ಉಪ್ಪಿನಂಗಡಿ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಖಾಸಗಿ ಕಾಲೇಜುಗಳಿಗೆ ಸರಿಸಾಟಿಯಾಗಿ ಬೆಳೆದು ನಿಂತಿರುವ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರವು ವಿವೇಕ ಯೋಜನೆಯಡಿ ಮೂರು ಕೋಟಿ ಅರುವತ್ತು ಸಾವಿರ ಅನುದಾನ ನೀಡಿದ್ದು, ಇದರಿಂದ 12 ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಫೆ.25ರಂದು ನಡೆಯಲಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಜೀಜ್ ಬಸ್ತಿಕಾರ್ ತಿಳಿಸಿದರು.
ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9:30ಕ್ಕೆ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ಘನ ಉಪಸ್ಥಿತಿಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ ಗೌರವ ಉಪಸ್ಥಿತಿ ಇರಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ, ಪ್ರಾಧಿಕಾರ, ಅಕಾಡಮಿಗಳ ಅಧ್ಯಕ್ಷರುಗಳು ಹಾಗೂ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ಫಾ. ಜೆರಾಲ್ಡ್ ಡಿಸೋಜ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಎಚ್. ಯೂಸುಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶಿಲೆಗಳನ್ನು ಸುಂದರ ಶಿಲ್ಪಗಳನ್ನಾಗಿ ಅರಳಿಸುವ ಕೆಲಸ:
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆಯಿಲ್ಲದಂತೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಪ್ರಸ್ತುತ ಇಲ್ಲಿ ೮೦೪ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಕೊಠಡಿಗಳ ಸಮಸ್ಯೆಯಿಂದ ಕಳೆದ ಶೈಕ್ಷಣಿಕ ಅವಧಿಯಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಾತಿ ಮಾಡಿಕೊಳ್ಳದೇ, ಹಿಂದಕ್ಕೆ ಕಳುಹಿಸಲಾಗಿದೆ. ಶಾಸಕರಾದ ಅಶೋಕ್ ಕುಮಾರ್ ರೈಯವರ ವಿಶೇಷ ಮುತುವರ್ಜಿಯಿಂದಾಗಿ ನಮಗೆ ೩.೦೬ ಕೋ. ರೂ. ಅನುದಾನದಲ್ಲಿ ೧೨ ಕೊಠಡಿಗಳ ನಿರ್ಮಾಣವಾಗಿದ್ದು, ಶೇ.೯೦ರಷ್ಟು ಕೊಠಡಿಗಳ ಅವಶ್ಯಕತೆ ನೀಗಿದೆ. ಇನ್ನು ಇದಕ್ಕೆ ಬೇಕಾದ ಬೆಂಚ್, ಡೆಸ್ಕ್ಗಳ ಅವಶ್ಯಕತೆಗಳಿದ್ದು, ಇದಕ್ಕಾಗಿ ದಾನಿಗಳ ಮೊರೆ ಹೋಗಲಾಗುವುದು. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ದ.ಕ. ಜಿಲ್ಲೆಯ ಗಡಿಭಾಗವಾದ ಶಿರಾಡಿ ಸೇರಿದಂತೆ ಇಲ್ಲಿ ವಸತಿ ನಿಲಯ ಇರುವುದರಿಂದ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ನಾಲ್ಕು ಮಹಡಿಗಳಲ್ಲಿ ಈಗ ೧೨ ನೂತನ ತರಗತಿ ಕೊಠಡಿಗಳು ನಿರ್ಮಾಣಗೊಂಡಿದ್ದು, ನಾಲ್ಕು ಮಹಡಿಗಳ ಸರಕಾರಿ ಕಾಲೇಜೊಂದು ಇರುವುದು ಈ ಭಾಗದಲ್ಲಿ ಇದೇ ಮೊದಲೆನ್ನಬಹುದು. ಇದರೊಂದಿಗೆ ಇಲ್ಲಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಕೋಚಿಂಗ್ ಕೂಡಾ ನೀಡಲಾಗುತ್ತದೆ. ಖಾಸಗಿ ಶಾಲೆಗಳಂತೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಇಲ್ಲಿ ದಾಖಲಾತಿ ಮಾಡಿಕೊಳ್ಳದೇ, ಎಸೆಸ್ಸೆಲ್ಸಿಯಲ್ಲಿ ತೇರ್ಗಡೆಹೊಂದಿದ ಪ್ರತಿಯೋರ್ವ ವಿದ್ಯಾರ್ಥಿಗಳನ್ನು ಇಲ್ಲಿ ದಾಖಲಾತಿ ಮಾಡಿಕೊಂಡು ಶಿಲೆಗಳನ್ನು ಸುಂದರ ಶಿಲ್ಪಗಳನ್ನಾಗಿ ರೂಪಿಸುವಂತೆ ಆ ವಿದ್ಯಾರ್ಥಿಗಳನ್ನು ಉತ್ತಮ ಸಾಧಕರನ್ನಾಗಿ ಮಾಡುವ ಕೆಲಸ ಈ ಕಾಲೇಜಿನಲ್ಲಿ ನಡೆಯುತ್ತಿದ್ದು, ಉತ್ತಮ ಉಪನ್ಯಾಸಕ ವೃಂದ ಈ ಕೆಲಸಗಳಲ್ಲಿ ಶ್ರಮಿಸುತ್ತಿದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಇಬ್ರಾಹೀಂ ಎಂ. ಮಾತನಾಡಿ, ಪ್ರಸ್ತುತ ಇಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ೯೨ ಹಾಗೂ ದ್ವಿತೀಯ ಪಿಯುಸಿಯಲ್ಲಿ ೮೮, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿಯಲ್ಲಿ ೧೯೪, ದ್ವಿತೀಯ ಪಿಯುಸಿಯಲ್ಲಿ ೧೯೬ ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಲ್ಲಿ ಪ್ರಥಮ ಪಿಯುಸಿಯಲ್ಲಿ ೧೩೩ ಮತ್ತು ದ್ವಿತೀಯ ಪಿಯುಸಿಯಲ್ಲಿ ೧೨೭ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೮೦೪ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಇಲ್ಲಿ ಕೇವಲ ಪಠ್ಯಕಲ್ಲದೇ, ಎನ್ಎಸ್ಎಸ್ ಘಟಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೂ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿಗೊಂದು ಆವರಣಗೋಡೆಯ ಅಗತ್ಯತೆಯಿದ್ದು, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಅನ್ನು ನಿರ್ಮಿಸುವ ಯೋಜನೆ ಇದೆ. ಇದರೊಂದಿಗೆ ಪ್ರತಿ ವಿದ್ಯಾರ್ಥಿಯ ಹುಟ್ಟು ಹಬ್ಬಕ್ಕೆ ಒಂದು ಗಿಡವನ್ನು ನೆಡುವ ಮೂಲಕ ಗ್ರೀನ್ ಕ್ಯಾಂಪಸ್ ಅನ್ನು ನಿರ್ಮಾಣ ಮಾಡುವ ಪರಿಕಲ್ಪನೆ ಇದೆ. ಈ ಸರಕಾರಿ ಕಾಲೇಜಿನ ಅಭಿವೃದ್ಧಿಗೆ ಶೈಕ್ಷಣಿಕ ಪ್ರೇಮಿಗಳ ಸಹಕಾರ ಅಗತ್ಯವಿದೆ ಎಂದರು.
ಕಾಲೇಜು ಅಬಿವೃದ್ಧಿ ಸಮಿತಿಯ ಸದಸ್ಯ ಆದಂ ಕೊಪ್ಪಳ ಮಾತನಾಡಿ, ಕಾಲೇಜು ಸ್ವಾಧೀನದಲ್ಲಿರುವ ೬೦ ಸೆಂಟ್ಸ್ ಜಾಗ ಸರಕಾರದ ಹೆಸರಿನಲ್ಲಿದ್ದು, ಅದನ್ನು ಕಾಲೇಜಿನ ಹೆಸರಿನಲ್ಲಿ ಮಾಡಿಕೊಳ್ಳುವ ಕೆಲಸ ನಡೆಯುತ್ತಿದ್ದು, ಈ ಕೆಲಸ ಶೇ.೮೦ರಷ್ಟು ಆಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿ ಮಿನೇಜಸ್, ಇಬ್ರಾಹೀಂ ಕೆ., ಉಪನ್ಯಾಸಕರಾದ ಉಷಾ ಎ.ಎಸ್., ರಮೇಶ್ ಎಚ್.ಜೆ. ಉಪಸ್ಥಿತರಿದ್ದರು.