ನೆಲ್ಯಾಡಿ: ಕೊಣಾಲುಗ್ರಾಮದ ಕೊಣಾಲುಗುತ್ತು ನಿವಾಸಿ, ಸಾಮಾಜಿಕ ಮುಖಂಡ ಸತೀಶ್ ರೈ(63ವ.)ರವರು ಮಾ.19ರಂದು ಸಂಜೆ 4 ಗಂಟೆ ವೇಳೆಗೆ ಮಂಗಳೂರಿನ ಇಂಡಿಯನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಶ್ ರೈ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಯಲ್ಲಿಯೇ ಇದ್ದರು. ಮೂರು ದಿನದ ಹಿಂದೆ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು ಮಂಗಳೂರಿನ ಇಂಡಿಯನ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮಾ.19ರಂದು ಸಂಜೆ 4 ಗಂಟೆ ವೇಳೆಗೆ ನಿಧನರಾದರು ಎಂದು ವರದಿಯಾಗಿದೆ.
ಅಪಾರ ದೈವ ಭಕ್ತರಾಗಿದ್ದ ಸತೀಶ್ ರೈ ಅವರು ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಸಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ, ಕೊಣಾಲು ಗ್ರಾಮದ ಕೊಣಾಲು ದೇವತೆ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಇವರ ಅವಧಿಯಲ್ಲಿ ಈ ಎರಡೂ ದೈವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ನಡೆದಿತ್ತು. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ಸತೀಶ್ ರೈ ಅವರು ನೆಲ್ಯಾಡಿ ಮಂಡಲ ಪಂಚಾಯತ್ ಸದಸ್ಯರಾಗಿ, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನೂ ನಿಭಾಯಿಸಿದ್ದರು. ಗೋಳಿತ್ತೊಟ್ಟು ಸರಕಾರಿ ಹಿ.ಪ್ರಾ.ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಇತ್ತೀಚೆಗೆ ನಡೆದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನೆಲ್ಯಾಡಿ ವಲಯ ಬಂಟರ ಸಂಘದ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು.
ಮೃತರು ಪತ್ನಿ ಚಿತ್ರಾವತಿ ಎಸ್.ರೈ, ಪುತ್ರ ಪ್ರತೀಕ್ಷ್ ರೈ, ಪುತ್ರಿ ಅಪೇಕ್ಷಾ, ಸಹೋದರರಾದ ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ಮುಂಬೈಯಲ್ಲಿ ನ್ಯೂ ಇಂಡಿಯ ಎನ್ಸೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ ಶ್ರೀಧರ ರೈ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಾ.20ರಂದು ಬೆಳಿಗ್ಗೆ ಕೊಣಾಲುಗುತ್ತು ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.