ರಾಜಕೀಯಕ್ಕೂ, ಚದುರಂಗದಾಟಕ್ಕೂ ಅವಿನಾಭಾವ ಸಂಬಂಧ : ಸಭಾಧ್ಯಕ್ಷ ಯು.ಟಿ. ಖಾದರ್
ಬೆಂಗಳೂರು: ರಾಜಕೀಯಕ್ಕೂ ಚದುರಂಗದಾಟಕ್ಕೂ ಅವಿನಾಭಾವ ಸಂಬಂಧವಿದ್ದು, ಚೆಸ್ ಬದುಕಿಗೆ ಪೂರಕವಾದ ಕ್ರೀಡೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ವಿಧಾನಸೌಧದಲ್ಲಿ ಏಪ್ರಿಲ್ 10 ರಿಂದ 18 ರವರೆಗೆ ನಡೆಯಲಿರುವ “ನಮ್ಮ ಬೆಂಗಳೂರು ಇಂಟರ್ನ್ಯಾಷನಲ್ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್” ನ ಪೋಸ್ಟರ್ ಅನಾವರಣಗೊಳಿಸಿ, ಮಾತನಾಡಿದ ಅವರು, ಒಂದು ಹೆಜ್ಜೆ ಮುಂದೆ ಸಾಗಬೇಕು ಎಂದರೆ ಎರಡು ಹೆಜ್ಜೆ ಹಿಂದೆ ಇಡಬೇಕಾಗುತ್ತದೆ. ಎಲ್ಲಿ ಚೆಕ್ ಮೆಟ್ ಇಡಬೇಕು ಎಂಬುದನ್ನು ಚೆಸ್ ನಿಂದ ಕಲಿಯುತ್ತೇವೆ. ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ಚೆಸ್ ಅತ್ಯಂತ ಮುಖ್ಯ ಎಂದರು.

ಚೆಸ್ ಬುದ್ದಿವಂತರ ಕ್ರೀಡೆ ಎನ್ನಲಾಗುತ್ತಿತ್ತು. ಇದೀಗ ಮಕ್ಕಳಿಗೆ ಬುದ್ದಿ ಬರಲು ಆಡುವ ಆಟವಾಗಿದೆ. ಜೀವನಕ್ಕೂ, ಚೆಸ್ ಗೂ ಸಂಬಂಧವಿದೆ. ಮಾನಸಿಕ ಆರೋಗ್ಯಕ್ಕೆ ಚೆಸ್ ಅತ್ಯಂತ ಅಗತ್ಯವಾಗಿದೆ. ಮೊದಲ ಬಾರಿಗೆ ಸ್ಪೀಕರ್ ಆದ ಸಂದರ್ಭದಲ್ಲಿ ಬೆಂಗಳೂರು ಚೆಸ್ ಟೂರ್ನಿ ಆಯೋಜಿಸಲಾಗಿತ್ತು. ಆಗಲೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಏರ್ಪಡಿಸುವಂತೆ ಸಲಹೆ ಮಾಡಿದ್ದೆ. ಅದೀಗ ಸಾಕಾರಗೊಳ್ಳುತ್ತಿದೆ. ಗುಕೇಶ್ ದೊಮ್ಮರಾಜು ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವ ಚಾಂಪಿಯನ್ ಆಗಿದ್ದು, ಮುಂದೆ ನಮ್ಮ ಕರ್ನಾಟಕದವರೂ ಸಹ ಇಂತಹ ಅನನ್ಯ ಸಾಧನೆ ಮಾಡುವಂತಾಗಲಿ ಎಂದರು.
ಚೆಸ್ ಗೆ ತಾಳ್ಮೆ, ಬದ್ಧತೆ ಇರಬೇಕಾಗುತ್ತದೆ. ಮಕ್ಕಳಿಗೆ ಇದು ಅತ್ಯುತ್ತಮ ಪ್ರೇರಣೆಯಾಗಿದ್ದು,, ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ವಿಶ್ವ ಮಟ್ಟದಲ್ಲಿ ಭಾರತ ದೇಶದ ಕ್ರೀಡಾ ಪಟುಗಳು ಚೆಸ್ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಮ್ಮ ರಾಜ್ಯ ಚೆಸ್ ಸೇರಿದಂತೆ ಎಲ್ಲಾ ರೀತಿಯ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಟೂರ್ನಿ ವಿಶ್ವದ ಚೆಸ್ ಪಂದ್ಯಾವಳಿಗಳಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ ಅಜಯ್ ಧರಮ್ ಸಿಂಗ್ ಮಾತನಾಡಿ, ಇದು ಉತ್ತಮ ಬೆಳವಣಿಯಾಗಿದ್ದು, ಮೊದಲ ಆವೃತ್ತಿಯಲ್ಲಿ 28 ದೇಶಗಳು ಭಾಗವಹಿಸಿದ್ದವು. ಈ ಬಾರಿಯೂ ಹೆಚ್ಚಿನ ದೇಶಗಳು ಪಾಲ್ಗೊಳ್ಳುತ್ತಿವೆ. ಒಂದು ವರ್ಷದ ಹಿಂದೆ ಶಾಸಕರ ಕಪ್ ಚೆಸ್ ಟೂರ್ನಿ ಆಯೋಜಿಸಲಾಗಿತ್ತು. ಇಂತಹ ಮಹತ್ವದ ಕ್ರೀಡಾ ಕೂಟ ಆಯೋಜಿಸುತ್ತಿರುವ ಆಯೋಜಕರಿಗೆ ಅಭಿನಂದನೆ ಎಂದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಸೌಮ್ಯ ಎಂ. ಯು ಮಾತನಾಡಿ, ಏಪ್ರಿಲ್ 10 ರಿಂದ 18 ರವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. 55,00,000 ರೂ. ನಗದು ಬಹುಮಾನ ನೀಡಲಾಗುವುದು. ಬೆಂಗಳೂರು ಅಂತರರಾಷ್ಟ್ರೀಯ ಗ್ರ್ಯಾಂಡ್ ಟೂರ್ನಿ ಸಮಿತಿಯ ಸಹಯೋಗದೊಂದಿಗೆ ಬೆಂಗಳೂರು ಇಂಟರ್ನ್ಯಾಷನಲ್ ಗ್ರಾಂಡ್ ಮಾಸ್ಟರ್ ಟೂರ್ನಮೆಂಟ್ ಸಮಿತಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಗ್ರ್ಯಾಂಡ್ಮಾಸ್ಟರ್ಗಳು (ಜಿಎಂಗಳು), ಅಂತಾರಾಷ್ಟ್ರೀಯ ಮಾಸ್ಟರ್ಗಳು (ಐಎಂಗಳು) ಮತ್ತು ಉದಯೋನ್ಮುಖ ತಾರೆಗಳು ಸೇರಿದಂತೆ 15 ದೇಶಗಳಿಂದ 1300 ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ, ಇದು ಚೆಸ್ ಉತ್ಸಾಹಿಗಳಿಗೆ ಉತ್ಕೃಷ್ಟ ಮಟ್ಟದ ಆಟ ವೀಕ್ಷಿಸುವ ಅಪರೂಪದ ಅವಕಾಶವಾಗಿದೆ. ಚೆಸ್ ಆಟವನ್ನು ಉತ್ತೇಜಿಸುವ ಜೊತೆಗೆ ಅನುಭವಿ ವೃತ್ತಿಪರರೊಂದಿಗೆ ಸ್ಪರ್ಧಿಸುವ ಅವಕಾಶವನ್ನು ಒದಗಿಸುವ ಮೂಲಕ ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸುವ ಗುರಿ ಹೊಂದಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ, ಕರ್ನಾಟಕ ಓಲಂಪಿಕ್ ಅಸೋಷಿಯೇಷನ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ ಗೋವಿಂದರಾಜ್, ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳಾದ ಎಂ.ಕೆ ವಿಶಾಲಾಕ್ಷಿ, ವಿಧಾನಪರಿಷತ್ತಿನ ಕಾರ್ಯದರ್ಶಿಗಳಾದ ಕೆ. ಆರ್ ಮಹಾಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪಾಲ್ಗೊಂಡಿದ್ದ ಗಣ್ಯರು ಚೆಸ್ ಬೋರ್ಡ್ನಲ್ಲಿ ಆಟವಾಡಿ ಎಲ್ಲರ ಗಮನ ಸೆಳೆದರು.