ಸಹಾಯಕ ಆಯುಕ್ತರ ಭೇಟಿ; 15 ದಿನದೊಳಗೆ ಸ್ಪಂದಿಸುವ ಭರವಸೆ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಶಿರಾಡಿ ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಮಾ.20ರಂದು ಬೆಳಿಗ್ಗೆ ಗ್ರಾಮಸ್ಥರು ಶಿರಾಡಿ ಗ್ರಾಮದ ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸ್ಪೆಲ್ಲಾ ವರ್ಗೀಸ್ ಅವರು ಮನವಿ ಸ್ವೀಕರಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ 15 ದಿನದೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಿರಾಡಿ ಗ್ರಾ.ಪಂ.ಸದಸ್ಯ ಎಂ.ಕೆ.ಪೌಲೋಸ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಈ ಭಾಗದ ಜನರಿಗೆ ಆಗುತ್ತಿರುವ ಸಮಸ್ಯೆಯ ವಿರುದ್ಧ 2 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್ ಸಾಮಾನ್ಯ ಸಭೆ, ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ಪತ್ರ ವ್ಯವಹಾರ ಮಾಡಿದರೂ ರಾಷ್ಟ್ರೀಯ ಹೆದ್ದಾರಿಯವರು ಕ್ಯಾರೇ ಎನ್ನುತ್ತಿಲ್ಲ. ಈಗ ಕಾಮಗಾರಿ ಕೊನೆ ಹಂತದಲ್ಲಿದ್ದು ಯು ಟರ್ನ್ ಬದಲಾಯಿಸಿ 3 ಕಿ.ಮೀ. ದೂರದಲ್ಲಿ ಕೊಡುತ್ತಿದ್ದಾರೆ. ಅಡ್ಡಹೊಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಬೇಕಾದಲ್ಲಿ 3 ಕಿ.ಮೀ.ದೂರದ ಶಿರಾಡಿಗೆ ಹೋಗಿ ಅಲ್ಲಿ ಯು ಟರ್ನ್ ಪಡೆದು ಬರಬೇಕಾಗಿದೆ. ಉದನೆಯಲ್ಲೂ ಪೇಟೆಗೆ ಬರಲು 1 ಕಿ.ಮೀ.ದೂರದಲ್ಲಿ ಯು ಟರ್ನ್ ಮಾಡಿ ಬರಬೇಕಾಗಿದೆ. ಉದನೆ ಸಂತಅಂತೋನಿ ಪ್ರೌಢಶಾಲೆ ಬಳಿಯ ಸಂಪರ್ಕ ರಸ್ತೆ ಅಗಲೀಕರಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರೂ ಈ ತನಕ ಮಾಡಿಲ್ಲ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಶಿರಾಡಿ ಭಾಗದ ಜನರಿಗೆ ಶಾಪವಾಗಿ ಪರಿಣಮಿಸಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರದ ಭರವಸೆ ನೀಡುವ ತನಕ ಧರಣಿ ನಡೆಸುವುದಾಗಿ ಹೇಳಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:
* ಶಿರಾಡಿಯಲ್ಲಿ ಎರಡು ಯು ಟರ್ನ್ ಕೊಟ್ಟಿದ್ದು ಇದನ್ನು ಬದಲಾವಣೆ ಮಾಡಬಾರದು.
*ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ಯು-ಟರ್ನ್ ಅಥವಾ ಸರ್ವೀಸ್ ರೋಡ್
*ಸಂತ ಜೋಸೆಫ್ ಚರ್ಚ್ ಬಳಿ ಇರುವ ಪಂಚಾಯತ್ ರಸ್ತೆ ಕಾಂಕ್ರೀಟೀಕರಣ
*ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ ಹಾಗೂ ಚರಂಡಿಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಕೆ
*ಉದನೆ ಸಂತ ಅಂತೋನಿ ಪ್ರೌಢಶಾಲೆಯ ಬಳಿ ಶಿಬಾಜೆ ಸಂಪರ್ಕ ರಸ್ತೆ ಅಗಲೀಕರಣ
*ಪೆರಿಯಶಾಂತಿಯಿಂದ ಅಡ್ಡಹೊಳೆ ತನಕ ನಡೆದಿರುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕಳಪೆಯಾಗಿದ್ದು ಪುನರ್ ಪರಿಶೀಲನೆ
ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ತಂಗಚ್ಚನ್ ಅವರು ಮಾತನಾಡಿ, ಅಡ್ಡಹೊಳೆಯಲ್ಲಿ ತಿರುವು ತೆಗೆದು ನೇರ ರಸ್ತೆ ನಿರ್ಮಾಣ ಮಾಡುವಂತೆ ಗ್ರಾ.ಪಂ. ಸಹಿತ ವಿವಿಧ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಮಾಡಿದರೂ ಸ್ಪಂದನೆ ನೀಡಿಲ್ಲ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಯುಟರ್ನ್ ಕೊಡದೇ ಇರುವುದರಿಂದ ಈ ಭಾಗದ ವೃದ್ಧರು, ಮಹಿಳೆಯರು, ವಿಕಲಚೇತನರು 3 ಕಿ.ಮೀ.ದೂರ ಸಂಚರಿಸಿ ಯು ಟರ್ನ್ ತೆಗೆದುಕೊಂಡು ಹೆದ್ದಾರಿಯ ಇನ್ನೊಂದು ಬದಿಗೆ ಬರಬೇಕಾಗಿದೆ. ಉದನೆ ಸಂತ ಅಂತೋನಿ ಪ್ರೌಢಶಾಲೆಯ ಬಳಿ ಆವರಣಗೋಡೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಇಲಾಖೆ ಹಾಗೂ ಗುತ್ತಿಗೆದಾರರು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಸಹಾಯಕ ಆಯುಕ್ತರಿಗೆ ಮನವಿ ನೀಡಿದ ಬಳಿಕ ಮಾತನಾಡಿದ ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅವರು, ಸಹಾಯಕ ಆಯುಕ್ತರು 15 ದಿನದೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ಜನರ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿಯೂ ಹೇಳಿದ್ದಾರೆ. ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಗ್ರಾ.ಪಂ.ನಿಂದಲೂ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮಸ್ಥರು ಬಿಟ್ಟುಕೊಟ್ಟಿರುವ ಜಾಗದಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಜನರ ಬೇಡಿಕೆಗೆ ಇಲಾಖೆಯವರು ಸ್ಪಂದನೆ ನೀಡಬೇಕು. ಸಹಾಯಕ ಆಯುಕ್ತರ ಭರವಸೆಯಂತೆ 15 ದಿನ ಕಾಯುವ. ಆಗದೇ ಇದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವ. ಗ್ರಾಮಸ್ಥರೊಂದಿಗೆ ನಾವೂ ಇರುತ್ತೇವೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಜೋಸೆಫ್ ವಿ.ಎ., ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಆಶಾಲಕ್ಷ್ಮಣ್, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಗುಂಡ್ಯ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಭಾಸ್, ಅಡ್ಡಹೊಳೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಜಯನ್, ಶಿರಾಡಿ ಗ್ರಾ.ಪಂ.ಸದಸ್ಯ ಸಣ್ಣಿಜೋನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ಅಡ್ಡಹೊಳೆ, ರೇಖಾಜೋಯಿ ಕಾರ್ಯಕ್ರಮ ನಿರೂಪಿಸಿದರು.
ಹೋರಾಟ ಸಮಿತಿ ಕಾರ್ಯದರ್ಶಿ ತೋಮಸ್ ವಿ.ಜೆ., ಉಪಾಧ್ಯಕ್ಷ ಪ್ರಕಾಶ್ ಅಡ್ಡಹೊಳೆ, ಶಿರಾಡಿ ಗ್ರಾ.ಪಂ.ಸದಸ್ಯ ಲಕ್ಷ್ಮಣ ಗೌಡ ಕುದ್ಕೋಳಿ, ಕೊಂಬಾರು ಗ್ರಾ.ಪಂ.ಸದಸ್ಯೆ ಸರಿತಾ, ಉತ್ತಮನ್, ಸುರೇಶ್ ಸೇರಿದಂತೆ 200ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ತ್;
ನ್ಯಾಯ ಸಿಗದೇ ಇದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಜನಪ್ರತಿನಿಧಿಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ನೀಡಿದ್ದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ಗಳಾದ ರವಿ ಬಿ.ಎಸ್., ತಿಮ್ಮಪ್ಪ ನಾಯ್ಕ್, ಎಸ್.ಐ.ಗಳಾದ ಅಕ್ಷಯ್ ಢವಗಿ, ರುಕ್ಮ ನಾಯ್ಕ್ ಹಾಗೂ ಎಎಸ್ಐ, ಹೆಡ್ಕಾನ್ಸ್ಸ್ಟೇಬಲ್, ಕಾನ್ಸ್ಸ್ಟೇಬಲ್ಗಳು ಬಂದೋಬಸ್ತ್ನಲ್ಲಿ ನಿರತರಾಗಿದ್ದರು. ಕೆಲ ತಿಂಗಳ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಗುಂಡ್ಯದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮನವಿ ಸ್ವೀಕರಿಸಲು ಸಹಾಯಕ ಆಯುಕ್ತರು ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಗುಂಡ್ಯ ಜಂಕ್ಷನ್ನಲ್ಲಿ ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ತಡೆ ತಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಹಾಯಕ ಆಯುಕ್ತರ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸ್ಪೆಲ್ಲಾ ವರ್ಗೀಸ್ ಅವರು ಭೇಟಿ ನೀಡಿ ಜನರಿಂದ ಅಹವಾಲು ಪಡೆದುಕೊಂಡರು. ಹೋರಾಟ ಸಮಿತಿಯವರಿಂದ ಮನವಿ ಸ್ವೀಕರಿಸಿದ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜೊತೆಯೂ ಚರ್ಚೆ ನಡೆಸಿದರು. ಬಳಿಕ ಹೋರಾಟ ಸಮಿತಿಯವರ ಜೊತೆ ಮಾತನಾಡಿದ ಸ್ಪೆಲ್ಲಾ ವರ್ಗೀಸ್ ಅವರು, 15 ದಿನದೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು. ಆಗದೇ ಇದ್ದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು. ಸಹಾಯಕ ಆಯುಕ್ತರ ಭರವಸೆಗೆ ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದುಕೊಂಡರು. ಸಹಾಯಕ ಆಯುಕ್ತರ ಜೊತೆಗೆ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಶಿರಾಡಿ ಗ್ರಾಮ ಆಡಳಿತಾಧಿಕಾರಿ ಸಂತೋಷ್, ಶಿರಾಡಿ ಗ್ರಾ.ಪಂ.ಪಿಡಿಒ ಯಶವಂತ ಬೆಳ್ಚಡ ಉಪಸ್ಥಿತರಿದ್ದರು.