- ಶ್ರೀ ದೇವರ ಅವಭೃತ ಸ್ಥಳ ಸ್ವಚ್ಛತೆಗೆ ಕ್ರಮ
- ತಾತ್ಕಾಲಿಕ ಶೌಚಾಲಯ, ವಸ್ತ್ರ ಬದಲಾವಣೆ ಕೊಠಡಿ
- ಪ್ರವಾಹಕ್ಕೆ ವಾಲಿದ ಆವರಣಗೋಡೆ ತೆರವಿಗೆ ಕ್ರಮ
- ಆವರಣಗೋಡೆ ಬದಲಿ ವ್ಯವಸ್ಥೆ ಶೀಘ್ರ
- ಹೊಳೆ ದಡದಲ್ಲಿರುವ ಕಾಡುಹುಲ್ಲು ತೆರವಿಗೆ ಕ್ರಮ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವೀರಮಂಗಲದ ಜಲಕದ ಸ್ಥಳದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ದೇವರೊಂದಿಗೆ ಬರುವ ಭಕ್ತರಿಗೆ ಅದರಲ್ಲೂ ವಿಶೇಷವಾಗಿ ಭಕ್ತರ ಬೇಡಿಕೆಯಂತೆ ಮಹಿಳೆಯರಿಗೆ ವಸ್ತ್ರ ಬದಲಾವಣೆಗಾಗಿ ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದ್ದಾರೆ.

ಎ.೧೦ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳುವ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.೧೭ರಂದು ಬ್ರಹ್ಮರಥೋತ್ಸವ ಬಳಿಕ ಎ.೧೮ರಂದು ಶ್ರೀ ದೇವರ ಅವಭೃತ ಸವಾರಿ ಪೂರ್ಣಗೊಂಡು ಎ.೧೯ರ ಬೆಳಗ್ಗಿನ ಜಾವ ವೀರಮಂಗಲ ಕುಮಾರಧಾರ ಹೊಳೆಯಲ್ಲಿ ಅವಭೃತ ಸ್ನಾನ ನಡೆಯುವ ಸ್ಥಳದಲ್ಲಿ ಈಗಾಗಲೇ ಹೊಳೆಯಲ್ಲಿ ನೀರಿನ ಮಟ್ಟ ಮತ್ತು ಪರಿಸರದಲ್ಲಿ ಮೂಲ ಸೌಕರ್ಯದ ಕುರಿತು ಸ್ಥಳೀಯ ಭಕ್ತರ ಮೂಲಕ ಮಾಹಿತಿ ಪಡೆದು ಸುದ್ದಿಯೊಂದಿಗೆ ಮಾತನಾಡಿದರು. ಜಲಕದ ಸಮೀಪದ ಕಾಡು ಹುಲ್ಲುಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಗುವುದು. ಬಹಳಷ್ಟು ಭಕ್ತರ ಬೇಡಿಕೆಯಂತೆ ಶ್ರೀ ದೇವರ ಜೊತೆ ವೀರಮಂಗಳಕ್ಕೆ ಬರುವ ಮಹಿಳೆಯರಿಗೆ ಸ್ನಾನ ಗಟ್ಟದ ಬಳಿ ವಸ್ತ್ರ ಬದಲಾವಣೆಗೆ ಮತ್ತು ಶೌಚಾಲಯ ವ್ಯವಸ್ಥೆಗೆ ಈ ಭಾರಿ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಈ ಭಾಗದ ಮಹಾಲಿಂಗೇಶ್ವರ ದೇವರ ಅವಭೃತ ಕಟ್ಟೆ ಸಮಿತಿಯವರು ಪೂರ್ಣ ಸಹಕಾರ ನೀಡುತ್ತಿದ್ದಾರೆ.
ಹೊಳೆಯ ನೀರಿನ ಮಟ್ಟ ಕಡಿಮೆ ಆಗದಂತೆ ಮುಂದೆ ಅವಭೃತದ ಸಂದರ್ಭ ಕಟ್ಟಕಟ್ಟುವ ಕೆಲಸ ಅವನ್ನು ಸೇವಾ ರೂಪದಲ್ಲಿ ಮಾಡುತ್ತಾರೆ. ಅವರಿಗೆ ಇತರ ವ್ಯವಸ್ಥೆ ಬೇಕಾದರೆ ದೇವಸ್ಥಾನದಿಂದ ಮಾಡಿಕೊಡಲಾಗುವುದು ಎಂದು ನಾವು ತಿಳಿಸಿದ್ದೇವೆ. ಈಗಾಗಲೇ ಇಲ್ಲಿಗೆ ಬರುವ ದಾರಿಯನ್ನು ಕೂಡಾ ಶಾಸಕರು ಕಾಂಕ್ರೀಟಿಕರಣ ಮಾಡಿಸಿಕೊಟ್ಟಿದ್ದಾರೆ. ಮುಂದೆ ಕಟ್ಟೆಯನ್ನು ನವೀಕರಣಗೊಳಿಸುವ ಕಾರ್ಯವು ಮಂದಿನ ವರ್ಷ ನಡೆಯಲಿದೆ ಎಂದವರು ಹೇಳಿದರು.
ಪ್ರವಾಹಕ್ಕೆ ವಾಲಿದ ಆವರಣಗೋಡೆ ತೆರವಿಗೆ ಕ್ರಮ:
ಮಳೆಗಾಲದಲ್ಲಿ ಹೊಳೆ ನೀರಿನ ಮಟ್ಟ ದೇವರ ಕಟ್ಟೆಯ ತನಕ ಬರುತ್ತಿದ್ದು, ಕಳೆದ ಮಳೆಗೆ ಪ್ರವಾಹಕ್ಕೆ ಕಟ್ಟೆ ಸುತ್ತಲಿನ ಜಾಗಕ್ಕೆ ಅಳವಡಿಸಿದ ಆವರಣಗೋಡೆ ವಾಲಿದೆ. ಅದನ್ನು ಸರಿ ಮಾಡಿಸಿದರೆ ಮತ್ತೆ ಮತ್ತೆ ಪ್ರವಾಹದ ಸೆಳೆತ್ತಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಸ್ಥಳೀಯರ ಸಲಹೆಯಂತೆ ಅದರ ಎತ್ತರವನ್ನು ತಗ್ಗಿಸುವ ಕೆಲಸ ಮಾಡಲಾಗುವುದು ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೇಡೆಕರ್ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರೂ ಮತ್ತು ಸ್ಥಳೀಯರು ಆಗಿರುವ ದಾಮೋದರ್, ಶ್ರೀ ಮಹಾಲಿಂಗೇಶ್ವರ ಅವಭೃತ ಕಟ್ಟೆ ಸಮಿತಿ ಅಧ್ಯಕ್ಷ ಮನಮೋಹನ್, ಹರ್ಷ, ವಿಶ್ವನಾಥ ಉಪಸ್ಥಿತರಿದ್ದರು.