ಕೌಕ್ರಾಡಿ ಗ್ರಾ.ಪಂ.; ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯ 2024-25ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಫೆ.28ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ನವೀನ್ ಸ್ಟೀಫನ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಪರಿಶೋಧನೆಯ ಬೆಳ್ತಂಗಡಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೂರ್ಯಕಾಂತ್ ಎಕಲಾರ್ ಅವರು ಮಾತನಾಡಿ, ಹಳ್ಳಿಗಳ ಸುಧಾರಣೆಯಾಗಬೇಕು, ಬಡವರಿಗೂ ಕೂಲಿ ಸಿಗಬೇಕು ಹಾಗೂ ದೀರ್ಘಕಾಲಿಕ ಯೋಜನೆಗಳು ಸೃಜನೆಯಾಗಬೇಕೆಂಬುದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯ ಉದ್ದೇಶವಾಗಿದೆ. ಸಾಮಾಜಿಕ ಪರಿಶೋಧನೆಯ ತಂಡದಿಂದ ಕೌಕ್ರಾಡಿ ಗ್ರಾಮ ಪಂಚಾಯತ್‌ನಲ್ಲಿ ಎರಡೂ ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗಿದೆ ಎಂದರು.

ಸಣ್ಣ ರೈತ ಸರ್ಟಿಫಿಕೇಟ್:
ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸುವುದಕ್ಕೆ ಮೊದಲು ಸಣ್ಣ ರೈತ ಸರ್ಟಿಫಿಕೆಟ್ ಕೊಡಬೇಕಾಗಿದೆ. ಈ ಸರ್ಟಿಫಿಕೆಟ್ ಒಮ್ಮೆ ಗ್ರಾಮ ಪಂಚಾಯಿತಿಗೆ ಕೊಟ್ಟ ನಂತರ ಮತ್ತೆ ಮತ್ತೆ ಕೊಡುವ ಅವಶ್ಯಕತೆ ಇದೆಯಾ ಎಂದು ಗ್ರಾಮಸ್ಥರಾದ ವರ್ಗೀಸ್ ಅಬ್ರಹಾಂ, ಜಾನ್ಸನ್, ಶ್ರೀನಿವಾಸ ಪೂಜಾರಿ ಮತ್ತಿತರರು ಪ್ರಶ್ನಿಸಿದರು. ಸಣ್ಣ ರೈತ ಸರ್ಟಿಫಿಕೆಟ್‌ಗೆ ಇರುವ ಕಾಲಾವಧಿಯನ್ನು ಆರು ತಿಂಗಳಿನಿಂದ 1 ವರ್ಷಕ್ಕೆ ಹೆಚ್ಚಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು.

ಜಿಎಸ್‌ಟಿ ಬಿಲ್ಲು ಬೇಕು:
ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಸಾಮಾಗ್ರಿಗೆ ಸಂಬಂಧಿಸಿ ಜಿಎಸ್‌ಟಿ ಬಿಲ್ಲು ಬೇಕೆಂದು ತಿಳಿಸಬೇಕು. ಕಾಮಗಾರಿ ಮುಗಿದ ಬಳಿಕ ಜಿಎಸ್‌ಟಿ ಬಿಲ್ಲು ಕೇಳಿದರೆ ನಾವು ಏನು ಮಾಡುವುದು ಎಂದು ಗ್ರಾಮಸ್ಥ ಜಾನ್ಸನ್ ಪ್ರಶ್ನಿಸಿದರು.

ಹೆಚ್ಚುವರಿ/ಕಡಿಮೆ ಕೂಲಿಪಾವತಿ:
ಕೆಲವೊಂದು ಕಾಮಗಾರಿಗಳಿಗೆ ಹೆಚ್ಚುವರಿ ಕೂಲಿ ಪಾವತಿ, ಮತ್ತೆ ಕೆಲವೊಂದು ಕಾಮಗಾರಿಗಳಿಗೆ ಕಡಿಮೆ ಕೂಲಿ ಪಾವತಿ ಮಾಡಿರುವುದನ್ನು ಸಾಮಾಜಿಕ ಪರಿಶೋಧನೆಯ ತಂಡ ಉಲ್ಲೇಖಿಸಿದ್ದು ಈ ಬಗ್ಗೆ ಚರ್ಚೆ ನಡೆಯಿತು. ಫಲಾನುಭವಿಯ ಸಹಿ ದುರ್ಬಳಕೆ ಆಗಿರುವ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಮುಂದೆ ಈ ರೀತಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ದೇವಿಕಾ ಅವರು ಹೇಳಿದರು.

ಕಾಮಗಾರಿಗೆ ಆಕ್ಷೇಪಣೆ:
15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕೌಕ್ರಾಡಿ ಗ್ರಾಮದ ನೇರ್ಲ ಮಾರ್ ತೋಮಸ್ ಚರ್ಚ್ ಆವರಣದೊಳಗೆ 1.75 ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಾಮಾಜಿಕ ಪರಿಶೋಧನೆ ತಂಡ ಆಕ್ಷೇಪಣೆ ಸಲ್ಲಿಸಿದೆ. ಅದೇ ರೀತಿ ಇಚ್ಲಂಪಾಡಿ ಗ್ರಾಮದ ಬಿಜೇರು ಕೊರಗಜ್ಜನ ಕಟ್ಟೆಯ ಒಳಗಡೆ 26,972 ರೂ. ಅನುದಾನದಲ್ಲಿ ಸೋಲಾರ್ ದೀಪ ಅಳವಡಿಸಿರುವುದಕ್ಕೂ ಸಾಮಾಜಿಕ ಪರಿಶೋಧನೆ ತಂಡ ಆಕ್ಷೇಪಣೆ ಸಲ್ಲಿಸಿದೆ. ಇನ್ನಿತರ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಗ್ರಾಮಸ್ಥರಾದ ರಿತೇಶ್, ಜಾನ್ಸನ್, ಸುಜಿತ್ ಪಿಲಿಫ್ ಮತ್ತಿತರರು ವಿವಿಧ ವಿಚಾರ ಪ್ರಸ್ತಾಪಿಸಿದರು.

ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಸಂದರ್ಭೋಚಿತವಾಗಿ ಮಾತನಾಡಿದರು. ತಾಂತ್ರಿಕ ಸಹಾಯಕರಾದ ಮನೋಜ್ ಕುಮಾರ್, ಸವಿತಾ ಲೋಬೋ, ಗ್ರಾ.ಪಂ.ಉಪಾಧ್ಯಕ್ಷೆ ವನಿತಾ ಎಂ., ಸದಸ್ಯರಾದ ಲೋಕೇಶ್ ಬಾಣಜಾಲು, ಎಂ.ಹನೀಫ್, ಭವಾನಿ, ಶೈಲಾ, ಡೈಸಿ ವರ್ಗೀಸ್, ದೇವಕಿ, ರತ್ನಾವತಿ, ಪುಷ್ಪಾ ವೇದಿಕೆಯಲ್ಲಿ ಉಪಸ್ಥಿತರಿದದರು. ಪಿಡಿಒ ದೇವಿಕಾ ಸ್ವಾಗತಿಸಿ, ವಂದಿಸಿದರು. ಸಾಮಾಜಿಕ ಪರಿಶೋಧನೆಯ ತಂಡದ ಸಿಬ್ಬಂದಿಗಳಾದ ಲೀಲಾವತಿ ಎಸ್., ಸುಪ್ರೀತಾ ಎಂ., ಈಶ್ವರಿ, ಸೌಮ್ಯ, ವಿದ್ಯಾಶ್ರೀ, ಉಷಾಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.


39.97 ಲಕ್ಷ ರೂ.ಖರ್ಚು:
ಗ್ರಾಮ ಪಂಚಾಯತ್‌ನಲ್ಲಿ 1-4-2023ರಿಂದ 1-3-2024ರ ತನಕ ಉದ್ಯೋಗ ಖಾತರಿ ಯೋಜನೆಯಡಿ 154 ಕಾಮಗಾರಿ ಮಾಡಲಾಗಿದ್ದು ರೂ.28,26,615 ಕೂಲಿ ಮೊತ್ತ ಹಾಗೂ ರೂ.11,70,491 ಸಾಮಾಗ್ರಿ ಮೊತ್ತ ಸೇರಿ ಒಟ್ಟು 39,97,106 ರೂ.ಖರ್ಚು ಮಾಡಲಾಗಿದೆ. 229 ಕುಟುಂಬಗಳ 436 ಮಂದಿ ಕೂಲಿ ನಿರ್ವಹಿಸಿದ್ದು 8976 ಮಾನವ ದಿನಗಳು ಸೃಜನೆಯಾಗಿದೆ ಎಂದು ಸಾಮಾಜಿಕ ಪರಿಶೋಧನೆಯ ತಂಡ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ಹಣಕಾಸು ಯೋಜನೆಯಡಿ 44 ಕಾಮಗಾರಿಗಳನ್ನು ಮಾಡಲಾಗಿದ್ದು 25,70,107 ರೂ.ಬಳಕೆಯಾಗಿದೆ ಎಂದು ಸಾಮಾಜಿಕ ಪರಿಶೋಧನೆಯ ತಂಡ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here