ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಪೂರಕ : ಡಾ. ಕೆ.ಎಂ ಕೃಷ್ಣ ಭಟ್
ಪುತ್ತೂರು: ಕ್ರೀಡೆಯಿಂದ ಮಾನಸಿಕ ನೆಮ್ಮದಿ ಮತ್ತು ದೈಹಿಕ ಸ್ಥಿರತೆ ಉಂಟಾಗುತ್ತದೆ. ಸೋಲು ಗೆಲುವು ಎಂಬುದು ಕ್ರೀಡೆಯಲ್ಲಿ ಸಾಮಾನ್ಯ, ಇದು ನಮ್ಮ ಜೀವನಕ್ಕೆ ಪಾಠ ಕಲಿಸುತ್ತದೆ. ವೃತ್ತಿ ಜೀವನದಲ್ಲಿ ಹತ್ತಾರು ಜನ ನಮ್ಮನ್ನು ಗಮನಿಸುವಾಗ ನಮ್ಮಲ್ಲಿ ಕ್ಷಮತೆ ಬೇಕು, ಅದು ಕ್ರೀಡೆಯಿಂದ ಸಾಧ್ಯ. ಶೈಕ್ಷಣಿಕ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆ ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾತ್ರ ವಹಿಸುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ ಇಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ 2024-25 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಅಶೋಕ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿಯಾಗಿದೆ. ಇದು ಕ್ರೀಡೆಯಿಂದ ಸಾಧ್ಯ. ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಮುಖ್ಯವಲ್ಲ. ಭಾಗವಹಿಸುವ ಆ ಜೀವನೋತ್ಸಾಹವೇ ಮಹತ್ವವಾದದ್ದು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಕೆ ಎಂ ಕೃಷ್ಣ ಭಟ್ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಿರಣ್ ಎಸ್ ಎನ್ ಅವರಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕಾಲೇಜಿನ ಕ್ರೀಡಾಪಟು ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ಗೌತಮಿ.ಬಿ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಪಥ ಸಂಚನನದಲ್ಲಿ ವಿಜೇತರಾದ ದ್ವಿತೀಯ ಬಿ ಫಾರ್ಮ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ನಂತರ ವಿವಿಧ ಸ್ಪರ್ಧೆಗಳು ನಡೆದವು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಂ.ಪಿ ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕ ಮತ್ತು ಕ್ರೀಡಾ ಸಂಯೋಜಕ ಶಾಂತನು ಕಾಮತ್ ವಂದಿಸಿ, ದ್ವಿತೀಯ ಬಿ ಫಾರ್ಮ್ ವಿದ್ಯಾರ್ಥಿನಿರಾದ ಅನ್ವಿತಾ ಕೆ ಮತ್ತು ವಿಭಾ ಎ.ಎನ್ ನಿರ್ವಹಿಸಿದರು.