ಸಾಧಕ-ಬಾಧಕಗಳ ಬಗ್ಗೆ ಚರ್ಚೆಗ್ರೀನ್ ಎನರ್ಜಿ ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಕಟ್ಟಡ ನಿರ್ಮಾಣ-ಗುರುಪ್ರಸಾದ್
ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ೨೦೨೫-೨೬ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ತಾಲೂಕಿನ ಸೇಡಿಯಾಪು ಎಂಬಲ್ಲಿ ಕಾದಿರಿಸಿದ ಜಾಗಕ್ಕೆ ಮಾ.23ರಂದು ಆರೋಗ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಶಾಸಕರ ಸಹಿತ ಜನಪ್ರತಿನಿಧಿಗಳ ಜೊತೆಗೆ ಸ್ಥಳೀಯ ನಿವಾಸಿ ವಿಶ್ವಪ್ರಸಾದ್ ಸೇಡಿಯಾಪುರವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದರು.
ನಂತರ ಮಾತನಾಡಿದ ಆರೋಗ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್‌ರವರು, ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಡಿಪಿಆರ್ ಮಾಡಿ ವರದಿ ನೀಡುವಂತೆ ಮುಖ್ಯ ಇಂಜಿನೀಯರ್‌ರವರು ಬಜೆಟ್ ಆದ ಮಾರನೇ ದಿನವೇ ಸೂಚಿಸಿದ್ದಾರೆ. ಇಲ್ಲಿ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಮಾರ್ಗಸೂಚಿಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ವರ್ಷಕ್ಕೆ 250 ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. 300 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿದ್ದು ಪ್ರಥಮ ಹಂತದಲ್ಲಿ 25 ರಿಂದ 30 ಸಾವಿರ ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ. ಎಲ್ಲವೂ ಒಂದೇ ಹಂತದಲ್ಲಿ ಮುಗಿಯುವುದಿಲ್ಲ. ಪ್ರಕೃತಿಯನ್ನು ಉಳಿಸಿಕೊಂಡು ಗ್ರೀನ್ ಎನರ್ಜಿ ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ಸರಕಾರದ ಸೂಚನೆ ಮೇಲೆ ಬಂದಿದ್ದಾರೆ: ಅಶೋಕ್ ರೈ;
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು ನಿರ್ಮಾಣವಾಗುವ ಮೂಲಕ ಪುತ್ತೂರು ಮೆಡಿಕಲ್ ಹಬ್ ಆಗಬೇಕು. ಸೇಡಿಯಾಪುನಲ್ಲಿ 40 ಎಕರೆ ಜಾಗವಿದ್ದು ಮೆಡಿಕಲ್ ಕಾಲೇಜಿಗೆ 20 ಎಕರೆ ಜಾಗದ ಅವಶ್ಯಕತೆಯಿದೆ. ಇಲ್ಲಿ ಆಯುರ್ವೇದ ಕಾಲೇಜು ಸಹ ಮಾಡಬಹುದು. ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ವೇಳೆ ಮೆಡಿಕಲ್ ಕಾಲೇಜಿಗಾಗಿ 40 ಎಕರೆ ಜಾಗ ಕಾದಿರಿಸಿದ್ದರು. ನಂತರ ಬಿಜೆಪಿ ಸರಕಾರದ 5 ವರ್ಷದ ಅವಧಿಯಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಾನು ಶಾಸಕನಾಗಿ ಬಂದ ಹತ್ತೇ ದಿನದಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಕಡತವನ್ನು ಸರಕಾರಕ್ಕೆ ಕಳಿಸಿಕೊಟ್ಟಿದ್ದೇನೆ. ಮೆಡಿಕಲ್ ಕಾಲೇಜಿಗಾಗಿ ಈ ಭಾಗದ ಪ್ರಮುಖರು ಪಕ್ಷಾತೀತವಾಗಿ ಹೋರಾಟ ಮಾಡಿದ್ದಾರೆ. ಆದರೂ ಪುತ್ತೂರಿಗೆ ಬರುವ ಬಗ್ಗೆ ಸಂಶಯಗಳಿತ್ತು. ಏಳು ತಿಂಗಳ ನಿರಂತರ ಪ್ರಯತ್ನದಿಂದ ಈಗ ಬಂದಿದೆ. ಜಾಗದ ಪರಿಶೀಲನೆಗೆ ಅಧಿಕಾರಿಗಳನ್ನು ನಾನು ಕರೆದಿಲ್ಲ. ಸರಕಾರದ ಸೂಚನೆ ಮೇರೆಗೆ ಬಂದು ಪರಿಶೀಲನೆಗೆ ಬಂದಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಶ್ನಿಸಿ ಗೊಂದಲ ಸೃಷ್ಠಿಸಿದವರಿಗೆ ಉತ್ತರ ಸಿಕ್ಕಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳಿಂದಲೇ ಶಿಲಾನ್ಯಾಸ:
ಮೆಡಿಕಲ್ ಕಾಲೇಜು ಕಟ್ಟಡದ ಮಾಸ್ಟರ್ ಪ್ಲಾನ್ ಮಾಡಿ ಜಾಗ ಸಮತಟ್ಟು ಮಾಡಲಾಗುವುದು. ಬಜೆಟ್‌ನಲ್ಲಿ ಘೋಷಿಸಿರುವ ಕನಿಷ್ಟ 300 ಬೆಡ್‌ನ ಆಸ್ಪತ್ರೆಗೆ ಮುಖ್ಯಮಂತ್ರಿಗಳನ್ನೇ ಆಹ್ವಾನಿಸಿ ಶಿಲಾನ್ಯಾಸ ನೆರವೇರಿಸಲಾಗುವುದು. ನಂತರ ಮೆಡಿಕಲ್ ಕಾಲೇಜು ಮಾಡಲಾಗುವುದು. 15-20 ಎಕ್ರೆಗೆ ಸೀಮಿತವಾಗಿ ಮಾಸ್ಟರ್ ಪ್ಲಾನ್ ಮಾಡಿ, ಉಳಿದ ಜಾಗದಲ್ಲಿ ಆಯುರ್ವೇದ ಕಾಲೇಜು, ನರ್ಸಿಂಗ್ ಕಾಲೇಜು ಮಾಡುವ ಯೋಜನೆ ಇದೆ. ಇಲ್ಲಿಂದ ಒಂದೂವರೇ ಕಿ.ಮೀ ದೂರದಲ್ಲಿ ಕೋರ್ಟ್ ನಿರ್ಮಾಣಗೊಂಡಿದೆ. ಇಲ್ಲಿಗೆ ಸಮೀಪದಲ್ಲಿಯೇ ರೂ.300 ಕೋಟಿಯ ಉದ್ದಿಮೆಯೊಂದು ಆರಂಭವಾಗಲಿದ್ದು 1500ಮಂದಿಗೆ ಉದ್ಯೋಗ ಸಿಗಲಿದೆ. ಅದಕ್ಕೆ 25 ಎಕ್ರೆ ಜಾಗ ಮೀಸಲಿಡಲಾಗುವುದು. ಇದು ಅಶೋಕ್ ರೈ, ಶಕುಂತಲಾ ಶೆಟ್ಟಿ ಅಥವಾ ಕಾಂಗ್ರೆಸ್ ಪಕ್ಷ ಒಂದೇ ಮಾಡಿರುವುದಲ್ಲ. ಪುತ್ತೂರಿನ ಅಭಿವೃದ್ದಿಗೆ ಮಾಡಿದ್ದು. ಜನರಿಗೆ ಸದುಪಯೋಗವಾಗಬೇಕೆಂದು ಹೇಳಿದರು.
ಮಂಗಳೂರಿಗಿಂತ ಪುತ್ತೂರು ಹೆಚ್ಚು ಅಭಿವೃದ್ಧಿ ಆಗಲಿದೆ-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಸೇಡಿಯಾಪುನಲ್ಲಿ ಮೆಡಿಕಲ್ ಕಾಲೇಜಿಗೆ ನಿಗದಿಗೊಳಿಸಿರುವ ಜಾಗಕ್ಕೆ ಎಲ್ಲಾ ಭಾಗಗಳಿಂದಲೂ ರಸ್ತೆ ಸಂಪರ್ಕಗಳಿವೆ. ಎಲ್ಲಾ ತಾಲೂಕುಗಳಿಗೂ ಇದು ಕೇಂದ್ರ ಭಾಗವಾಗಿದೆ. ನಗರದ ಮಧ್ಯಭಾಗದಲ್ಲಿ ೪೦ ಎಕ್ರೆ ಜಾಗ ದೊರೆಯಲೂ ಸಾಧ್ಯವಿಲ್ಲ. ಯು.ಟಿ.ಖಾದರ್ ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಲು ಪ್ರಯತ್ನಿಸಿದ್ದರು. ರಮಾನಾಥ ರೈಯವರು ಬಂಟ್ವಾಳದಲ್ಲಿ ಪ್ರಯತ್ನಿಸಿದ್ದರು. ನಾನು ಶಾಸಕಿಯಾಗಿದ್ದಾಗ ಪ್ರತಿ ಸಲ ಜಗಳ ಮಾಡುವುದನ್ನು ನೋಡಿ ಪುತ್ತೂರಿನಲ್ಲಿಯೇ ಮಾಡಿ ಎಂದಿದ್ದರು. ಮೆಡಿಕಲ್ ಕಾಲೇಜು ಬಂದಾಗ ಎಲ್ಲಾ ವರ್ಗದ ಜನರಿಗೂ ಉದ್ಯೋಗ ದೊರೆಯಲಿದೆ. ಸಂಪಾಜೆ, ಕಾಸರಗೋಡು, ಶಿರಾಡಿ, ಚಾರ್ಮಾಡಿಯವರಿಗೂ ಪುತ್ತೂರು ಕೇಂದ್ರವಾಗಲಿದ್ದು ಇಲ್ಲಿಗೇ ಬರಲಿದ್ದಾರೆ. ಆಗ ಮಂಗಳೂರಿಗಿಂತ ಹೆಚ್ಚು ಪುತ್ತೂರು ಅಭಿವೃದ್ಧಿ ಆಗಲಿದೆ. ಪುತ್ತೂರು ಬೆಳೆಯಲು ಸಹಕಾರಿಯಾಗಲಿದೆ. ಪ್ರಸ್ತಾವನೆ ಸಲ್ಲಿಸಿ ಮೆಡಿಕಲ್ ಕಾಲೇಜು ಬರುವಂತೆ ಮಾಡಿದ ಅಶೋಕ್ ರೈಯವರಿಗೂ, ಮುಖ್ಯಮಂತ್ರಿಯವರಿರೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಉತ್ತರ; ಈಶ್ವರ ಭಟ್ ಪಂಜಿಗುಡ್ಡೆ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಮೆಡಿಕಲ್ ಕಾಲೇಜಿಗಾಗಿ ನಡೆದ ಹೋರಾಟದಲ್ಲಿ ಶಕುಂತಳಾ ಶೆಟ್ಟಿಯವರ ಅವಧಿಯಿಂದ ಈ ತನಕವೂ ನಾನು ಭಾಗವಹಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಧೂಳು ಹಿಡಿದಿದ್ದ ಕಡತಕ್ಕೆ ಈಗ ಅಧಿವೇಶನದಲ್ಲಿ ಮಂಜೂರಾತಿ ಸಿಕ್ಕಿದೆ. ಆದರೂ ಸಾಕಷ್ಟು ಟೀಕೆಗಳು ಬಂದಿದೆ. ಟೀಕೆ ಮಾಡುವವರು ಬೆಂಗಳೂರು ಕಂಬಳವನ್ನು ನೋಡಿ ಕಲಿಯಬೇಕು. ಹೇಳಿದ ಕೆಲಸ ಮಾಡದಿದ್ದರೆ ಅಶೋಕ್ ರೈಯವರಿಗೆ ನಿದ್ದೆ ಬರುವುದಿಲ್ಲ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಬೆಂಗಳೂರು ಕಂಬಳಕ್ಕಿಂತಲೂ ವೇಗವಾಗಿ ಮೆಡಿಕಲ್ ಕಾಲೇಜಿನ ಕನಸನ್ನು ನನಸು ಮಾಡಲಿದ್ದಾರೆ. ಇದಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದರು.
ನೂರಾರು ವರ್ಷಗಳ ಮರ ಉಳಿಸಿ-ವಿಶ್ವಪ್ರಸಾದ್ ಸೇಡಿಯಾಪು:
ಸ್ಥಳೀಯ ನಿವಾಸಿ ವಿಶ್ವಪ್ರಸಾದ್ ಸೇಡಿಯಾಪು ಮಾತನಾಡಿ, ಬನ್ನೂರು ಆರ್‌ಟಿಓ ಕಚೇರಿಯಿಂದ ಕುಂಟ್ಯಾನ ದೇವಸ್ಥಾನದ ಮೂಲಕ ಬರುವ ರಸ್ತೆಯು ಪುತ್ತೂರು ನಗರಕ್ಕೆ ಅತೀ ಹತ್ತಿರದ ರಸ್ತೆಯಾಗಿದೆ. ಇದಲ್ಲದೆ ಪೆರ್ನೆ, ಕೋಡಿಂಬಾಡಿ ಕೆಎ-ಡಿಸಿ ಜಾಗ, ಸೇಡಿಯಾಪು, ಕಜೆ ಸೇರಿದಂತೆ ಹಲವು ಭಾಗಗಳಿಂದ ರಸ್ತೆ ಸಂಪರ್ಕಗಳಿವೆ. ಈಗಿರುವ ರಸ್ತೆಗಳನ್ನೇ ಅಭಿವೃದ್ಧಿ ಮಾಡಿದರೆ ಉತ್ತಮ. ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ನೂರು ವರ್ಷಗಳ ನೇರಳೆ ಮರಗಳು, ಕಸಿ ಮಾವಿನ ಮರಗಳಿದ್ದು ಅವುಗಳನ್ನು ಉಳಿಸಿಕೊಳ್ಳಬೇಕು. ಶಕುಂತಲಾ ಶೆಟ್ಟಿಯವರ ಅವಽಯಲ್ಲಿ ಪ್ರಾರಂಭಿಸಿದ್ದು ಅಶೋಕ್ ಕುಮಾರ್ ರೈಯವರ ಹೋರಾಟದಿಂದ ಮಂಜೂರಾಗಿದೆ. ಇದು ಎಲ್ಲರಿಗೂ ಪ್ರಯೋಜನವಾಗಲಿದೆ ಎಂದರು.
ಮೆಡಿಕಲ್ ಕಾಲೇಜಿಗೆ ಸೇಡಿಯಾಪು ಸೂಕ್ತವಾಗಿದೆ-ಎಂ.ಎಸ್ ಮಹಮ್ಮದ್:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ಮೆಡಿಕಲ್ ಕಾಲೇಜು ಮಂಜೂರುಗೊಂಡಿರುವುದಕ್ಕೆ ಪುತ್ತೂರು ಮಾತ್ರವಲ್ಲ ಜಿಲ್ಲೆಯ ಜನತೆ ಸಂಭ್ರಮಿಸಬೇಕಾಗಿದೆ. ಇದು ದ.ಕ ಜಿಲ್ಲೆಯ ಅಭಿವೃದ್ಧಿಗೆ ಪೂರವಾಗಿದೆ. ಮೆಡಿಕಲ್ ಕಾಲೇಜಿಗೆ ಪುತ್ತೂರಿನ ಸೇಡಿಯಾಪು ಸೂಕ್ತವಾಗಿದೆ. ಇಂತಹ ಯೋಗ್ಯ ಸ್ಥಳ ಜಿಲ್ಲೆಯಲ್ಲಿ ದೊರೆಯಲು ಸಾಧ್ಯವಿಲ್ಲ. ಬಡ ವಿದ್ಯಾರ್ಥಿಗಳಿಗೆ ಹಾಗೂ ಮೆಡಿಕಲ್ ಕಲಿಯಲು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವೈದ್ಯರಾಗುವ ಅವಕಾಶ ಸಿಗಲಿದೆ. ಶಾಸಕರ ಈ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ. ಶಿಲಾನ್ಯಾಸ ಮಾಡುವ ಮೂಲಕ ಅಪಸ್ವರಗಳಿಗೆ ಶೀಘ್ರವಾಗಿ ಉತ್ತರ ನೀಡಬೇಕು ಎಂದರು.
ಶೀಘ್ರವಾಗಿ ಶಿಲಾನ್ಯಾಸ ನಡೆದು, ಕಾಲೇಜು ಉದ್ಘಾಟನೆಗೊಳ್ಳಲಿ -ಕೃಷ್ಣಪ್ರಸಾದ್ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಂಡಿದ್ದು ಪುತ್ತೂರಿನ ಜನತೆ ಸಂತಸದಲ್ಲಿದ್ದಾರೆ. ಇದಕ್ಕೆ ಅವಶ್ಯಕವಾದ ಜಾಗವನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಗುರುತಿಸಿಕೊಟ್ಟಿದ್ದಾರೆ. ಈ ಜಾಗ ಅತಿಕ್ರಮಣವಾಗದಂತೆ ಸ್ಥಳೀಯರಾದ ಜನಾರ್ದನ ಭಟ್ ಸೇಡಿಯಾಪು ಹಾಗೂ ವಿಶ್ವಪ್ರಸಾದ್ ಸೇಡಿಯಾಪು ಉಳಿಸಿಕೊಂಡಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶೀಘ್ರವಾಗಿ ಶಿಲಾನ್ಯಾಸ ನಡೆದು ಉದ್ಘಾಟನೆಗೊಳ್ಳಲಿ ಎಂದರು.
ಅಶೋಕ್ ರೈಯವರನ್ನು ಶಾಸಕರಾಗಿ ಆಯ್ಕೆ ಮಾಡಿರುವುದಕ್ಕೆ ಸಾರ್ಥಕವಾಗಿದೆ-ಹೇಮನಾಥ ಶೆಟ್ಟಿ ಕಾವು:
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಾಡುವುದಾಗಿ ತಿಳಿಸಿದ್ದೆವು. ಶೇ.೯೦ ಜನ ಸಾಧ್ಯವಿಲ್ಲ ಎಂದು ಹೇಳಿದ್ದರು. ಅಶೋಕ್ ಕುಮಾರ್ ರೈಯವರು ಅದನ್ನು ಸಾಽಸಿ ತೋರಿಸಿದ್ದು ಅವರನ್ನು ಶಾಸಕರಾಗಿ ಆಯ್ಕೆ ಮಾಡಿರುವುದಕ್ಕೆ ಸಾರ್ಥಕವಾಗಿದೆ. ಅವರ ಸಮಾಜಕ್ಕೆ ಮಾದರಿಯಾಗುವ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಬೇಕು. ಅಶೋಕ್ ಕುಮಾರ್ ರೈಯವರು ಕೇವಲ ಒಂದೂವರೇ ವರ್ಷದಲ್ಲಿ ಮಾಡಿದ ಸಾಧನೆ ಊಹಿಸಲು ಸಾಧ್ಯವಿಲ್ಲ. ಮೆಡಿಕಲ್ ಕಾಲೇಜು ಮಂಜೂರುಗೊಳಿಸಿ ಅದಿಕಾರಿಗಳಿಂದ ಜಾಗದ ಪರಿಶೀಲನೆ ಮಾಡಿರುವುದೇ ಇದಕ್ಕೆಲ್ಲಾ ದೊಡ್ಡ ಉತ್ತರ ಎಂದರು.
ಪ್ರಾಕೃತಿಕ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿ-ಅಮಳ ರಾಮಚಂದ್ರ:
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಮೆಡಿಕಲ್ ಕಾಲೇಜು ಬಜೆಟ್‌ನಲ್ಲಿ ಘೋಷಣೆಯಾಗಿರುವುದು ಶಾಸಕರ ಸಾಧನೆಯಾಗಿದೆ. ಅಶೋಕ್ ರೈಯವರ ಹೋರಾಟ ಯಶಸ್ವಿಯಾಗಿ ಸಾಗಿಬಂದಿದೆ. ಇದಕ್ಕಾಗಿ ಜಾಗ ಮೀಸಲಿಟ್ಟ ಕೀರ್ತಿ ಶಕುಂತಳಾ ಶೆಟ್ಟಿಯವರಿಗೆ ಸಲ್ಲಬೇಕು. ಅಪಸ್ವರಗಳು ಪಕ್ಷಾತೀತವಾಗಿ ಬಂದಿದೆ. ಸವಾಲು ಬಂದಷ್ಟು ಉತ್ತಮ. ಅದನ್ನು ಶಾಸಕರು ಈಡೇರಿಸಲಿದ್ದಾರೆ. ಮೀಸಲಿಟ್ಟ ಜಾಗದಲ್ಲಿರುವ ಪ್ರಾಕೃತಿಕವಾದ ಸೊಬಗನ್ನು ಉಳಿಸಿಕೊಂಡು ಪ್ರಾಕೃತಿಕ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿ ಎಂದರು.
ವರ್ತಕ ಸಂಘದ ಸಂಪೂರ್ಣ ಸಹಕಾರವಿದೆ: ಮನೋಜ್:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಮನೋಜ್ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಲ್ಲಿ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈವರನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಗೌರವಿಸಲಾಗುವುದು. ಇದಕ್ಕೆ ಎಲ್ಲಾ ವರ್ತಕರ ಸಂಪೂರ್ಣ ಸಹಕಾರವಿದೆ. ಮೆಡಿಕಲ್ ಕಾಲೇಜು ಪುತ್ತೂರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉದ್ಯಮ ಸೃಷ್ಟಿಸುವ ಯೋಜನೆಯಾಗಿದೆ. ಜೊತೆಗೆ ಊರಿನ ಅಭಿವೃದ್ಧಿಯೂ ಆಗಲಿದೆ. ಕಳೆದ ಅವಧಿಯಲ್ಲಿ ಡಬ್ಬಲ್ ಇಂಜಿನ್ ಸರಕಾರವಿದ್ದರೂ ಏನೂ ಇಲ್ಲದಂತಾಗಿದೆ. ಪುತ್ತೂರಿನ ಅಭಿವೃದ್ಧಿಗೆ ಶಾಸಕ ಅಶೋಕ್ ಕುಮಾರ್ ರೈಯವರ ಒಂದೇ ಇಂಜಿನ್ ಸಾಕು. ಮುಂದಿನ ೧೫ ವರ್ಷಗಳ ಅವಧಿಗೆ ಪುತ್ತೂರು ಜನತೆ ಅವರಿಗೆ ಅವಕಾಶ ಕೊಡಲಿದ್ದಾರೆ ಎಂದರು.
ಬಡವರ ಮನಸ್ಥಿತಿ ಬದಲಾಗಿದೆ-ಜಯಪ್ರಕಾಶ್ ಬದಿನಾರು:
ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಂತೆ ಪಂಚಾಯತ್‌ನ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮೆಡಿಕಲ್ ಕಾಲೇಜು ಮಂಜೂರುಗೊಳಿಸಿರುವುದಕ್ಕೆ ಕೋಡಿಂಬಾಡಿ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾಲೇಜು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ ಮೆಡಿಕಲ್ ವಿದ್ಯಾಭ್ಯಾಸ ಪಡೆಯುವುದು ಅಸಾಧ್ಯ ಎಂಬ ಬಡವರ ಮನಸ್ಥಿತಿ ಬದಲಾಗಿದೆ ಎಂದರು.
ಅಶೋಕ ಪರ್ವ ಪ್ರಾರಂಭವಾಗಿದೆ-ಪದ್ಮನಾಭ ಪೂಜಾರಿ:
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ, ಮೆಡಿಕಲ್ ಕಾಲೇಜು ಬಜೆಟ್‌ನಲ್ಲಿ ಮಂಜೂರಾಗಿ ಈಗ ಪ್ರಥಮ ಹಂತದಲ್ಲಿದ್ದೇವೆ. ಬಜೆಟ್‌ನಲ್ಲಿ ಘೋಷಣೆ ಆದ ನಂತರದಲ್ಲಿ ಬಂದ ಅಪಸ್ವರಗಳಿಗೆ ಉತ್ತರವಾಗಿ ಅಽಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಉತ್ತಮ ಕೆಲಸಗಳಿಗೆ ಮತ್ಸರ ಸಾಮಾನ್ಯ. ಪುತ್ತೂರಿನಲ್ಲಿ ಅಶೋಕ ಪರ್ವ ಪ್ರಾರಂಭವಾಗಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಕೀಲರ ಸಂಘದ ಬೆಂಬಲ: ಜಗನ್ನಾಥ ರೈ:
ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಜಿಲ್ಲಾ ನ್ಯಾಯಾಲಯವು ಉದ್ಘಾಟನೆಗೊಳ್ಳುವ ಹಂತದಲ್ಲಿದ್ದು ಇದೀಗ ಸರಕಾರಿ ಮೆಡಿಕಲ್ ಕಾಲೇಜು ಅದರ ಸಮೀಪದಲ್ಲಿ ನಿರ್ಮಾಣ ಆಗುತ್ತಿರುವುದು ಅಭಿವೃದ್ಧಿಗೆ ಒಂದಕ್ಕೊಂದು ಪೂರಕವಾಗಿದೆ. ಮೆಡಿಕಲ್ ಕಾಲೇಜಿನ ಅಭಿಯಾನಕ್ಕೆ ವಕೀಲದ ಸಂಘದ ಸಂಪೂರ್ಣ ಬೆಂಬಲವಿದೆ. ಉಡುಪಿ-ಮಂಗಳೂರಿನಂತೆ ಪುತ್ತೂರು-ಉಪ್ಪಿನಂಗಡಿ ಜೊತೆ ಜೊತೆಯಾಗಿ ಅಭಿವೃದ್ಧಿಯಾಗುತ್ತಿವೆ ಎಂದರು.
ಭವಿಷ್ಯದ ಮಕ್ಕಳಿಗೆ ಅನುಕೂಲವಾಗಲಿದೆ-ಆಸ್ಕರ್ ಆನಂದ್:
ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಅನಂದ್ ಮಾತನಾಡಿ, ಸರಕಾರಿ ಆಸ್ಪತ್ರೆಗೆ ಪ್ರತಿದಿನ ೮೦೦-೯೦೦ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಅಲ್ಲಿ ಮೂಲಭೂತ ಸೌಲಭ್ಯಗಳು, ವೈದ್ಯರ ಕೊರತೆಯ ಮಧ್ಯೆಯೂ ಉತ್ತಮ ಸೇವೆ ನೀಡಲಾಗುತ್ತಿದೆ. ಮೆಡಿಕಲ್ ಕಾಲೇಜು ನಿರ್ಮಾಣವಾಗಲಿರುವ ಪ್ರದೇಶವು ಉತ್ತಮ ಪ್ರಾಕೃತಿಕ ಸೌಂಧರ್ಯವನ್ನು ಒಳಗೊಂಡಿದೆ. ಇಲ್ಲಿ ಕಲಿತವರು ಉತ್ತಮ ವೈದ್ಯರಾಗಲಿದ್ದಾರೆ. ಭವಿಷ್ಯದ ಮಕ್ಕಳಿಗೆ ಅನುಕೂಲವಾಗಲಿದೆ. ಪುತ್ತೂರಿನ ಜನತೆಗೆ ಆರೋಗ್ಯ ದೃಷ್ಠಿಯಿಂದ ಮೆಡಿಕಲ್ ಕಾಲೇಜು ಮಾಡುತ್ತಿದ್ದು ಎಲ್ಲರೂ ಸಹಕರಿಸುವಂತೆ ಹೇಳಿದರು.
ಮಾಸ್ಟರ್ ಪ್ಲಾನ್ ಮಾಡಿಕೊಂಡು ಕಟ್ಟಡ ನಿರ್ಮಾಣವಾಗಬೇಕು; ಕ್ಸೇವಿಯರ್ ಡಿ ಸೋಜ:
ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಕಾರ್ಯದರ್ಶಿ ಕ್ಸೇವಿಯರ್ ಡಿ ಸೋಜ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜಿಗಾಗಿ ಹೋರಾಟ ಸಮಿತಿಯು ಸಾಕಷ್ಟು ಶ್ರಮಿಸಿದೆ. ತಳಮಟ್ಟದಲ್ಲಿ ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಹಲವರು ಆರ್ಥಿಕ ಸಹಕಾರ ನೀಡಿದ್ದಾರೆ. ಹಲವು ಮಂದಿ ಸಹೃದಯಿಗಳು ಪ್ರೇರಣೆ, ಸಹಕಾರ ದೊರೆತಿದೆ. ಈಗ ಬಜೆಟ್‌ನಲ್ಲಿ ಮಂಜೂರುಗೊಂಡಿದ್ದು ಸಮಗ್ರವಾದ ಮಾಸ್ಟರ್ ಪ್ಲಾನ್ ಮಾಡಿಕೊಂಡು ಕಟ್ಟಡಗಳ ನಿರ್ಮಾಣವಾಗಬೇಕು. ಸರಕಾರಿ ಶಾಲಾ ಕಟ್ಟಡಗಳಂತೆ ನಿರ್ಮಿಸಬಾರದು. ಅತೀ ಕಡಿಮೆ ಅವಽಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಉತ್ತರ ಕರ್ನಾಟಕದ ಶಾಸಕರ ಮಾದರಿಯಲ್ಲಿ ಹಠ ಹಿಡಿದು ಮೆಡಿಕಲ್ ಕಾಲೇಜು ಮಂಜೂರುಗೊಳಿಸಿದ್ದಾರೆ ಎಂದರು.
ಈಗಿನ ಸರಕಾರಿ ಆಸ್ಪತ್ರೆ ಉಳಿಸಿಕೊಳ್ಳಬೇಕು: ಡಾ.ಆಶಾ ಪುತ್ತೂರಾಯ:
ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಮಾತನಾಡಿ, ನೂರು ಬೆಡ್‌ಗಳಿಂದ ಕೂಡಿರುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಎಲ್ಲಾ ವಿಭಾಗಗಳಲ್ಲಿಯೂ ಒಬ್ಬೊಬ್ಬರು ಮಾತ್ರ ಇದ್ದಾರೆ. ಇಲ್ಲಿಗೆ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ, ಕಾಸರಗೋಡುಗಳಿಂದಲೂ ರೋಗಿಗಳು ಬರುತ್ತಿದ್ದು ವೆನ್‌ಲಾಕ್ ನಂತರ ಅತ್ಯಽಕ ಹೊರರೋಗಿಗಳು ಬರುವ ಆಸ್ಪತ್ರೆಯಾಗಿದೆ. ಹೀಗಾಗಿ ಆಸ್ಪತ್ರೆ ಅಭಿವೃದ್ಧಿಯಾಗಬೇಕಿದೆ. ಸದ್ರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಬೇಡಿಕೆ ಸಲ್ಲಿಸಲಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿದರೆ ರೋಗಿಗಳನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳಿಸುವ ಅವಶ್ಯಕತೆಯಿಲ್ಲ. ಮೆಡಿಕಲ್ ಕಾಲೇಜು ಬಂದಾಗ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ. ಇರುವ ಆಸ್ಪತ್ರೆ ಉಳಿಸಿಕೊಂಡು ಮೆಡಿಕಲ್ ಕಾಲೇಜು ಮಾಡುವಂತೆ ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಿದ್ದೀಕ್ ಸುಲ್ತಾನ್, ಅನ್ವರ್ ಕಬಕ, ವಿಕ್ಟರ್ ಪಾಯಸ್, ಈಶ್ವರ್ ಬೆಡೇಕರ್ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಹಂತ ಹಂತವಾಗಿ ಕಾಮಗಾರಿ
ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಮಾರ್ಗಸೂಚಿಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ಎಲ್ಲವೂ ಒಂದೇ ಹಂತದಲ್ಲಿ ಮುಗಿಯುವುದಿಲ್ಲ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿದ್ದು ಪ್ರಥಮ ಹಂತದಲ್ಲಿ 25 ರಿಂದ 30 ಸಾವಿರ ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ.
-ಗುರುಪ್ರಸಾದ್ ಎಇಇ
ಆರೋಗ್ಯ ಇಲಾಖೆ