ರಾಜ್ಯ ಸರಕಾರದಿಂದ ಕಿಸಾನ್ ಸಮ್ಮಾನ್ ಪ್ರೋತ್ಸಾಹ ಧನ ಮತ್ತೆ ಬಿಡುಗಡೆಗೊಳ್ಳಲಿ-ಗ್ರಾಮಸ್ಥರ ಆಗ್ರಹ
ಪುತ್ತೂರು: ಈಗಾಗಲೇ ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ರೂ.2 ಸಾವಿರದಂತೆ ಪ್ರೋತ್ಸಾಹ ಧನ ನೀಡುತ್ತಿದೆ. ಈ ಹಿಂದೆ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರಕಾರ ಕೂಡ ತಮ್ಮ ಪಾಲಿನ ಪ್ರೋತ್ಸಾಹ ಧನವನ್ನು ರೈತರಿಗೆ ನೀಡುತ್ತಿತ್ತು ಆದರೆ ಈಗ ಅದನ್ನು ಕಡಿತ ಮಾಡಲಾಗಿದೆ. ಇಂದಿನ ದಿನಗಳಲ್ಲಿ ರೈತರಿಗೆ ಬಹಳಷ್ಟು ತೊಂದರೆಗಳಿದ್ದು ಆದ್ದರಿಂದ ರಾಜ್ಯ ಸರಕಾರದಿಂದ ನೀಡುವ ಕಿಸಾನ್ ಸಮ್ಮಾನ್ ಪ್ರೋತ್ಸಾಹ ಧನವನ್ನು ಮತ್ತೆ ಬಿಡುಗಡೆ ಮಾಡಬೇಕು ಹಾಗೇ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಅನ್ನು ಕೂಡ ಮತ್ತೆ ಆರಂಭಿಸಬೇಕು ಎಂದು ಒಳಮೊಗ್ರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಮಾ.12 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ ಹಾಗೂ ನಿತೀಶ್ ಕುಮಾರ್ ಶಾಂತಿವನರವರು, ಇಂದಿನ ದಿನಗಳಲ್ಲಿ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ರೈತರ ಕಷ್ಟಗಳನ್ನು ಕಂಡು ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಅದರಂತೆ ಯಡಿಯೂರಪ್ಪ ಸರಕಾರವಿರುವಾಗ ರಾಜ್ಯ ಸರಕಾರ ಕೂಡ ನೀಡುತ್ತಿತ್ತು ಆದರೆ ಪ್ರಸ್ತುತ ಸರಕಾರ ಅದನ್ನು ನಿಲ್ಲಿಸಿದೆ. ಇದಲ್ಲದೆ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಎಂಬ ಹೆಸರಿನಲ್ಲಿ ಸ್ಕಾಲರ್ಶಿಫ್ ಕೂಡ ನೀಡಲಾಗುತ್ತಿತ್ತು ಅದನ್ನು ಕೂಡ ನಿಲ್ಲಿಸಲಾಗಿದೆ. ರೈತರ ಸಂಕಷ್ಟಗಳನ್ನು ಅರಿತುಕೊಂಡು ರಾಜ್ಯ ಸರಕಾರ ಕಿಸಾನ್ ಸಮ್ಮಾನ್ ಪ್ರೋತ್ಸಾಹ ಧನ ಮತ್ತು ರೈತ ವಿದ್ಯಾನಿಧಿ ಸ್ಕಾಲರ್ಶಿಫ್ ಅನ್ನು ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರದಿಂದ ತೊಂದರೆ…!?
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಬೀದಿ ಬದಿ ವ್ಯಾಪಾರಸ್ಥರು ಟೆಂಟ್ ಹಾಕಿಕೊಂಡು ರಾತ್ರಿ ವೇಳೆ ವಿದ್ಯುತ್ ದೀಪಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ರೀತಿ ವ್ಯಾಪಾರ ಮಾಡಲು ಅವರಿಗೆ ಪಂಚಾಯತ್ ಪರವಾನಗೆ ಇದೆಯಾ? ಈ ರೀತಿಯ ವ್ಯಾಪಾರದಿಂದ ವಾಹನ ಅಪಘಾತಗಳು ಕೂಡ ಜಾಸ್ತಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ ಎಂದು ಹರೀಶ್ ಬಿಜತ್ರೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಓ ಅವಿನಾಶ್ ಬಿ.ಆರ್.ರವರು ಬೀದಿ ಬದಿ ವ್ಯಾಪಾರಕ್ಕೆ ಪಂಚಾಯತ್ನಿಂದ ಯಾವುದೇ ಪರವಾನಗೆ ನೀಡಲು ಬರುವುದಿಲ್ಲ, ಇದಕ್ಕೆ ಅವಕಾಶವೂ ಇಲ್ಲ ಎಂದು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ ನೋಡೆಲ್ ಅಧಿಕಾರಿ, ತಾಪಂ ಇಓ ನವೀನ್ ಭಂಡಾರಿಯವರು ಬೀದಿ ಬದಿಯ ವ್ಯಾಪಾರದಿಂದ ಅಪಘಾತಗಳ ಸಂಭವಿಸಲು ಕಾರಣವಾಗುತ್ತದೆ ಎಂಬ ಬಗ್ಗೆ ಈಗಾಗಲೇ ದೂರು ಬಂದಿದ್ದು ಅದರಂತೆ ನಾವು ಹೆದ್ದಾರಿ ವಿಭಾಗಕ್ಕೆ ಬರೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಮ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸ್ವಚ್ಚತಾ ಕಾರ್ಯವನ್ನು ಮುಂದುವರಿಸಿ…
ಈಗಾಗಲೇ ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಸ್ವಚ್ಚತಾ ಅಭಿಯಾನ ಒಳಮೊಗ್ರು ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆ ಹಾಗೂ ಸರ್ವರ ಸಹಕಾರದೊಂದಿಗೆ ಅತ್ಯುತ್ತಮವಾಗಿ ನಡೆದಿದೆ. ಆದರೆ ಇದನ್ನು ಮುಂದಿನ ದಿನಗಳಲ್ಲಿ ಮುಂದವರಿಸಿಕೊಂಡು ಹೋಗಬೇಕಾದ ಅಗತ್ಯ ಇದೆ. ಈಗಾಗಲೇ ಬೇರೆ ಪಂಚಾಯತ್ಗಳಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಗ್ರಾಮದಲ್ಲೂ ನಡೆಯಲಿ ಈ ಬಗ್ಗೆ ಪಿಡಿಓ ಹಾಗೂ ಆಡಳಿತ ಮಂಡಳಿಯವರು ಗಮನ ಹರಿಸಬೇಕಾಗಿದೆ ಎಂದು ನಿತೀಶ್ ಕುಮಾರ್ ಶಾಂತಿವನ ತಿಳಿಸಿದರು.
ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸಿ
ಸೇತುವೆಗಳಿಗೆ ತ್ಯಾಜ್ಯ, ಕಸ ಸುರಿಯುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಪ್ಪಿಸಬೇಕಾದರೆ ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸುವ ಸೂಕ್ತ ಎಂದ ನಿತೀಶ್ ಕುಮಾರ್ ಶಾಂತಿವನರವರು ಕುಂಬ್ರ ಸೇತುವೆ ಬಳಿ ಹಾಗೂ ಕುಂಬ್ರ ಜಂಕ್ಷನ್ ಬಳಿಯೂ ಸಿಸಿ ಕ್ಯಾಮರ ಅಳವಡಿಸುವಂತೆ ಮನವಿ ಮಾಡಿಕೊಂಡರು.
ಗುಮ್ಮಟೆಗದ್ದೆಗೆ ಸರಕಾರಿ ಬಸ್ಸು ಬಾರದೆ ತೊಂದರೆ…!
ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರ ನಿಷೇಧಿಸಿದ ಬಳಿಕ ಪುತ್ತೂರಿನಿಂದ ದೇವಸ್ಯವಾಗಿ ಗುಮ್ಮಟೆಗದ್ದೆ ತನಕ ಸರಕಾರಿ ಬಸ್ಸೊಂದು ಬರುತ್ತಿತ್ತು. ಆದರೆ ಆ ಬಸ್ಸು ಕಳೆದ ಕೆಲವು ತಿಂಗಳುಗಳಿಂದ ಬಾರದೆ ಇರುವುದರಿಂದ ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಅದರಲ್ಲೂ ಶಾಲಾ ಕಾಲೇಜ್ಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಿದ್ದು ಈ ಕೂಡಲೇ ಬಸ್ಸು ಬರುವಂತಾಗಬೇಕು ಎಂದು ಸಂಜೀವಿನ ಒಕ್ಕೂಟದ ಎಂಬಿಕೆ ಚಂದ್ರಿಕಾರವರು ವಿನಂತಿಸಿಕೊಂಡರು. ಈ ಬಗ್ಗೆ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಹೇಶ್ ರೈ ಕೇರಿಯವರು ಮಾತನಾಡಿದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಪುತ್ತೂರಿನಿಂದ ದೇವಸ್ಯವಾಗಿ ಗುಮ್ಮಟೆಗದ್ದೆಗೆ ಬಂದು ತಿರುಗಿ ಹೋಗುತ್ತಿತ್ತು ಅದೇ ರೀತಿ ಮತ್ತೆ ಬರಬೇಕು ಈ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು. ಕುಂಬ್ರಕ್ಕೆ ಈ ಹಿಂದೆ ಒಂದು ಸಿಟಿ ಬಸ್ಸು ಬರುತ್ತಿತ್ತು ಅದೂ ಕೂಡ ಈಗ ಬರ್ತಾ ಇಲ್ಲ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೆಳಗ್ಗಿನ ಜಾವ ತುಂಬಾ ತೊಂದರೆಯಾಗುತ್ತಿದೆ ಎಂದು ನಿತೀಶ್ ಕುಮಾರ್ ಶಾಂತಿವನ ತಿಳಿಸಿದರು.
ಅಜ್ಜಿಕಲ್ಲು, ದರ್ಬೆತ್ತಡ್ಕ ಶಾಲೆಯಲ್ಲಿ ಶಿಕ್ಷಕರ ಕೊರತೆ
ಅಜ್ಜಿಕಲ್ಲು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಈ ಶಾಲೆಯಲ್ಲಿ ಮುಖ್ಯಗುರು ಹುದ್ದೆ ಕೂಡ ಖಾಲಿ ಇದೆ ಮುಂದಿನ ಶೈಕ್ಷಣಿಕ ವರ್ಷಕ್ಕಾದರೂ ಶಿಕ್ಷಕರ ನೇಮಕ ಮಾಡಬೇಕು ಎಂದು ಸಂತೋಷ್ ಭಂಡಾರಿ ಚಿಲ್ಮೆತ್ತಾರು ತಿಳಿಸಿದರು. ದರ್ಬೆತ್ತಡ್ಕ ಶಾಲೆಯಲ್ಲಿ ಶಿಕ್ಷಕರಿದ್ದರೂ ಅನಾರೋಗ್ಯದಿಂದಾಗಿ ಮುಖ್ಯಗುರು ಹಾಗೂ ಸಹ ಶಿಕ್ಷಕರು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಅತಿಥಿ ಶಿಕ್ಷಕರೇ ಶಾಲಾ ನಿರ್ವಹಣೆ ಮಾಡಬೇಕಾಗಿದೆ. ಆದ್ದರಿಂದ ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶುಭಕರ ನಾಯಕ್ ತಿಳಿಸಿದರು.
ಪರ್ಪುಂಜದಲ್ಲಿ ಬಸ್ಸು ತಂಗುದಾಣ ಆಗಬೇಕು
ಪರ್ಪುಂಜದಲ್ಲಿ ಬಸ್ಸು ತಂಗುದಾಣ ಬೇಕು ಎಂದು ಕಳೆದ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಲೆ ಬಂದಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿರುವ ಬಸ್ಸು ತಂಗುದಾಣವು ಪ್ರಯೋಜನಕ್ಕೆ ಇಲ್ಲದಂತಾಗಿದೆ. ಇದನ್ನು ದುರಸ್ತಿ ಮಾಡುವ ಕೆಲಸವೂ ಆಗಿಲ್ಲ. ಹೊಸ ಬಸ್ಸು ತಂಗುದಾಣ ಆಗಬೇಕು ಎಂದು ಮನವಿ ಮಾಡಿಕೊಂಡಿದ್ದರೂ ಇದುವರೆಗೆ ಅನುದಾನ ಇಟ್ಟಿಲ್ಲ ಮುಂದಿನ ದಿನದಲ್ಲಾದರೂ ಪರ್ಪುಂಜಕ್ಕೆ ಬಸ್ಸು ತಂಗುದಾಣದ ಭಾಗ್ಯ ಸಿಗಬಹುದೇ ಎಂದು ರಾಜೇಶ್ ರೈ ಪರ್ಪುಂಜ ಕೇಳಿಕೊಂಡರು. ಪರ್ಪುಂಜ ಜಂಕ್ಷನ್ ಬಳಿ ಇರುವ ಗಿರಿಜಾರವರ ಮನೆಯ ಹತ್ತಿರ ಅಪಾಯಕಾರಿ ಮರ ಇದ್ದು ಅದನ್ನು ತೆರೆವುಗೊಳಿಸುವಂತೆ ರಾಜೇಶ್ ರೈಯವರು ಅರಣ್ಯ ಇಲಾಖೆಯವರ ಬಳಿ ಕೇಳಿಕೊಂಡರು.
ಬೀದಿ ನಾಯಿಗಳ ಸಂತಾನ ಹರಣ ಅಗತ್ಯವಿದೆ
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗುತ್ತಿದ್ದು ಇದನ್ನು ಹತೋಟಿಗೆ ತರಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯ ಇದೆ ಎಂದು ನವೀನ್ ರೈ ಪನಡ್ಕ ತಿಳಿಸಿದರು.
ಕಾಡುಕೋಣ, ಕೋತಿಗಳ ಹಾವಳಿ ಜಾಸ್ತಿಯಾಗಿದೆ
ಬಳ್ಳೇರಿ ಕಾಡಿನ ಸರಹದ್ದು ಸೇರಿದಂತೆ ಕಾಡು ಪ್ರದೇಶಗಳಲ್ಲಿ ಕಾಡು ಕೋಣಗಳ ಹಾವಳಿ ಜಾಸ್ತಿಯಾಗಿದ್ದು ಇವುಗಳು ಕೃಷಿ ತೋಟಕ್ಕೆ ಬಂದು ಕೃಷಿ ಹಾನಿ ಮಾಡುತ್ತಿವೆ ಎಂದು ಶಶಿರಾಜ್ ಮೊಡಪ್ಪಾಡಿ ತಿಳಿಸಿದರು. ಸೋಲಾರ್, ತಂತಿ ಬೇಲಿಗಳನ್ನು ಕೂಡ ಇವುಗಳು ಕ್ಯಾರ್ ಮಾಡುತ್ತಿಲ್ಲ ಎಂದು ಸಂತೋಷ ಭಂಡಾರಿ ಚಿಲ್ಮೆತ್ತಾರು ತಿಳಿಸಿದರು. ಮಂಗಗಳ ಹಾವಳಿ ಜಾಸ್ತಿಯಾಗಿದ್ದು ತೆಂಗಿನ ತೋಟಗಳಿಗೆ ಹಾನಿ ಮಾಡುತ್ತಿವೆ. ಬೇರೆ ಕಡೆಗಳಿಂದಲೂ ಕೋತಿಗಳನ್ನು ಇಲ್ಲಿ ತಂದು ಬಿಡುವ ಕೆಲಸವೂ ಆಗುತ್ತಿದೆ ಎಂದು ನವೀನ್ ರೈ ಪನಡ್ಕ ತಿಳಿಸಿದರು. ಕಾಡು ಕೋಣ, ಕೋತಿಗಳ ಹಾವಳಿಯಿಂದ ಉಂಟಾದ ಕೃಷಿ ಹಾನಿಗೂ ಸರಕಾರ ಪರಿಹಾರ ಕೊಡುವ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಇತರ ಪಂಚಾಯತ್ಗೆ ಮಾದರಿಯಾದ ಗ್ರಾಮಸಭೆ- ನವೀನ್ ಭಂಡಾರಿ
ನೋಡೆಲ್ ಅಧಿಕಾರಿಯಾಗಿದ್ದ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ, ಒಳಮೊಗ್ರು ಗ್ರಾಮ ಸಭೆ ಒಂದು ಪಾರ್ಲಿಮೆಂಟ್ ರೀತಿಯಲ್ಲಿ ನಡೆದಿದೆ. ಆರೋಗ್ಯಕರವಾದ ಚರ್ಚೆಯೊಂದಿಗೆ ಜನರು ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಇತರ ಪಂಚಾಯತ್ಗಳಿಗೆ ಒಂದು ಮಾದರಿಯಾಗುವ ಗ್ರಾಮಸಭೆ ಇದಾಗಿದೆ ಎಂದರು. ಜನರ ಬೇಡಿಕೆ, ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಿಂದ ಕೇಳಿ ಬಂದ ಬೇಡಿಕೆಗಳು
ಗ್ರಾಮಸಭೆಯು ಅತ್ಯಂತ ಪ್ರಮುಖ ಸಭೆಯಾಗಿದ್ದು ಸಭೆಗೆ ಬರುವ ಅಧಿಕಾರಿಗಳು ಸೂಕ್ತವಾದ ಅಂಕಿಅಂಶ,ಮಾಹಿತಿಯೊಂದಿಗೆ ಸಭೆಗೆ ಬರಬೇಕು ಇಲ್ಲದಿದ್ದರೆ ಸಭೆ ವ್ಯರ್ಥ ಆಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನಿತೀಶ್ ಕುಮಾರ್ ಶಾಂತಿವನ ತಿಳಿಸಿದರು. ಅಡಿಕೆ ಆಮದು ಆಗುವುದು ನಿಲ್ಲಬೇಕು ಈ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸಂತೋಷ್ ಭಂಡಾರಿ ಚಿಲ್ಮೆತ್ತಾರು ಆಗ್ರಹಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ, ಸಿರಾಜುದ್ದೀನ್, ಶಾರದಾ, ಚಿತ್ರಾ ಬಿ.ಸಿ, ವನಿತಾ ಮನೋಜ್, ರೇಖಾ ಯತೀಶ್, ಸುಂದರಿ, ನಳಿನಾಕ್ಷಿ, ನಿಮಿತಾ ರೈ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ಪಂಚಾಯತ್ ಮಾಹಿತಿಯೊಂದಿಗೆ ಗ್ರಾಮಸಭೆ ನಿರ್ವಹಿಸಿದರು. ಕಾರ್ಯದರ್ಶಿ ಜಯಂತಿ ಗತ ಸಭೆಯ ವರದಿ ಮಂಡನೆಯೊಂದಿಗೆ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಮೋಹನ್, ಸಿರಿನಾ ಸಹಕರಿಸಿದ್ದರು.
ಸ್ವಚ್ಛ ಸಂಸ್ಕೃತಿ, ನಮ್ಮ ಸಂಸ್ಕೃತಿ ಗ್ರಾಪಂ ಕಾರ್ಯವೈಖರಿಗೆ ಗ್ರಾಮಸ್ಥರ ಶ್ಲಾಘನೆ
ತಾ.ಪಂ ಇಓ ನವೀನ್ ಭಂಡಾರಿಯವರ ಕಲ್ಪನೆಯ ಸ್ವಚ್ಚ ಸಂಸ್ಕೃತಿ ನಮ್ಮ ಸಂಸ್ಕೃತಿ ಸ್ವಚ್ಛತಾ ಅಭಿಯಾನವು ಒಳಮೊಗ್ರು ಗ್ರಾಪಂನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದು ಈ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಯಾಗಿದ್ದ ನವೀನ್ ಭಂಡಾರಿಯವರಿಗೆ ಹಾಗೇ ಗ್ರಾಮದಲ್ಲಿ 10 ದಿನಗಳ ಕಾಲ ನಡೆದ ಅಭಿಯಾನದಲ್ಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳನ್ನು, ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರನ್ನು ಸೇರಿಸಿಕೊಂಡು ಸ್ವಚ್ಛತಾ ಕಾರ್ಯ ಮಾಡುವ ಮೂಲಕ ತಾಲೂಕಿನಲ್ಲೇ ಎರಡನೇ ಸ್ಥಾನ ಪಡೆಯಲು ಕಾರಣೀಕರ್ತರಾದ ಗ್ರಾಪಂನ ದಕ್ಷ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರಿಗೆ ಹಾಗೇ ಅಂದಿನ ಪಿಡಿಓ ಮನ್ಮಥರಿಗೆ, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸರ್ವರಿಗೂ ನಿತೀಶ್ ಕುಮಾರ್ ಶಾಂತಿವನರವರು ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಗ್ರಾಪಂನ ಕಾರ್ಯವೈಖರಿ ಬೆಂಗಳೂರಿನ ಆಂಗ್ಲ ಭಾಷಾ ಪತ್ರಿಕೆಯಲ್ಲೂ ಪ್ರಕಟಗೊಂಡಿರುವುದು ಗ್ರಾಮಕ್ಕೆ ಹೆಮ್ಮೆ ಎಂದು ನಿತೀಶ್ ಕುಮಾರ್ ಹೇಳಿದರು. ಇದಕ್ಕೆ ಗ್ರಾಮಸ್ಥರು ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು.
ಸ್ವಚ್ಛ ಮನೆ, ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣಾ ಪತ್ರ-ವಿಭಿನ್ನ ಪ್ರಯತ್ನ
ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಜನ ಶಿಕ್ಷಣ ಟ್ರಸ್ಟ್ ಇವರ ಪರಿಕಲ್ಪನೆಯ ಸ್ವಚ್ಚ ಮನೆ, ಸ್ವಾಭಿಮಾನಿ ಕುಟುಂಬ ಎಂಬ ಸ್ವಯಂ ಘೊಷಣಾ ಪತ್ರವನ್ನು ಗ್ರಾಮಸಭೆಯ ವರದಿ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಗ್ರಾಮಸ್ಥರಿಗೆ ತಿಳಿಸುವ ಕೆಲಸವನ್ನು ಗ್ರಾಪಂ ಮಾಡಿದೆ. ಈ ಬಗ್ಗೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಈ ಘೋಷಣಾ ಪತ್ರದಲ್ಲಿ ಕುಟುಂಬದ ಮುಖ್ಯಸ್ಥನ ಹೆಸರಿನಿಂದ ಹಿಡಿದು ಶೌಚಾಲಯ, ಹಸಿ,ಒಣ ಕಸ ನಿರ್ವಹಣಾ ವ್ಯವಸ್ಥೆ, ಅಡುಗೆ ಮನೆ, ಬಚ್ಚಲು ಮನೆ ನೀರು ನಿರ್ವಹಣೆ ವ್ಯವಸ್ಥೆ ಹೀಗೆ ಸ್ವಚ್ಚತೆಯ ಪ್ರತಿಯೊಂದು ವಿಷಯ ಇದ್ದು ಇದನ್ನು ಭರ್ತಿ ಮಾಡುವ ಮೂಲಕ ಈ ಘೋಷಣಾ ಪತ್ರವನ್ನು ಪಂಚಾಯತ್ಗೆ ನೀಡಬೇಕಾಗುತ್ತದೆ. ಪ್ರತಿಯೊಬ್ಬರು ಕೂಡ ಈ ಘೋಷಣಾ ಪತ್ರವನ್ನು ಭರ್ತಿ ಮಾಡಿ ಕೊಡುವ ಮೂಲಕ ನಮ್ಮ ಗ್ರಾಮ, ನಮ್ಮ ಮನೆಯನ್ನು ಸ್ವಚ್ಚ ಗ್ರಾಮ, ಸ್ವಚ್ಚ ಮನೆಯನ್ನಾಗಿಸಿಕೊಳ್ಳುವ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷರಿಗೆ ಗ್ರಾಮಸ್ಥರಿಂದ ಅಭಿನಂದನೆ
ಒಳಮೊಗ್ರು ಗ್ರಾಪಂ ಅಧ್ಯಕ್ಷೆಯಾಗಿರುವ ತ್ರಿವೇಣಿ ಪಲ್ಲತ್ತಾರುರವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಓರ್ವ ಮಹಿಳಾ ಅಧ್ಯಕ್ಷೆಯಾಗಿ ಬೆಳ್ಳಂಬೆಳಗ್ಗೆ ಎಲ್ಲರನ್ನು ಸೇರಿಸಿಕೊಂಡು ೧೦ ದಿನಗಳ ಕಾಲ ಸ್ವಚ್ಚತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ನಿತೀಶ್ ಕುಮಾರ್ ಶಾಂತಿವನ ಹಾಗೇ ಪ್ರಥಮ ಸುತ್ತಿನ ಗ್ರಾಮಸಭೆಯ ಬೆನ್ನಲ್ಲೆ ದ್ವಿತೀಯ ಸುತ್ತಿನ ಗ್ರಾಮಸಭೆ ನಡೆಸಿದ್ದಕ್ಕೆ ಸಂತೋಷ್ ಭಂಡಾರಿ ಚಿಲ್ಮೆತ್ತಾರುರವರು ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾನರ್ ನಿಷೇಧಿತ ವಲಯ
ಕುಂಬ್ರ ಜಂಕ್ಷನ್ನಲ್ಲಿ ಸೆಲ್ಪೀ ಪಾಯಿಂಟ್ ಇರುವ ಪ್ರದೇಶವನ್ನು ಅಂದರೆ 100 ಮೀಟರ್ ಪ್ರದೇಶವನ್ನು ಬ್ಯಾನರ್ ನಿಷೇಧಿತ ವಲಯ ಎಂದು ಘೋಷಿಸಲಾಯಿತು. ಈ ಪ್ರದೇಶದಲ್ಲಿ ಯಾವುದೇ ಬ್ಯಾನರ್ ಬಂಟಿಂಗ್ಸ್ ಅಳವಡಿಸಬಾರದು ಎಂದು ಪಿಡಿಓ ಅವಿನಾಶ್ ಬಿ.ಆರ್.ಕೇಳಿಕೊಂಡರು.
“ ಅರ್ಥಪೂರ್ಣವಾಗಿ ಗ್ರಾಮಸಭೆ ನಡೆದಿದೆ. ಗ್ರಾಮಸ್ಥರಿಂದ ಬಂದ ಬೇಡಿಕೆಗಳನ್ನು ಮುಂದಿನ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಸ್ವಚ್ಛತೆಗೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ. ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ…”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ