ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ, ಕಲ್ಲುರ್ಟಿ ದೈವದ ನೇಮೋತ್ಸವದ ಬಳಿಕ ಕಲ್ಲೇಗ ದೈವಸ್ಥಾನದ ಭಂಡಾರದ ಮನೆಯಾದ ಕಾರ್ಜಾಲು ಗುತ್ತುವಿನಲ್ಲಿ ಮಾ.15ರಂದು ನಡೆಯುವ ಕಾರ್ಜಾಲು ಶ್ರೀ ಧೂಮಾವತಿ ದೈವದ ದೊಂಪದ ಬಲಿ ಜಾತ್ರೋತ್ಸವ ಆಮಂತ್ರಣ ಪತ್ರವನ್ನು ಮಾ.11ರಂದು ರಂದು ಸಂಜೆ ಪುತ್ತೂರು ಪೇಟೆಯಲ್ಲಿ ವಿತರಿಸಲಾಯಿತು.
ಮಾ.15 ರಂದು ಜಾತ್ರೋತ್ಸವ ನಡೆಯಲಿದ್ದು, ಅಂದು ಬೆಳಗ್ಗೆ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂ.9.30 ಕ್ಕೆ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ಹೊರಡಲಿದೆ. ರಾತ್ರಿ ಗಂಟೆ 10 ಕ್ಕೆ ಗೋಂದಳ ಪೂಜೆ ನಡೆಯಲಿದೆ. ರಾತ್ರಿ ಗಂ.11.45 ಕ್ಕೆ ಗ್ರಾಮದೈವ ಧೂಮಾವತಿ, ಕಲ್ಕುಡ, ಕಲ್ಲುರ್ಟಿ ಮತ್ತು ಇತರ ದೈವಗಳ ದೊಂಪದ ಬಲಿ ನೇಮೋತ್ಸವ ನಡೆಯಲಿದೆ.
ಆಮಂತ್ರಣ ಪತ್ರಿಕೆಗೆ ಬೊಳುವಾರಿನಲ್ಲಿ ಚಾಲನೆ:
ದೊಂಪದಬಲಿ ನೇಮೋತ್ಸವದ ಅಂಗವಾಗಿ ಮಾ.11ರಂದು ಪುತ್ತೂರು ಪೇಟೆಯಲ್ಲಿ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಆಮಂತ್ರಣ ವಿತರಣೆಗೆ ಚಾಲನೆ ನೀಡಲಾಯಿತು. ದೊಂಪದ ಬಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಮತ್ತು ಉತ್ಸವ ಸಮಿತಿ ಅಧ್ಯಕ್ಷ ನಗರಸಭಾ ಸದಸ್ಯ ಕೆ ಜೀವಂಧರ್ ಜೈನ್ ಅವರು ಉದ್ಯಮಿ ಗಣೇಶ್ ಬಾಳಿಗ ಅವರಿಗೆ ಆಮಂತ್ರಣ ಪತ್ರ ನೀಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಸಮಿತಿ ಸದಸ್ಯರಾದ ಪ್ರಶಾಂತ್ ಮುರ, ನಾರಾಯಣ, ಕಲಾವಿದ ಕೃಷ್ಣಪ್ಪ, ಮಾಜಿ ಸದಸ್ಯ ರವಿಕಿರಣ್ ನೆಲಪ್ಪಾಲು, ದಿವಾಕರ ಕಾರ್ಜಾಲು, ಸುನಿಲ್ ಕಾರ್ಜಾಲು, ಗುರುವಚನ್ ಕಾರ್ಜಾಲು, ಜಯ ಕಾರೆಕ್ಕಾಡು, ಶೀನ ಮುಗೇರ, ಸುಂದರ ಮುಗೇರ, ಶೇಖರ ಮುಗೇರ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.