ಪುತ್ತೂರು: ಮಂಗಳೂರಿನ ಬಜ್ಪೆ ಸಮೀಪದ ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವಸ್ಥಾನಕ್ಕೆ ನೆಲ್ಲಿದಡಿ ಗುತ್ತು ಕುಟುಂಬಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿರುವ ಎಂಎಸ್‌ಇಝೆಡ್ ಅಧಿಕಾರಿಗಳ ಈ ಕ್ರಮವನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ ಮತ್ತು ತುಳುನಾಡಿನ ರಕ್ಷಣೆಗೆ ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಶಾಸಕ ಸಂಜಿವ ಮಠಂದೂರು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿ ತುಳುನಾಡಿನ ಇತಿಹಾಸದಲ್ಲಿ ಅತ್ಯಂತ ಮಹತ್ವ ಹೊಂದಿರುವ ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವ, ವಿಷ ವೈದ್ಯಕೀಯಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಈಗಾಗಲೇ ಲಕ್ಷಾಂತರ ಜನರು ಇಲ್ಲಿನ ದೈವದ ಪವಾಡದಿಂದ ಜೀವ ಉಳಿಸಿಕೊಂಡಿದ್ದಾರೆ. ಇಷ್ಟೆಲ್ಲ ಮಹತ್ವ ಹೊಂದಿರುವ ನೆಲ್ಲಿದಡಿ ಗುತ್ತಿನ ಪರಿಸ್ಥಿತಿ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ತುಳುನಾಡಿನ ಎಲ್ಲ ಗುತ್ತು ಮನೆತನಗಳು, ದೈವಸ್ಥಾನಗಳು ನಿರ್ನಾಮವಾಗುವುದು ಶತಸಿದ್ಧ. ಆ ರೀತಿ ಆಗುವ ಮೊದಲು ಸರಕಾರಗಳು ಎಚ್ಚೆತ್ತು, ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಾಗಿ ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಮುಂದೆ ಆಗುವ ದುಷ್ಪರಿಣಾಮಗಳಿಗೆ ಸರಕಾರ ಹಾಗೂ ಎಂಎಸ್‌ಇಝೆಡ್ ಅಧಿಕಾರಿಗಳೆ ನೇರೆ ಹೊಣೆಯಾಗಬೇಕಾಗುತ್ತದೆ. ತುಳುನಾಡಿಗೆ ಕಲಶ ಪ್ರಾಯದಂತಿರುವ ನೆಲ್ಲಿದಡಿಗುತ್ತಿನ ರಕ್ಷಣೆ ತುಳುವರಾದ ನಮ್ಮೆಲ್ಲರ ಕರ್ತವ್ಯ. ಈ ವಿಷಯದಲ್ಲಿ ರಾಜಕೀಯ ಹಾಗೂ ಜಾತಿ ಭೇದ ಮರೆತು ಒಂದಾಗಿ ನಿಂತು ನೆಲ್ಲಿದಡಿ ಗುತ್ತುವಿನ ರಕ್ಷಣೆಗೆ ಕಟಿಬದ್ಧರಾಗೋಣ ಎಂದವರು ತಿಳಿಸಿದ್ದಾರೆ.