ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಡಿಯಲ್ಲಿ ನೆಲ್ಯಾಡಿಯ ಸಿರಿ ಘಟಕದಲ್ಲಿ ಐದು ದಿನ ನಡೆದ ಎಂಬ್ರಾಯಿಡರಿ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ಕೌಕ್ರಡಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸೋಮನಾಥ ಕೆ., ಅಭ್ಯರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಕೌಶಲ್ಯ ಅಭಿವೃದ್ಧಿ ತರಬೇತಿಯಿಂದ ನಿಮ್ಮ ಜೀವನಕ್ಕೆ ವೃತ್ತಿಯಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ತಾಲೂಕಿನ ಯೋಜನಾಧಿಕಾರಿ ಮೇದಪ್ಪ ಗೌಡರವರು ಮಾತನಾಡಿ, ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಮೂಲಕ ಇದರ ಪ್ರಯೋಜನ ಪಡೆದು ಯಶಸ್ವಿಯಾಗಿ ಎಂದರು.
ತರಬೇತಿ ಶಿಕ್ಷಕಿ ಸೌಮ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ನಿವೇದಿತ ಹಾಗೂ ನವ್ಯ ಪ್ರಸಾದ್ ಅನಿಸಿಕೆ ಹೇಳಿದರು. ರಮ್ಯಾ ಹಾಗೂ ಭಾರತಿ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಹೇಮಾವತಿ ಸ್ವಾಗತಿಸಿ, ಚಂದ್ರಿಕಾ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಜಿ. ನಿರೂಪಿಸಿದರು.