ಬಜೆಟ್ ಅನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳುವುದು ಕಷ್ಟ : ಚಂದ್ರಕಾಂತ ಗೋರೆ
ಪುತ್ತೂರು: ಬಜೆಟ್ ವಿಶ್ಲೇಷಣೆ ಅನ್ನುವುದು ಅತ್ಯಂತ ಕಷ್ಟದ ಕೆಲಸ. ಬಜೆಟ್ ಅನ್ನು ಸರಿಯಾಗಿ ಅರ್ಥಮಾಡಿಕೊಂಡವರು ಎಂದು ಯಾರನ್ನೂ ಗುರುತಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆದಾಗ್ಯೂ ನಮ್ಮ ನಮ್ಮ ಆಸಕ್ತಿ, ಆಲೋಚನೆ ಹಾಗೂ ವ್ಯಾಪ್ತಿಗೆ ಅನುಗುಣವಾಗಿ ಅದನ್ನು ಭಾಗಶಃ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಕೇಂದ್ರ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಬಜೆಟ್ ವಿಶ್ಲೇಷಣೆ ಎಂಬುದು ಕಥೆಯಲ್ಲಿ ಓದಿದ ವ್ಯಕ್ತಿಯನ್ನು ಕಲ್ಪಿಸಿಕೊಂಡಂತೆ. ಆಡಳಿತ ಪಕ್ಷದವರಿಗೆ ವ್ಯಕ್ತಿಯ ಚಿತ್ರ ಸುಂದರವಾಗಿ ಕಂಡರೆ ವಿರೋಧ ಪಕ್ಷದವರಿಗೆ ಕುರೂಪಿಯಾಗಿ ಕಾಣಿಸುತ್ತದೆ. ಪ್ರಸ್ತುತ ವರ್ಷದ ಬಜೆಟ್‌ನಲ್ಲಿ ಮಿಕ್ಕೆಲ್ಲವುಗಳಿಗಿಂತಲೂ ಆದಾಯ ತೆರಿಗೆಯ ಮಿತಿಯನ್ನು 12 ಲಕ್ಷದ 25 ಸಾವಿರಕ್ಕೆ ಏರಿಸಿದ್ದೇ ದೊಡ್ಡ ಸುದ್ದಿಯಾಗಿ ಅನೇಕರ ಸಂತಸಕ್ಕೆ ಕಾರಣವಾಗಿದೆ ಎಂದರು.
ವಾಣಿಜ್ಯ ವಿದ್ಯಾರ್ಥಿಗಳಾದ ಪ್ರಿಯಾಲ್ ಆಳ್ವಾ, ಶ್ರೀದೇವಿ, ಆದಿತ್ಯ ಸುಬ್ರಹ್ಮಣ್ಯ, ಪ್ರದ್ಯುಮ್ನ, ಸಾಕೇತ್, ದೀಪಾ ಕೇಂದ್ರ ಬಜೆಟ್ ಅನ್ನು ವಿಶ್ಲೇಷಿಸಿದರು. ವಿದ್ಯಾರ್ಥಿಗಳಾದ ಸುಜನ ಸ್ವಾಗತಿಸಿ, ಶ್ರೀಲಕ್ಷಿ ವಂದಿಸಿದರು. ವಿದ್ಯಾರ್ಥಿ ಅನ್ವಿತ್ ಕಾರ್ಯಕ್ರಮ ನಿರ್ವಹಿಸಿದರು.
