ಸಿಎಂ ಜೊತೆ ಚರ್ಚಿಸಲು ಶಾಸಕರಿಗೆ ಕೇರಳದ ನಿಯೋಗ ಮನವಿ
ಮುಂದಿನ ವಾರ ಸಿಎಂ, ರೈಲ್ವೆ ಅಧಿಕಾರಿಗಳ ಭೇಟಿ-ಅಶೋಕ್ ರೈ
ಬರಹ : ಸುಧಾಕರ್ ಕಾಣಿಯೂರು
ಕಾಣಿಯೂರು: ಸುಮಾರು 91 ಕಿ.ಮೀ ಉದ್ದದ ಕಾಣಿಯೂರು – ಕಾಞಂಗಾಡು ನಡುವಣ ಹೊಸ ರೈಲು ಮಾರ್ಗ ನಿರ್ಮಾಣ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕೇರಳದ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ಕಾಞಂಗಾಡು- ಕಾಣಿಯೂರು ನಡುವಣ ಹೊಸ ರೈಲು ಮಾರ್ಗ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ರಾಜ್ಯದ ಪಾಲಿನ ಅನುದಾನದ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಲು ಮನವಿ ಮಾಡಿದ್ದಾರೆ. ಕೇರಳದ ನಿಯೋಗವನ್ನು ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿಸಲಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ. ಕೇರಳ ನಿಯೋಗದಲ್ಲಿ ಹೋರಾಟ ಸಮಿತಿಯ ಬೆಟ್ಟ ಜಯರಾಂ, ನ್ಯಾಯವಾದಿ ಎಂ.ಸಿ ಜೋಶ್, ಹಮೀದ್ ಹಾಜಿ, ಸೂರ್ಯನಾರಾಯಣ ಭಟ್, ಕುಂಞಿ ಕಣ್ಣನ್, ಮೊಹಮ್ಮದ್ ಉಪಸ್ಥಿತರಿದ್ದರು.
ರೈಲ್ವೆ ಮಾರ್ಗ ಸಮೀಕ್ಷೆ ಮತ್ತೆ ಮುನ್ನಲೆಗೆ..:
ಕಾಣಿಯೂರು- ಕಾಞಂಗಾಡ್ ರೈಲ್ವೆ ಮಾರ್ಗ ರಚನೆಯಾಗುತ್ತದೆ ಎಂದ ಕೂಡಲೇ ಊರು ಮತ್ತು ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಹೊಸ ಕಲ್ಪನೆಯೊಂದಿಗೆ ಆಸೆಗಳು ಚಿಗುರಲಿದೆ. ಹೌದು ಮಲೆನಾಡಿನಲ್ಲಿ ರೈಲು ಓಡಾಟದ ಸದ್ದು ಕೇಳುವ ನಿರೀಕ್ಷೆ ಮೂಡಿಸಿರುವ ಕಾಞಂಗಾಡ್- ಕಾಣಿಯೂರು ರೈಲ್ವೆ ಯೋಜನೆ ಮತ್ತೆ ಸುದ್ದಿಯಲ್ಲಿದೆ. ವಾಣಿಜ್ಯ, ಪ್ರವಾಸೋದ್ಯಮ ಮುಂತಾದ ಕಾರಣಗಳಿಂದ ಈ ರೈಲ್ವೆ ಯೋಜನೆ ದಶಕಗಳ ಹಿಂದೆ ಪ್ರಸ್ತಾಪಗೊಂಡಿತು. ದಶಕಗಳ ಹಿಂದೆ ಭಾರೀ ನಿರೀಕ್ಷೆ ಹುಟ್ಟಿಸಿದ ಈ ಕನಸಿನ ಯೋಜನೆ ಬಳಿಕ ಸದ್ದಿಲ್ಲದೇ ಮೂಲೆ ಗುಂಪಾಗಿತ್ತು. ಕಾಂಞಂಗಾಡು- ಕಾಣಿಯೂರು ರೈಲ್ವೆ ಯೋಜನೆಯ ಪ್ರಾಥಮಿಕ ಸರ್ವೆ 2015ರಲ್ಲಿ ಪೂರ್ತಿಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ನಿಲುವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿತ್ತು. ಈ ರೈಲ್ವೆ ಹಳಿಯ ಪ್ರಾರಂಭಿಕ ಕೆಲಸಗಳಿಗಾಗಿ ಈ ಹಿಂದೆ 2016ರ ಬಜೆಟ್‌ನಲ್ಲಿ ಕೇರಳ ಸರಕಾರ ಅನುದಾನವನ್ನು ಕೂಡ ಮಂಜೂರು ಮಾಡಿತ್ತು. ಆದರೆ ರಾಜ್ಯದ ಪಾಲಿನ ಕುರಿತು ಮಾತುಕತೆ ನಡೆದಿರಲಿಲ್ಲ.
91 ಕಿ.ಮಿ ಉದ್ದದ ರೈಲ್ವೆ ಹಳಿ..:
ಕಾಂಞಂಗಾಡ್‌ನಿಂದ ಪಾಣತ್ತೂರುವರೆಗೆ 41 ಕಿ.ಮಿ ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 50 ಕಿ.ಮಿ. ಸೇರಿ ಒಟ್ಟು 91 ಕಿ.ಮಿ ಉದ್ದ ಹಳಿ ನಿರ್ಮಿಸಿ ಮಲೆನಾಡ ತಪ್ಪಲ ಮೂಲಕ ರೈಲ್ವೆ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶ. ಕಾಞಂಗಾಡುನಿಂದ ಮೀತ್, ಕೊಟ್ಟೋಡಿ, ಬಳಾಂತೋಡು, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಬೆಳ್ಳಾರೆ ಸುಳ್ಯದ ಮೂಲಕ ಕಾಣಿಯೂರಿನಲ್ಲಿ ಮಂಗಳೂರು- ಬೆಂಗಳೂರು ಹಳಿಯನ್ನು ಸಾಧಿಸಿ ರೈಲ್ವೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. 2006-07ರಲ್ಲಿ ಕಾಂಞಂಗಾಡ್ – ಕಾಣಿಯೂರು ರೈಲ್ವೆ ಹಳಿ ಎಂಬ ಕನಸಿನ ಯೋಜನೆಯ ಆಶಯ ರೂಪುಗೊಂಡಿತ್ತು. ಬಳಿಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ನಡೆಸಿದ ಪ್ರಯತ್ನದ ಹಿನ್ನಲೆಯಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ 2008-09ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಪ್ರಥಮವಾಗಿ ಹಳಿಯ ಸರ್ವೆಗೆ ಅನುದಾನ ಮೀಸಲಿರಿಸಿದ್ದರು. ಅದರಂತೆ ಪ್ರಥಮ ಹಂತದಲ್ಲಿ ಕಾಞಂಗಾಡ್‌ನಿಂದ ಪಾಣತ್ತೂರುವರಗೆ 41ಕಿ.ಮಿ ಹಳಿಯ ಸಮೀಕ್ಷೆ ನಡೆಸಲಾಯಿತು.
2010-11ರ ಬಜೆಟ್‌ನಲ್ಲಿ ಎರಡನೇ ಹಂತದಲ್ಲಿ ಪಾಣತ್ತೂರಿನಿಂದ ಕಾಣಿಯೂರು ತನಕ 50 ಕಿ.ಮಿ ಸರ್ವೆಗೆ ಅನುದಾನ ಮೀಸಲಿರಿಸಿದರೂ ಸರ್ವೆ ನಡೆಯಲಿಲ್ಲ. ಬಳಿಕ ಪ್ರಧಾನಿ ಮೋದಿಯವರ ಸರಕಾರದಲ್ಲಿ ಡಿ.ವಿ ಸದಾನಂದ ಗೌಡರವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಮಂಡಿಸಿದ್ದ ಮೊದಲ ರೈಲ್ವೆ ಬಜೆಟ್‌ನಲ್ಲಿ ಕಾಂಞಂಗಾಡ್ – ಕಾಣಿಯೂರು ರೈಲ್ವೆ ಹಳಿಯ ಸಮೀಕ್ಷೆಗೆ ಅನುದಾನ ಮೀಸಲಿಟ್ಟು ಯೋಜನೆಯ ಪ್ರಾಥಮಿಕ ಸರ್ವೆಗೆ ಆದೇಶ ಮಾಡಿದ್ದರು. ಈ ರೈಲು ಮಾರ್ಗ ರಚನೆಗೆ ಕಾಂಞಂಗಾಡಿನಿಂದ ಪಾಣತ್ತೂರು ಕೇರಳ ಭಾಗದಲ್ಲಿ ಈಗಾಗಲೇ ಒಂದು ಹಂತದ ಸರ್ವೆ ಕಾರ್ಯ ನಡೆದಿದೆ.
ಕಾಣಿಯೂರು ಗ್ರಾಮದ ಏಲಡ್ಕದಲ್ಲಿ ರೈಲ್ವೆ ಜಂಕ್ಷನ್ ? :
ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಕಾಞಂಗಾಡ್ – ಕಾಣಿಯೂರು ರೈಲ್ವೆ ಹಳಿ ಯೋಜನೆಯ ಈ ಹಿಂದೆ ಸಮೀಕ್ಷೆ ಕಾರ್ಯ ಆರಂಭಗೊಂಡಿರುವ ಸಂದರ್ಭದಲ್ಲಿ ಚೆನ್ನೈ ಎಗ್‌ಮೋರ್ ರೈಲ್ವೆ ಕಚೇರಿಯ ಸರ್ವೆ ಮತ್ತು ನಿರ್ಮಾಣ ವಿಭಾಗದ ಸೀನಿಯರ್ ಸಾರಿಗೆ ವ್ಯವಸ್ಥಾಪಕರ ನೇತೃತ್ವದ ತಂಡ ಕೆಲ ವರ್ಷಗಳ ಹಿಂದೆ ಕಾಣಿಯೂರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಟ್ರಾಫಿಕ್ ಮತ್ತು ಇಂಜಿನಿಯರಿಂಗ್ ಎಂಬ ಎರಡು ಹಂತದ ಸರ್ವೆಯನ್ನು ನಡೆಸಲಾಗುತ್ತದೆ. ಹಳಿ ಹಾದು ಹೋಗುವ ಪ್ರದೇಶವನ್ನು ಪ್ರಥಮವಾಗಿ ಟ್ರಾಫಿಕ್ ಸರ್ವೆ ನಡೆಸಲಾಗುತ್ತಿದೆ. ಹಳಿ ನಿರ್ಮಾಣವಾದರೆ ರೈಲ್ವೆಗೆ ದೊರೆಯಬಹುದಾದ ಪ್ರಯಾಣಿಕರ ಸಂಖ್ಯೆ, ಗೂಡ್ಸ್ ಸರಕು ಸಾಗಾಟ ಮತ್ತಿತರರ ವಿವರಗಳನ್ನು ಪಡೆಯಲು ಟ್ರಾಫಿಕ್ ಸರ್ವೆಯನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಕಾಣಿಯೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ತಾಲೂಕು ಸುಳ್ಯಕ್ಕೆ ರೈಲು ಸಂಪರ್ಕ ಲಭ್ಯವಾಗಲು ಉದ್ದೇಶಿತ ಕಾಣಿಯೂರು- ಕಾಞಂಗಾಡು ರೈಲು ಮಾರ್ಗ ರಚನೆ ಸಹಕಾರಿಯಾಗಿದೆ. ಈ ರೈಲು ಮಾರ್ಗ ರಚನೆಯಾದರೆ ಕೇರಳದ ಮೂಲಕ ಕರ್ನಾಟಕವನ್ನು ಸಂಪರ್ಕಿಸಲು, ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸಲು ಹತ್ತಿರದ ರೈಲ್ವೆ ಮಾರ್ಗ ಇದಾಗಲಿದೆ. ಅಲ್ಲದೇ ಕಾಣಿಯೂರು ಪ್ರದೇಶವು ಕಡಬ ತಾಲೂಕಿನ ರೈಲ್ವೆ ಜಂಕ್ಷನ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಕಾಣಿಯೂರು ಮೂಲಕ ಮಂಗಳೂರು ಹಾಸನ ರೈಲು ಮಾರ್ಗ ಹಾದು ಹೋಗುತ್ತದೆ. ಕಾಣಿಯೂರು ಗ್ರಾಮದ ಏಲಡ್ಕದಲ್ಲಿ ರೈಲ್ವೆ ಜಂಕ್ಷನ್ ಮಾಡಲು ನಿವೇಶನವನ್ನು ದಶಕಗಳ ಹಿಂದೆಯೇ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಸರ್ವೆಯ ಬಳಿಕ ಈ ರೈಲ್ವೆ ಮಾರ್ಗ ರಚನೆಯ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ರೈಲ್ವೆ ಮಾರ್ಗ ನಿರ್ಮಾಣ ವೆಚ್ಚ ಈ ಮಾರ್ಗದಲ್ಲಿ ಸಂಚರಿಸಬಹುದಾದ ಪ್ರಯಾಣಿಕ ಮತ್ತು ಗೂಡ್ಸ್ ರೈಲುಗಳ ಲಭ್ಯತೆ, ಇತ್ಯಾದಿಗಳನ್ನು ಆಧಾರವಾಗಿಟ್ಟುಕೊಂಡು ಕಾಣಿಯೂರು – ಕಾಞಂಗಾಡು ರೈಲು ಮಾರ್ಗದ ರಚನೆ ಆಗಲಿದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡದಿಂದ ಕೇರಳವನ್ನು ಸಂಪರ್ಕಿಸುವ ಎರಡನೇ ರೈಲು ಮಾರ್ಗವಾಗಿ ಈ ಯೋಜನೆ ಕಾರ್ಯಾಚರಿಸಲಿದೆ.
ಬೇಡಿಕೆ ಇಂದು ನಿನ್ನೆಯದಲ್ಲ..:
ಕೇರಳದ ಕಾಞಂಗಾಡು ಮತ್ತು ದಕ್ಷಿಣ ಕನ್ನಡದ ಕಾಣಿಯೂರು ನಡುವಣ ಹೊಸ ರೈಲು ಮಾರ್ಗ ರಚನೆಯ ಬೇಡಿಕೆ ಇಂದು ನಿನ್ನೆಯದಲ್ಲ, ಆದರೆ ನಾನಾ ಕಾರಣಗಳಿಂದ ಈ ಬೇಡಿಕೆ ಈಡೇರದೆ ಉಳಿದುಕೊಂಡಿದೆ. ಪೂರ್ವಭಾವಿ ಸಮೀಕ್ಷಾ ಕಾರ್ಯ ಕೇರಳದಲ್ಲಿ ನಡೆದರೂ ಕರ್ನಾಟಕದ ಭಾಗದಲ್ಲಿ ನಡೆದಿರಲಿಲ್ಲ. ಪೂರ್ವಭಾವಿ ಸಮೀಕ್ಷೆ ನಡೆಯದೇ ಯಾವುದೇ ರೈಲ್ವೆ ಮಾರ್ಗ ನಿರ್ಮಾಣವಾಗುವುದಿಲ್ಲ. ಆದಷ್ಟು ಬೇಗ ಕಾಣಿಯೂರು – ಕಾಂಞಗಾಡು ನಡುವಣ ಹೊಸ ರೈಲು ಮಾರ್ಗ ರಚನೆಯಾಗಲಿ ಎಂಬುದೇ ಎಲ್ಲರ ಆಶಯ.
ಯೋಜನೆಯಿಂದ ಏನು ಪ್ರಯೋಜನ:
ರೈಲ್ವೇ ಸಂಪರ್ಕ ಇಲ್ಲದ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಗ್ರಾಮಗಳಿಗೆ ರೈಲು ಸಂಪರ್ಕ ಕಲ್ಪಿಸಿ ಸಂಚಾರ ಕ್ರಾಂತಿ ಸಾಧ್ಯವಾಗಿಸುವುದರ ಜೊತೆಗೆ ಎರಡೂ ರಾಜ್ಯಗಳ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ದೊಡ್ಡ ಕೊಡುಗೆ ನೀಡಬಹುದು. ಕೇರಳಕ್ಕೆ ಬೆಂಗಳೂರು, ಮೈಸೂರು ಇನ್ನಷ್ಟು ಹತ್ತಿರ ಆಗುತ್ತದೆ ಎಂಬುದರ ಜೊತೆಗೆ ಗಡಿ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಹುದು. ಇಲ್ಲಿನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುವ ಅವಕಾಶ ದೊರೆಯಲಿದೆ. ಶಿಕ್ಷಣ ಕೇಂದ್ರವಾದ ಸುಳ್ಯಕ್ಕೆ ಕೇರಳದಿಂದ ಬರುವವರಿಗೆ ಸುಲಭವಾಗಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫಲ ಅವಕಾಶ ತೆರೆದುಕೊಳ್ಳಬಹುದು. ಬೇಕಲ ಕೋಟೆ, ರಾಣಿಪುರಂ, ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೂರಕವಾಗಬಹುದು. ಶಬರಿಮಲೆ, ತಲಕಾವೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ ಯಾತ್ರಿಕರಿಗೆ ಹೆಚ್ಚಿನ ಅನುಕೂಲ ಆಗಬಹುದು. ಹೀಗೆ ಕಾಞಂಗಾಡ್-ಕಾಣಿಯೂರು ಹಳಿ ನಿರ್ಮಾಣದಿಂದ ಬಲು ದೊಡ್ಡ ಅಭಿವೃದ್ಧಿ ಸಾಧ್ಯತೆಗಳೇ ತೆರೆದುಕೊಳ್ಳಲಿದೆ.
ಕಾಞಂಗಾಡು -ಕಾಣಿಯೂರು ರೈಲು ಮಾರ್ಗದ ಸುಮಾರು 91 ಕಿ.ಮೀ ರೈಲ್ವೆ ಮಾರ್ಗಕ್ಕೆ 2015ರಲ್ಲಿ ಅನುಮತಿಯನ್ನು ನೀಡಿದ್ದು, ಆದರೆ ಆ ಬಳಿಕ ಸರ್ವೆ ನಡೆಸಿದೆ ಹೊರತು ಡಿಪಿಆರ್ ಸಿದ್ದಪಡಿಸಿಲ್ಲ. ಕೇರಳ ಮತ್ತು ಕರ್ನಾಟಕದ ಮೂಲಕ ಹಾದು ಹೋಗುವ ಈ ರೈಲು ಮಾರ್ಗಕ್ಕೆ ಕೆಂದ್ರದ ಜೊತೆ ಎರಡು ಸರಕಾರಗಳು ಕೈಜೋಡಿಸಬೇಕಾಗಿದೆ. ಕೇರಳದ ನಿಯೋಗವೊಂದು ನನ್ನನ್ನು ಭೇಟಿ ಮಾಡಿದ್ದು, ಕರ್ನಾಟಕ ಸರಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯದ ಫಿಪ್ಟಿ ಫಿಪ್ಟಿ ಯೋಜನೆಯಲ್ಲಿ ಕಾಮಗಾರಿ ನಡೆಸಲು ಡಿಪಿಆರ್ ಸಿದ್ದಪಡಿಸಿ ಅನುಮೋದನೆಯನ್ನು ತೆಗೆದುಕೊಳ್ಳಲು ವಿನಂತಿಯನ್ನು ಮಾಡಿದ್ದಾರೆ. ಕೇರಳದ ನಿಯೋಗದೊಂದಿಗೆ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೊತೆಗೆ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ. ಆ ಮುಖಾಂತರ ಕೇರಳದಿಂದ ಬರುವ ಜನರಿಗೆ ಸುಬ್ರಹ್ಮಣ್ಯವನ್ನು ತಲುಪಿ ಅಲ್ಲಿಂದ ಬೆಂಗಳೂರಿಗೆ ಹೋಗಲು ಹತ್ತಿರ ಆಗುವುದರಿಂದ ಮುಂದಿನ ದಿವಸಗಳಲ್ಲಿ ಪ್ರಾಮುಖ್ಯತೆಯಲ್ಲಿ ಸರಕಾರದ ಅನುಮತಿಯನ್ನು ಕೊಡಿಸುವ ಮುಖಾಂತರ ಈ ರೈಲ್ವೆ ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗುವುದು.
ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ