ದೇವಸ್ಥಾನದ ಜಾಗದಲ್ಲಿ ತೆಂಗಿನ ಮರ ತೆರವು ವೇಳೆ ಮರ ತುಂಡಾಗಿ ಕಾರ್ಮಿಕರೊಬ್ಬರಿಗೆ ಗಾಯ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದ ವೇಳೆ ತೆಂಗಿನ ಮರ ತೆರವು ಮಾಡುವಾಗ ಆಕಸ್ಮಿಕವಾಗಿ ಮರದ ತುಂಡೊಂದು ತಾಗಿ ದೇವಳದ ಕಾರ್ಮಿಕ ರವಿ ಎಂಬವರು ಗಾಯಗೊಂಡಿರುವ ಘಟನೆ ಫೆ.17 ರಂದು ನಡೆದ ಬಗ್ಗೆ ವರದಿಯಾಗಿದೆ.

ದೇವಳದ ಪುಷ್ಕರಣಿಯ ಬಳಿಯಲ್ಲಿ ತೆಂಗಿನ ಮರವನ್ನು ತೆರವು ಮಾಡುವ ಸಂದರ್ಭ ದೇವಳದ ನಿತ್ಯ ಕಾರ್ಮಿಕರು ಮರದ ತುಂಡನ್ನು ಕೊಂಡೊಯ್ಯಲು ಬಂದಾಗ ಮರ ತುಂಡಾಗಿ ಪಕ್ಕದಲ್ಲಿದ್ದ ದೇವಳದ ನಿತ್ಯ ಕಾರ್ಮಿಕ ರವಿ ಎಂಬವರ ಮುಖಕ್ಕೆ ತಾಗಿದೆ. ಗಾಯಗೊಂಡ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಗಾಯಾಳು ಕಾರ್ಮಿಕ ರವಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸೂಕ್ತ ಚಿಕಿತ್ಸೆ ‌:

ದೇವಳದ ನಿತ್ಯ ಕಾರ್ಮಿಕ ರವಿ ಅವರ ಮುಖಕ್ಕೆ ಗಾಯ ಆಗಿರುವುದನ್ನು ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಮತ್ತು ಡಾ.ಸಚಿನ್ ಅವರು ನೋಡಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನದಲ್ಲಿ ರವಿ ಅವರು ಚೇತರಿಕೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ರವಿ ಅವರ ಆಸ್ಪತ್ರೆಯ ವೈದ್ಯಕೀಯ ಖರ್ಚು ವೆಚ್ಚವನ್ನು ನಾವು ಭರಿಸಲಿದ್ದೇವೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here