ಪುತ್ತೂರು:ಮುಕ್ರಂಪಾಡಿಯಲ್ಲಿ ಮಾ.6ರಂದು ವಾಹನವೊಂದು ಬೈಕ್ನ ಹಿಂಬದಿಗೆ ಡಿಕ್ಕಿಯಾಗಿ ಪಂಜದ ನಿವೃತ್ತ ಶಿಕ್ಷಕರೋರ್ವರು ಮೃತಪಟ್ಟ ಘಟನೆಯಲ್ಲಿ, ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿದ್ದ ಅಪರಿಚಿತ ವಾಹನ ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಆಪಾದಿತ ರಿಕ್ಷಾ ಚಾಲಕನ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಿಂದಾಗಿ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಸಂಪ ನಿವಾಸಿ, ನಿವೃತ್ತ ಶಿಕ್ಷಕ ಕೃಷ್ಣ ಭಟ್(75ವ)ರವರು ಮೃತಪಟ್ಟಿದ್ದರು.ಆದರೆ ಅಪಘಾತವೆಸಗಿ ಪರಾರಿಯಾಗಿದ್ದ ವಾಹನ ಪಿಕಪ್ ಎಂದು ಎಲ್ಲರೂ ಹೇಳುತ್ತಿದ್ದರೂ ಪೊಲೀಸರು ಸಿ.ಸಿ ಕ್ಯಾಮರಾ ಆಧರಿಸಿ ತನಿಖೆ ನಡೆಸಿದಾಗ, ಆಟೋ ರಿಕ್ಷಾವೊಂದು ಬೈಕ್ಗೆ ಡಿಕ್ಕಿಯಾಗಿ ಪರಾರಿಯಾಗಿರುವುದು ಕಂಡು ಬಂದಿದೆ.ಕೆಮ್ಮಿಂಜೆ ಗ್ರಾಮದ ಕಾಪಿಕಾಡು ನಿವಾಸಿ ಮಹಮ್ಮದ್ ಫಯಾಜ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ (ಕೆಎ 21-ಬಿ 7766)ಬೈಕ್ಗೆ ಡಿಕ್ಕಿಯಾದ ಸಂದರ್ಭ ಪಿಕಪ್ ವಾಹನವೊಂದು ರಿಕ್ಷಾವನ್ನು ಓವರ್ ಟೇಕ್ ಮಾಡಿ ಹೋಗಿತ್ತು.ಹಾಗಾಗಿ ಪಿಕಪ್ ವಾಹನ ಬೈಕ್ಗೆ ಡಿಕ್ಕಿಯಾಗಿರುವುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು.ಆದರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ ವೇಳೆ,ಬೈಕ್ಗೆ ಡಿಕ್ಕಿಯಾಗಿರುವುದು ಆಟೋ ರಿಕ್ಷಾ ಹೊರತು ಪಿಕಪ್ ಅಲ್ಲ ಎನ್ನುವುದು ದೃಢಪಟ್ಟಿತ್ತು.