ರೊಟೇರಿಯನ್ಸ್‌ಗಳ ದೇಣಿಗೆಯಿಂದ ಸಮಾಜದಲ್ಲಿ ಬದಲಾವಣೆ-ವಿಕ್ರಂ ದತ್ತ
ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಪುತ್ತೂರಿನ ಹಿರಿಯ ಕ್ಲಬ್ ರೋಟರಿ ಪುತ್ತೂರು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದೆ. ದೇಶವನ್ನು ಬದಲಾಯಿಸಲು ಒಬ್ಬರಿಂದ ಸಾಧ್ಯವಿಲ್ಲ ಆದರೆ ರೋಟರಿ ಕ್ಲಬ್ ನಲ್ಲಿನ ರೊಟೇರಿಯನ್ಸ್‌ಗಳು ತಮ್ಮ ಉದಾತ್ತ ದೇಣಿಗೆಯ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ಇದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ವಜ್ರಮಹೋತ್ಸವವನ್ನು ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಅವರು ಮಾ.28 ರಂದು ಮರೀಲು ಹೊರವಲಯದ ದಿ ಪುತ್ತೂರು ಕ್ಲಬ್‌ನಲ್ಲಿ ನಡೆದ ಕ್ಲಬ್ ಚಟುವಟಿಕೆಗಳಿಗೆ ಚಾಲನೆ ನೀಡುವ ಮೂಲಕ ಮಾತನಾಡಿದರು. ವಿಶ್ವದಲ್ಲಿ ಲಕ್ಷಕ್ಕೂ ಮಿಕ್ಕಿ ರೊಟೇರಿಯನ್ಸ್‌ಗಳು ಮೌಲ್ಯಯುತ ಸೇವೆ ನೀಡುತ್ತಿದ್ದಾರೆ. ರೊಟೇರಿಯನ್ಸ್‌ಗಳು ರೋಟರಿ ಫೌಂಡೇಶನ್‌ಗೆ ನೀಡುವ ದೇಣಿಗೆ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ರೋಟರಿ ಪುತ್ತೂರಿನಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ-ಡಾ.ಹರ್ಷಕುಮಾರ್ ರೈ:
ಕ್ಲಬ್ ಹಿರಿಯ ಸದಸ್ಯ ಬಾಲಕೃಷ್ಣ ಆಚಾರ್ಯ ಸಂಪಾದಕತ್ವದ ಕ್ಲಬ್ ವಿಶೇಷ ಬುಲೆಟಿನ್ ಅನ್ನು ಬಿಡುಗಡೆಗೊಳಿಸಿದ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ ಮಾತನಾಡಿ, ರೋಟರಿ ಕ್ಲಬ್‌ನ ಯಾಂತ್ರೀಕೃತ ಬೆಳವಣಿಗೆಯಲ್ಲಿ ಯಶಸ್ಸು ಹಾಗೂ ವಿಫಲತೆ ಎರಡೂ ಇದೆ. ರೋಟರಿಯ ಧ್ಯೇಯೋದ್ಧೇಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ನಮ್ಮಲ್ಲಿ ಬೆಳವಣಿಗೆಯ ಪರ್ವ ಆರಂಭವಾಗುತ್ತದೆ. ರೋಟರಿ ಪುತ್ತೂರು ಸಂಸ್ಥೆಯು ಕಳೆದ 60 ವರ್ಷಗಳಲ್ಲಿ ಪುತ್ತೂರಿನಲ್ಲಿ ಆರೋಗ್ಯ ಕ್ರಾಂತಿಯನ್ನೇ ಸೃಷ್ಟಿಸುವ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಿದೆ ಎಂದರು.
ಸಮಾಜಮುಖಿ ಕಾರ್ಯಗಳಿಂದ ರೊಟೇರಿಯನ್ಸ್ ಎನಿಸಿಕೊಳ್ಳಲು ಹೆಮ್ಮೆ-ಮುರಳೀಧರ್ ರೈ:
ರೋಟರಿ ವಲಯ ಸೇನಾನಿ ಮುರಳೀಧರ್ ರೈ ಮಾತನಾಡಿ, ಉಗ್ರಾಣ ಮಂಗೇಶ್ ರಾವ್‌ರವರಿಂದ ಆರಂಭವಾದ ಈ ರೋಟರಿ ಸಂಸ್ಥೆಯು ಇಂದು ಯಶಸ್ಸಿನತ್ತ ದಾಪುಗಾಲಿಕ್ಕಿತ್ತಿರುವುದು ಉತ್ತಮ ವಿಷಯ. ಕ್ಲಬ್ ಮೂಲಕ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ, ಮನೆ ನಿರ್ಮಾಣ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ನೀಡಿ ಮಾದರಿ ಎನಿಸಿದ್ದು, ಈ ನಿಟ್ಟಿನಲ್ಲಿ ನಾನೊಬ್ಬ ರೊಟೇರಿಯನ್ಸ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಮೆಮೋಗ್ರಾಫಿ ಸೆಂಟರ್ ಆರಂಭಿಸುವುದು ನಮ್ಮ ಕನಸಾಗಿದೆ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಓರ್ವ ವೈದ್ಯನಾಗಿ ಜನರ ಸೇವೆ ಮಾಡುವ ಮೂಲಕ ಬಿಝಿಯಾಗಿದ್ದರೂ ರೋಟರಿ ಅಧ್ಯಕ್ಷನಾಗಿ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಖುಶಿಯಾಗುತ್ತಿದೆ. ವಜ್ರಮಹೋತ್ಸವ ವರ್ಷದಲ್ಲಿ ನಮ್ಮ ಕ್ಲಬ್‌ಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಮತ್ತೂ ಖುಶಿಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿ ರೂ.೬೦ ಲಕ್ಷ ವೆಚ್ಚದಲ್ಲಿ ಮೆಮೋಗ್ರಾಫಿ ಸೆಂಟರ್ ಆರಂಭಿಸುವುದು ನಮ್ಮ ಕನಸಾಗಿದೆ ಎಂದರು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್‌ನಲ್ಲಿ ಈಗಾಗಲೇ 109 ಸದಸ್ಯರಿದ್ದು ಪ್ರಸ್ತುತ ಯಮುನಾ ಬೋರ್‌ವೆಲ್ಸ್‌ನ ಮಾಲಕಿ ದಿವ್ಯಾ ಕೆ.ಶೆಟ್ಟಿ, ಉಪನ್ಯಾಸಕಿ ಶೋಭಾರವರನ್ನು ಕ್ಲಬ್ ಸರ್ವಿಸ್‌ನಡಿಯಲ್ಲಿ ಸೇರ್ಪಡೆಗೊಳಿಸಲಾಯಿತು. ಕ್ಲಬ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡರವರು ನೂತನ ಸದಸ್ಯರ ಪರಿಚಯ ಮಾಡಿದರು.
ಪಿ.ಎಚ್.ಎಫ್/ಎಂ.ಪಿ.ಎಚ್.ಎಫ್ ಗೌರವ:
ಕ್ಲಬ್ ಸದಸ್ಯರಾಗಿದ್ದು ಪಿ.ಎಚ್.ಎಫ್ ಹಾಗೂ ಎಂ.ಪಿ.ಎಚ್.ಎಫ್ ಗೌರವ ಪಡೆದಿರುವ ಸದಸ್ಯರಾದ ದಿನಕರ್ ಅಡಿಗ, ಸೂರಜ್ ನಾಯರ್, ಎ.ವಿ ನಾರಾಯಣ ಗೌಡ, ರಾಧಾಕೃಷ್ಣ ಗೌಡ, ವಸಂತ್ ವೀರಮಂಗಲ, ಹರೀಶ್ ಶಾಂತಿ, ಜಗದೀಶ್ ಆಚಾರ್ಯ, ಬಲರಾಂ ಆಚಾರ್ಯ, ಉದಯಕೃಷ್ಣ ಭಟ್, ನಟರಾಜ್ ಎನ್.ಎಸ್, ಡಾ.ಶ್ಯಾಮ್, ಅಜೇಯ್ ಪಡಿವಾಳ್, ಡಾ.ಶ್ರೀಪತಿ ರಾವ್, ಕೃಷ್ಣ ಕುಮಾರ್ ರೈ ಪಿ.ಡಿ, ಡಾ.ಜೆ.ಸಿ ಅಡಿಗ, ಕೇಶವ ಅಮೈ, ಜೈರಾಜ್ ಭಂಡಾರಿ, ಸುಂದರ ಗೌಡ, ಡಾ.ನಝೀರ್ ಅಹಮದ್, ವಿ.ಜೆ ಫೆರ್ನಾಂಡೀಸ್, ಚಿಕ್ಕಪ್ಪ ನಾಕ್, ರಾಮಕೃಷ್ಣ ರಾವ್, ರಾಜ್‌ಗೋಪಾಲ್ ಬಳ್ಳಾಲ್, ಎ.ಜೆ ರೈ, ಝೇವಿಯರ್ ಡಿ’ಸೋಜ, ಡಾ.ಶ್ರೀಪ್ರಕಾಶ್ ಬಿ, ದಾಮೋದರ್ ಕೆ.ಎ, ಡಾ.ಜೈದೀಪ್‌ರವರುಗಳನ್ನು ಡಿ.ಜಿ ವಿಕ್ರಂ ದತ್ತರವರು ಗೌರವಿಸಿದರು. ಅಂತರರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಡಾ.ಜೈದೀಪ್‌ರವರು ಕಾರ್ಯಕ್ರಮ ನಿರ್ವಹಿಸಿದರು.
ಗೌರವಾರ್ಪಣೆ:
ರೋಟರಿ ಕ್ಲಬ್ ಪುತ್ತೂರು ಚಾರಿಟೇಬಲ್ ಟ್ರಸ್ಟ್‌ಗೆ ರೂ.ಒಂದು ಲಕ್ಷ ದೇಣಿಗೆ ನೀಡಿದ ಕ್ಲಬ್ ಹಿರಿಯ ಸದಸ್ಯರಾದ ಅರಿಯಡ್ಕ ಚಿಕ್ಕಪ್ಪ ನಾಕ್‌ರವರನ್ನು, ಕ್ಲಬ್ ವತಿಯಿಂದ ಮಹಾವೀರ ಮೆಡಿಕಲ್ ಸೆಂಟರಿನಲ್ಲಿ ಡಯಾಲಿಸಿಸ್ ಸೆಂಟರ್‌ನ ರೂ.೧೨ ಸಾವಿರದಂತೆ ಪ್ರತಿ ತಿಂಗಳು ವೆಚ್ಚವನ್ನು ಭರಿಸುತ್ತಿರುವ ಡಾ.ಅಶೋಕ್ ಪಡಿವಾಳ್, ರೋಟರಿಪರದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ವಿನ್ಯಾಸ ಹಾಗೂ ರಚನೆಗೆ ಮುಂದಾಳತ್ವ ವಹಿಸಿದ ಇಂಜಿನಿಯರ್ ಎ.ವಿ ನಾರಾಯಣ, ಮಾರುತಿ ಸುಜುಕಿ ಸಂಸ್ಥೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್‌ಗೆ ಭಾಜನರಾದ ದರ್ಬೆ ಪ್ರಿಸಿಶನ್ ಕಾರ್ ಸೆಂಟರ್ ಪಾಲುದಾರ ಸುಜಿತ್ ಡಿ.ರೈ, ಪುತ್ತೂರು ಕೋಟಿ-ಚೆನ್ನಯ ಕಂಬಳದಲ್ಲಿ ಪ್ರಶಸ್ತಿ ಪಡೆದ ಹರೀಶ್ ಶಾಂತಿ, ದರ್ಬೆ ನಯಾ ಚಪ್ಪಲ್ ಬಜಾರ್ ವತಿಯಿಂದ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರಿನ ಯೋಜನೆ ನೀಡಿದ ರಫೀಕ್ ಎಂ.ಜಿ, ರೋಟರಿ ಕ್ಲಬ್ ಪುತ್ತೂರು ೬೦ ವರ್ಷಗಳ ಬಗ್ಗೆ ಲೇಖನ ಪ್ರಕಟಿಸಿದ ಹಿರಿಯ ಸದಸ್ಯ ಸುರೇಶ್ ಶೆಟ್ಟಿರವರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ್ ಕೆ.ಎ ವರದಿ ಮಂಡಿಸಿದರು. ಕ್ಲಬ್ ನಿಯೋಜಿತ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ ವಂದಿಸಿದರು. ಕ್ಲಬ್ ಸದಸ್ಯರಾದ ಪರಮೇಶ್ವರ ಗೌಡ ಹಾಗೂ ಕಿಶನ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು. ಸಾರ್ಜಂಟ್ ಎಟ್ ಆರ್ಮ್ಸ್ ಶ್ರೀಧರ್ ಆಚಾರ್ಯ ಸಹಕರಿಸಿದರು.
ಸನ್ಮಾನ..
ಆರಂಭದಲ್ಲಿ ಆಟೋರಿಕ್ಷಾ, ಅಂಬಾಸಿಡರ್ ಕಾರನ್ನು ಓಡಿಸುವ ಮೂಲಕ ಬಳಿಕ ಸ್ಪೇರ್ ಸ್ಪಾರ್ಟ್ಸ್ ಮಳಿಗೆಯನ್ನು ಆರಂಭಿಸಿದ್ದು ಇದೀಗ ಸಾವಿರ ಬಿಂದುಗಳನ್ನು ಜೋಡಿಸುವ ಬಿಂದು ಫ್ಯಾಕ್ಟರಿಯನ್ನು ಆರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ಕೊಡಿಸುವ ಜೊತೆಗೆ ತನ್ನ ಸಂಸ್ಥೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವತ್ತ, ತನ್ನ ಉದ್ಯಮದಲ್ಲಿ ಹಲವಾರು ಪ್ರಶಸ್ತಿಗೆ ಭಾಜನರಾಗಿರುವ ಬಿಂದು ಸಂಸ್ಥೆಯ ಮಾಲಕ ಸತ್ಯಶಂಕರ್ ದಂಪತಿಯನ್ನು ಹಾಗೂ ಕ್ಲಬ್ ಯಶಸ್ಸಿಗೆ ಸಹಕರಿಸುತ್ತಿರುವ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಡಿ.ಜಿ ಭೇಟಿ ಕಾರ್ಯಕ್ರಮ..
ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ಬೆಳಿಗ್ಗೆ ಬಪ್ಪಳಿಗೆ ಬೈಪಾಸ್ ಜಂಕ್ಷನ್‌ನಲ್ಲಿ ರೋಟರಿ ಕ್ಲಬ್ ಪುತ್ತೂರು ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿದರು. ಬಳಿಕ ಬೈಪಾಸ್-ಬಪ್ಪಳಿಗೆ ಜಂಕ್ಷನ್ ಬಳಿಯ ರೋಟರಿ ನಿವಾಸದಲ್ಲಿ ಕ್ಲಬ್‌ನ ಡೈಮಂಡ್ ಜ್ಯುಬಿಲಿ ಪ್ರಯುಕ್ತ ಹೋರ್ಡಿಂಗ್ ಅನಾವರಣ, ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ, ರಾಧಾಕೃಷ್ಣ ಬಿಲ್ಡಿಂಗ್‌ನಲ್ಲಿನ ಬ್ಲಡ್ ಬ್ಯಾಂಕ್ ಮತ್ತು ಕಣ್ಣಿನ ಆಸ್ಪತ್ರೆಗೆ ಭೇಟಿ, ನೆಲ್ಲಿಕಟ್ಟೆ ಶಾಲಾ ಬಳಿಯ ರೋಟರಿ ಜಿಲ್ಲಾ ಅನುದಾನ ಕಟ್ಟಡ ಉದ್ಘಾಟನೆ, ವೀಕ್ಷಣೆ, ಮಹಾವೀರ ಮೆಡಿಕಲ್ ಸೆಂಟರ್‌ನ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ, ರೋಟರಿ ಜಿ.ಎಲ್ ಸಭಾಭವನದಲ್ಲಿ ಕ್ಲಬ್ ಅಸೆಂಬ್ಲಿ, ದರ್ಬೆ ನಯಾ ಚಪ್ಪಲ್ ಬಜಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರಿನ ಘಟಕದ ಉದ್ಘಾಟನೆಯಲ್ಲಿ ಡಿ.ಜಿ ವಿಕ್ರಂ ದತ್ತರವರು ಭಾಗವಹಿಸಿದರು.