ಧರ್ಮಾಧಾರಿತ ಬದುಕು ನಮ್ಮದಾಗಬೇಕು : ಸಂಜೀವ ಮಠಂದೂರು
ಧರ್ಮವನ್ನು ಅರಿತು ಕೆಲಸ ಮಾಡಿದಾಗ ದೇವರ ಅನುಗ್ರಹ ಸಾಧ್ಯ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಸುಖ, ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ ಧರ್ಮಾಧಾರಿತ ಬದುಕು ನಮ್ಮದಾಗಬೇಕು ಆಗ ಮಾತ್ರ ಇವೆಲ್ಲವೂ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪರ್ಪುಂಜದ ಈ ವಠಾರದಲ್ಲಿ ಯುವಶಕ್ತಿ ಮತ್ತು ಸ್ತ್ರೀಶಕ್ತಿ ಒಂದಾಗಿ ಧರ್ಮದ ಕೆಲಸವನ್ನು ಮಾಡಿದೆ. ತುಳುನಾಡಿನ ಮೂಲ ಸಂಸ್ಕೃತಿಯಾಗಿರುವ ನಾಗಾರಾಧನೆ ಹಾಗೇ ದೈವರಾಧನೆಯ ಕೆಲಸ ನಡೆದಿದೆ. ಇಂತಹ ಧರ್ಮದ ಕೆಲಸದಲ್ಲಿ ಕೈ ಜೋಡಿಸಿದ ಕರಸೇವಕರನ್ನು ಗುರುತಿಸುವುದು ಎಂದರೆ ಅದು ಭಗವಂತನ ಆರಾಧನೆಗೆ ಸಮವಾಗಿದೆ. ಇಂತಹ ಕೆಲಸ ಇಲ್ಲಿ ನಡೆದಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಒಳಮೊಗ್ರು ಗ್ರಾಮದ ಪರ್ಪುಂಜ ಕೊೖಲತ್ತಡ್ಕದಲ್ಲಿರುವ ಶಿವಕೃಪಾ ಆಡಿಟೋರಿಯಂನ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗ ರಕ್ತೇಶ್ವರಿ ಮತ್ತು ಗುಳಿಗ ಸನ್ನಿಧಾನದಲ್ಲಿ ಫೆ.21 ರಂದು ನಡೆದ ಶ್ರೀ ನಾಗ ದೇವರ ಶಿಲಾ ಪ್ರತಿಷ್ಠೆ ಮತ್ತು ರಕ್ತೇಶ್ವರಿ, ಗುಳಿಗ ದೈವಗಳ ಬಿಂಬ ಪ್ರತಿಷ್ಠಾ ಕಾರ್ಯಕ್ರಮದ ಕೃತಜ್ಞತಾ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದೇವರಿಗಿಂತ ಮುಂಚೆ ಅನುಗ್ರಹ ಕೊಡುವವರು ದೈವಗಳು ಆಗಿದ್ದಾರೆ ಅದೇ ರೀತಿ ಈ ಮಣ್ಣಿನ ಆರಾಧನೆ ಎಂದರೆ ಅದು ನಾಗಾರಾಧನೆ ಆಗಿದೆ. ಇವೆರಡು ಕೂಡ ಪರ್ಪುಂಜದ ಈ ಮಣ್ಣಿನಲ್ಲಿ ಆರಾಧನೆಗೊಂಡಿರುವುದು ಒಂದು ಒಳ್ಳೆಯ ಕಾರ್ಯವಾಗಿದೆ ಎಂದ ಮಠಂದೂರುರವರು ಮುಂದಿನ ದಿನಗಳಲ್ಲಿ ಈ ಸನ್ನಿಧಾನದಲ್ಲಿ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಧರ್ಮವನ್ನು ಅರಿತು ಕಾರ್ಯವನ್ನು ಮಾಡಿದಾಗ ದೇವರ ಅನುಗ್ರಹ ಸಾಧ್ಯ: ತ್ರಿವೇಣಿ ಪಲ್ಲತ್ತಾರು
ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಹೊನ್ನಪ್ಪ ಗೌಡರವರು ಹಾಗೂ ಅವರ ಮಕ್ಕಳು ಕುಟುಂಬದವರು ಸೇರಿಕೊಂಡು ಊರಿನ ಜನರ ಸಹಕಾರ ಪಡೆದುಕೊಂಡು ಕೊೖಲತ್ತಡ್ಕದ ಈ ಮಣ್ಣಿನಲ್ಲಿ ಧರ್ಮದ ಕೆಲಸ ಮಾಡಿದ್ದಾರೆ. ಯಾರು ಧರ್ಮವನ್ನು ಅರಿತುಕೊಂಡು ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ಈ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯುವ ಎಲ್ಲಾ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ನಾಗನ ಸೇವೆಯೇ ಶ್ರೇಷ್ಠ ಸೇವೆಯಾಗಿದೆ: ಸಹಜ್ ರೈ ಬಳಜ್ಜ
ಯುವ ಉದ್ಯಮಿ, ವಿಜಯ ಸಾಮ್ರಾಟ್ ಸಂಘಟನೆಯ ಸ್ಥಾಪಕರಾಗಿರುವ ಸಹಜ್ ರೈ ಬಳಜ್ಜ ಮಾತನಾಡಿ, ಯುವಕರು ಮತ್ತು ಮಹಿಳೆಯರು ಸೇರಿಕೊಂಡರೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂಬುದಕ್ಕೆ ಪರ್ಪುಂಜದ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ನಾಗದೇವರ ಸೇವೆ ಮಾಡುವುದೆಂದರೆ ಅದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ. ನಾಗ ಈ ಮಣ್ಣಿನ ಮೂಲ ದೇವರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಣ್ಣಿನಲ್ಲಿ ಇನ್ನಷ್ಟು ಫಲವತ್ತಾತೆ ಬರಲಿ ಎಂದು ಹೇಳಿ ಶುಭ ಹಾರೈಸಿದ್ದಾರೆ.
ಕೃತಜ್ಞತೆ ಸಲ್ಲಿಸುವುದು ಪುಣ್ಯದ ಕೆಲಸವಾಗಿದೆ: ಪ್ರಕಾಶ್ಚಂದ್ರ ರೈ ಕೈಕಾರ
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ತುಳುನಾಡಿನಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ. ನಾಗನ ಆರಾಧನೆಯಿಂದ ಮಣ್ಣಿಗೆ ಬಂದಿರುವ ಸಕಲ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.ಇಂತಹ ಧರ್ಮದ ಕಾರ್ಯದಲ್ಲಿ ಕೈ ಜೋಡಿಸಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸುವುದು ಒಂದು ಪುಣ್ಯದ ಕೆಲಸವಾಗಿದೆ ಅದು ಇಲ್ಲಿ ನಡೆದಿದೆ ಇದು ಸಮಾಜಕ್ಕೆ ಮಾದರಿ ಕಾರ್ಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಊರಿಗೆ ಒಳ್ಳೆಯದಾಗಲಿ: ಭವಾನಿ ಬಿ.ಆರ್
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು ಇಡೀ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಇಲ್ಲಿ ನಡೆದಿರುವ ಧರ್ಮದ ಕಾರ್ಯದಿಂದ ಊರಿನ ಜನರಿಗೆ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ನಾಗ, ರಕ್ತೇಶ್ವರಿ ಸಮಿತಿಯ ಗೌರವಾಧ್ಯಕ್ಷ ಹೊನ್ನಪ್ಪ ಗೌಡ ಕೋಡಿಬೈಲ್ ಉಪಸ್ಥಿತರಿದ್ದರು. ಶ್ರೇಯಾ ಮತ್ತು ವರ್ಷಾ ಪ್ರಾರ್ಥಿಸಿದರು. ಶ್ರೀ ನಾಗ, ರಕ್ತೇಶ್ವರೀ ಸಮಿತಿಯ ಅಧ್ಯಕ್ಷ ಗಣೇಶ್ ಕೋಡಿಬೈಲ್ ಸ್ವಾಗತಿಸಿದರು. ಭಾಸ್ಕರ ಆಚಾರ್ಯ, ಗೀತಾ ಆಚಾರ್ಯ, ಪ್ರವೀಣ್ ಮಗಿರೆ, ಉಮೇಶ್ ಬರಮೇಲು, ವಿಶ್ವಲತಾ, ನಾರಾಯಣ ಕುಕ್ಕುಪುಣಿ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಸ್ವಾಗತಿಸಿದರು. ಉಮೇಶ್ ಬರಮೇಲು ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಮತ್ತು ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ದೈವ ದೇವರ ಕಟ್ಟೆ ನಿರ್ಮಾಣ ವಾಸ್ತು ಶಿಲ್ಪಿ ದಿವಾಕರ ಆಚಾರ್ಯ, ನಾಟಿ ವೈದ್ಯೆ ಪದ್ಮಾವತಿ, ಉಚಿತವಾಗಿ ಕೆತ್ತನೆ ಕೆಲಸಗಳನ್ನು ಮಾಡಿಕೊಡುತ್ತಿರುವ ಶಿಲ್ಪಿ ನಾರಾಯಣ ಆಚಾರ್ಯ, ದಿ.ಜೆ.ಕೆ ವಸಂತ ಗೌಡ ಉರ್ವರವರ ಪುತ್ರ ರವಿರಾಜ್ ಉರ್ವ ಹಾಗೂ ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರರು, ಶ್ರೀನಾಗ, ರಕ್ತೇಶ್ವರೀ ಸಮಿತಿಯ ಕೋಶಾಧಿಕಾರಿ ರಾಜೇಶ್ ರೈ ಪರ್ಪುಂಜರವರುಗಳಿಗೆ ಫಲಪುಷ್ಪ,ಶಾಲು,ಹಾರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕೃತಜ್ಞತಾ ಗೌರವಾರ್ಪಣೆ
ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದವರಿಗೆ ಶಾಲು,ಸ್ಮರಣಿಕೆಯ ಮೂಲಕ ಸನ್ಮಾನಿಸಿ ಕೃತಜ್ಞತಾ ಗೌರವಾರ್ಪಣೆ ಸಲ್ಲಿಸಲಾಯಿತು. ವಿಶೇಷವಾಗಿ ಪರ್ಪುಂಜ ಸ್ನೇಹ ಯುವಕ ಮಂಡಲದ ನಿತಿನ್ ಗೌಡ ಮತ್ತು ತಂಡದ ಸರ್ವ ಪದಾಧಿಕಾರಿಗಳಿಗೆ, ಸ್ನೇಹ ಮಹಿಳಾ ಮಂಡಲದ ಪ್ರಮೀಳಾ ಮತ್ತು ತಂಡದ ಸರ್ವ ಪದಾಧಿಕಾರಿಗಳಿಗೆ, ಭೋಜರಾಜ ಆಚಾರ್ಯ ಮತ್ತು ತಂಡದ ಕೊಲತ್ತಡ್ಕ ಯುವಕ ಮಂಡಲದ ಸರ್ವ ಪದಾಧಿಕಾರಿಗಳಿಗೆ, ಇಂದಿರಾ ಕೊರಗಪ್ಪ ರೈ ತಂಡದ ಕೊಲತ್ತಡ್ಕ ಯುವತಿ ಮಂಡಲದ ಸರ್ವ ಪದಾಧಿಕಾರಿಗಳಿಗೆ ಶಾಲು ಹಾಕಿ ಕೃತಜ್ಞತೆ ಸಲ್ಲಿಸಲಾಯಿತು. ಇದಲ್ಲದೆ ಶ್ರೀ ನಾಗ, ರಕ್ತೇಶ್ವರಿ ಸಮಿತಿಯ ಪದಾಧಿಕಾರಿಗಳಿಗೆ ಹಾಗೇ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಶಾಲು ಹಾಕಿ ಗೌರವ ಸಲ್ಲಿಸಲಾಯಿತು.
ಶಿವಕೃಪಾ ಆಡಿಟೋರಿಯಂನ ಮಾಲಕರಾದ ಗಣೇಶ್ ಕೋಡಿಬೈಲು ಮತ್ತು ಹರಿಹರ ಕೋಡಿಬೈಲ್ರವರ ಹೆತ್ತವರಾದ ಹೊನ್ನಪ್ಪ ಗೌಡ ಮತ್ತು ಸುಶೀಲಾರವರುಗಳಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹರಿಹರ ಕೋಡಿಬೈಲ್, ಪದ್ಮಾವತಿ, ದಿಬಾನ್ಸಿ,ನಿಹಾನ್ ಹಾಗೇ ಗಣೇಶ್ ಕೋಡಿಬೈಲ್, ಲೀನಾ ಗಣೇಶ್, ಲಿಯಾ,ಯಥರ್ವ್-ವಿಷನ್ ಸ್ಟೋನ್ ಕೇರ್ ಬೆಂಗಳೂರು ಉಪಸ್ಥಿತರಿದ್ದರು.
-ವಿಜೃಂಭಣೆಯಿಂದ ನಡೆದ ಶ್ರೀ ನಾಗ ದೇವರ ಶಿಲಾ ಪ್ರತಿಷ್ಠೆ, ರಕ್ತೇಶ್ವರೀ ಗುಳಿಗ ದೈವಗಳ ಬಿಂಬ ಪ್ರತಿಷ್ಠೆ-
ಶಿವಕೃಪಾ ಆಡಿಟೋರಿಯಂವ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆಯಲ್ಲಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8.12 ರ ಮೀನಾ ಲಗ್ನದ ಸುಮುಹೂರ್ತದಲ್ಲಿ ಶ್ರೀ ನಾಗದೇವರ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಹಾಗೂ ರಕ್ತೇಶ್ವರಿ, ಗುಳಿಗ ದೈವಗಳ ಬಿಂಬ ಪ್ರತಿಷ್ಠೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮೊದಲಿಗೆ ಮಹಾಗಣಪತಿ ಹೋಮ, ನಾಗಪ್ರತಿಷ್ಠಾ ಹೋಮ, ಸರ್ವ ಪ್ರಾಯಶ್ಚಿತ್ತ ಆಶ್ಲೇಷಾ ಬಲಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು ಪ್ರತಿಷ್ಠೆ ನಡೆದು ಕಲಶಾಭಿಷೇಕ, ತಂಬಿಲ ಸೇವೆ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಫೆ.20 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ,ಪ್ರಾಕಾರ ಬಲಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ನಾಗ,ರಕ್ತೇಶ್ವರಿ ಸಮಿತಿಯ ಅಧ್ಯಕ್ಷ ಗಣೇಶ್ ಕೋಡಿಬೈಲ್, ಹರಿಹರ ಕೋಡಿಬೈಲ್, ಕೋಶಾಧಿಕಾರಿ ರಾಜೇಶ್ ರೈ ಪರ್ಪುಂಜರವರುಗಳು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು
ವೈಭವದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಜೆ ಶಿವಕೃಪಾ ಆಡಿಟೋರಿಯಂ ಮುಂಭಾಗದಲ್ಲಿ ಶ್ರೀ ದೇವಿಯ ಬಯಲಾಟವಾಗಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಂಜೆ ರಾಮಜಾಲು ಕೋಟಿ ಚೆನ್ನಯ ಗರಡಿ ಬಳಿಯಿಂದ ಶ್ರೀ ದೇವಿಯ ಮೆರವಣಿಗೆ ಪರ್ಪುಂಜ ತನಕ ಬಂದು ಅಲ್ಲಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಶಿವಕೃಪಾ ಆಡಿಟೋರಿಯಂಗೆ ಬಂದು ಅಲ್ಲಿ ಶ್ರೀದೇವಿಯ ಚೌಕಿ ಪೂಜೆ ನಡೆಯಿತು. ಆ ಬಳಿಕ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆದು ಯಕ್ಷಗಾನ ಬಯಲಾಟ ಆರಂಭಗೊಂಡಿತು. ಊರಪರವೂರ ನೂರಾರು ಯಕ್ಷಗಾನ ಪ್ರೇಮಿಗಳು ಯಕ್ಷಗಾನ ವೀಕ್ಷಿಸಿದರು.
‘ ಪರ್ಪುಂಜ ಕೊಲತ್ತಡ್ಕದ ಈ ಶಿವಕೃಪಾ ಆಡಿಟೋರಿಯಂ ವಠಾರದ ಪ್ರತಿಯೊಬ್ಬ ಭಕ್ತಾಧಿಗಳ ಸಹಕಾರದಿಂದ ಈ ಒಂದು ಸಾನ್ನಿಧ್ಯ ನಿರ್ಮಾಣ ಸಾಧ್ಯವಾಗಿದೆ. ಈ ದೇವ ಕಾರ್ಯದ ಹಿಂದೆ ದುಡಿದ ಪ್ರತಿಯೊಬ್ಬರಿಗೂ ಅದರಲ್ಲೂ ಎಲ್ಲಾ ಸಂಘ ಸಂಸ್ಥೆಗಳ ಸರ್ವ ಸದಸ್ಯರುಗಳಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ಸರ್ವರಿಗೂ ಶ್ರೀ ದೇವರು ಒಳ್ಳೆಯದನ್ನು ಕರುಣಿಸಲಿ ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಳ್ಳುತ್ತೇವೆ.’
ಗಣೇಶ್ ಕೋಡಿಬೈಲು, ಹರಿಹರ ಕೋಡಿಬೈಲ್ – ಮಾಲಕರು ಶಿವಕೃಪಾ ಆಡಿಟೋರಿಯಂ ಪರ್ಪುಂಜ