ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಆಟದ ಮೈದಾನದ ಉದ್ಘಾಟನೆ ಫೆ.25ರಂದು ಬೆಳಿಗ್ಗೆ ನಡೆಯಿತು.

ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ. ಕ್ರೀಡಾಂಗಣ ಉದ್ಘಾಟಿಸಿದರು. ನೂತನ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿದ್ದ ಖೋ ಖೋ ಕ್ರೀಡಾಂಗಣವನ್ನು ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಬಾಕಿಲ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ ಅವರು ತೆಂಗಿನಕಾಯಿ ಒಡೆದು ಕಬಡ್ಡಿ ಕ್ರೀಡಾಂಗಣ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ. ಅವರು, ಕ್ರೀಡೆ, ವಿದ್ಯೆಯಲ್ಲಿ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರದೇಶದಲ್ಲಿರುವ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆ ಊರಿಗೆ ಹೆಮ್ಮೆಯಾಗಿದೆ. ಈ ಶಾಲೆಯಲ್ಲಿ ಉತ್ತಮ ಶಿಕ್ಷಕರ ತಂಡವಿದೆ. ಮುಂದೆ ಈ ಕ್ರೀಡಾಂಗಣದಲ್ಲಿ ವಲಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳು ನಡೆಯಲಿ. ಇಲ್ಲಿನ ಮಕ್ಕಳ ಸಾಧನೆ ಮುಂದಿನ ಮಕ್ಕಳಿಗೆ ಪ್ರೇರಣೆಯಾಗಲಿ. ಶಾಲೆಯ ಕೀರ್ತಿ ರಾಷ್ಟ್ರಮಟ್ಟಕ್ಕೂ ಪಸರಿಸಲಿ ಎಂದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಬಾಕಿಲ ಮಾತನಾಡಿ, ಈ ಶಾಲೆಯಲ್ಲಿನ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಊರಿನ ಜನರ ಸಹಕಾರ ಶ್ರೇಷ್ಠ ಮಟ್ಟದಲ್ಲಿದೆ. ಈಗ ಇಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸುವಂತಹ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಇದಕ್ಕೆ ಗ್ರಾಮ ಪಂಚಾಯತ್‌ನ ಸಹಕಾರ ದೊರೆತಿರುವುದು ಹೆಮ್ಮೆಯ ವಿಚಾರ. ಶಾಲೆಯ ಸಾಧನೆ ಇನ್ನೂ ಎತ್ತರಕ್ಕೆ ಏರಲಿ ಎಂದರು.
ರಾಮಕುಂಜ ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷೆ, ಹಾಲಿ ಸದಸ್ಯೆಯೂ ಆದ ಮಾಲತಿ ಎನ್.ಕೆ.ಕದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್‌ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ಪಾತೃಮಾಡಿ, ಸಿವಿಲ್ ಇಂಜಿನಿಯರ್ ಪ್ರವೀಣ್ ಹಿರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಖೋ ಖೋ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಕ್ಷಯ್ ಗೌಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗೌಡ ಸಂಘದಿಂದ ದೇಣಿಗೆ ಹಸ್ತಾಂತರ:
ಒಕ್ಕಲಿಗ ಗೌಡ ಸೇವಾ ಸಂಘದ ಆಲಂಕಾರು ವಲಯ ಮಟ್ಟದ ಕ್ರೀಡಾಕೂಟ ನಡೆಸಲು ಶಾಲೆಯ ಮೈದಾನದಲ್ಲಿ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಹಳೆನೇರೆಂಕಿ ಒಕ್ಕಲಿಗ ಗೌಡ ಸಂಘದ ವತಿಯಿಂದ ಶಾಲೆಗೆ 5 ಸಾವಿರ ರೂ.ದೇಣಿಗೆ ಹಾಗೂ ಸುಮಾರು 4500 ರೂ.ವೆಚ್ಚದ ಕ್ರೀಡಾ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು.
ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ ಸ್ವಾಗತಿಸಿ ಮಾತನಾಡಿ, ಶಾಲೆಯು ಶತಮಾನೋತ್ಸವದ ಹೊಸ್ತಿಲಲ್ಲಿ ಇದೆ. ಈ ವರ್ಷದ ಡಿಸೆಂಬರ್‌ನಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಸಹಕಾರ ನೀಡುವಂತೆ ಹೇಳಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಂದಿಸಿದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿ.ಪಂ.ಸಿಇಒ ಭೇಟಿ;ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ.ಅವರು ಮಧ್ಯಾಹ್ನ ಶಾಲೆಗೆ ಭೇಟಿ ನೀಡಿ ನೂತನ ಕ್ರೀಡಾಂಗಣದ ವೀಕ್ಷಣೆ ಮಾಡಿದರು. ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಟ್ಟಡದ ಕಾಮಗಾರಿಯ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು. ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್‌ಕುಮಾರ್ ಅವರು ಮಾಹಿತಿ ನೀಡಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಇಂಜಿನಿಯರ್‌ಗಳಾದ ಮನೋಜ್, ಲಕ್ಷ್ಮೀ, ತಾ.ಪಂ.ನ ಭರತ್, ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ, ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ ಮತ್ತಿತರರು ಉಪಸ್ಥಿತರಿದ್ದರು.