾನು ಬಾಜಪ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ದಂಪತಿಯೊಂದಿಗೆ ಕಾಶೀ ಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಹೇಳಿ ಶುಭ ಹಾರೈಸಿದವರಿಗೆ ಕೃತಜ್ಞತೆ ಸಲ್ಲಿಸಿದರು.