
ನೆಲ್ಯಾಡಿ: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿ ಇಲ್ಲಿನ ಮಾನವಿಕ ಸಂಘ ಮತ್ತು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಶ್ರಯದಲ್ಲಿ ಯುವನಿಧಿ ಯೋಜನೆ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಾಗಾರ ಮಾ.೨೪ರಂದು ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಮಾನವಿಕ ಸಂಘದ ಸಂಚಾಲಕರಾದ ಡಾ. ಸೀತಾರಾಮ ಪಿ. ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಉದ್ಘಾಟಿಸಿ ಮಾತನಾಡಿ, ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ರೂಪಿಸಿದೆ. ಈ ಯೋಜನೆಗಳು ಫಲಾನುಭವಿಗಳಿಗೆ ಸೂಕ್ತವಾಗಿ ತಲುಪಬೇಕು. ಹಾಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಯೋಜನೆಗಳ ಫಲವನ್ನು ಸದ್ಭಳಕೆ ಮಾಡಿಕೊಳ್ಳಿ. ಯುವನಿಧಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಭದ್ರ ಬುನಾದಿ ಹಾಕಲಿ ಎಂದರು. ಮಂಗಳೂರು ಉದ್ಯೋಗ ವಿನಿಮಯ ಕೇಂದ್ರದ ಟ್ರೈನರ್ ಕಂ ಕೌನ್ಸಿಲರ್ ಮಂಜೂಷ ಮಾಹಿತಿ ನೀಡಿದರು.
ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಅವಿನಾಶ ಬೈತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿ ಪಡೆದ ನಂತರ ಮನೆಯವರನ್ನು ಅವಲಂಬಿಸುವ ಬದಲು ಯುವಕರಿಗೆ ಯುವನಿಧಿಯಂತಹ ಯೋಜನೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಕನ್ನಡ ಉಪನ್ಯಾಸಕ ಡಾ.ನೂರಂದಪ್ಪ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರುತಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.