ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಸಂದರ್ಭ ದೇವಳದ ಗದ್ದೆಯಲ್ಲಿ ತಾತ್ಕಾಲಿಕ ಸಂತೆ ಅಂಗಡಿಗಳ ಏಲಂ ಪ್ರಕ್ರಿಯೆಗೆ ಸ್ಥಳ ಮಾರ್ಕಿಂಗ್ ಮಾಡುವ ಕಾರ್ಯ ಮಾ.29ರಂದು ನಡೆಯಿತು. ದೇವಳದ ಕರೆಯ ಬಳಿ ಈ ಭಾರಿ ಅನ್ನಸಂತರ್ಪಣೆ ನಡೆಯುವ ಹಿನ್ನೆಲೆಯಲ್ಲಿ ಗದ್ದೆಯಲ್ಲಿ ಸಾಕಷ್ಟು ಜಾಗ ಸಿಗಲಿದೆ. ದೇವಳದ ಗದ್ದೆಗೆ ಹೆಚ್ಚುವರಿ ಸಂತೆ ಅಂಗಡಿಗಳೂ ಬರಲಿವೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್‌ರವರ ನೇತೃತ್ವದಲ್ಲಿ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿಗಳಿಗೆ ನೀಲನಕಾಶೆ ಮಾಡಿ ಅದರಂತೆ ದೇವಳದ ನಿತ್ಯ ಚಾಕರಿಯವರು ಮಾರ್ಕಿಂಗ್ ಕಾರ್ಯ ಆರಂಭಿಸಿದ್ದಾರೆ. ಪ್ರತಿ ವರ್ಷ ದೇವಳದ ಗದ್ದೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನಪ್ರಸಾದ ವಿತರಣೆ ನಡೆಯುತ್ತಿತ್ತು. ಈ ಪೈಕಿ ಅನ್ನಪ್ರಸಾದ ವಿತರಣೆಯನ್ನು ದೇವಳದ ಕೆರೆಯ ಬಳಿಗೆ ಸ್ಥಳಾಂತರಿಸಿದ್ದು, ನಟರಾಜ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ಈ ಭಾರಿ ಗದ್ದೆಯಲ್ಲಿ ಸಾಕಷ್ಟು ಖಾಲಿ ಜಾಗ ಸಿಗುವುದರಿಂದ ಹೆಚ್ಚಿನ ಅಂಗಡಿಗಳೂ ಬಂದು ದೇವಳಕ್ಕೆ ಆದಾಯವೂ ಸಿಗಲಿದೆ. ಮಾರ್ಕ್ ಮಾಡಿದ ಬಳಿಕ ಏಲಂ ಅಂಗಡಿಗಳ ನೀಲನಕಾಶೆಯನ್ನು ದೊಡ್ಡದಾಗಿ ಪ್ರಿಂಟ್ ಮಾಡಿ ಏಲಂ ನಡೆಯುವ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ಏಲಂನಲ್ಲಿ ಭಾಗಿಯಾಗುವವರು ನಕ್ಷೆಯಲ್ಲಿರುವ ಅಂಗಡಿಗಳನ್ನು ನೋಡಿಯೇ ಏಲಂನಲ್ಲಿ ಭಾಗವಹಿಸುತ್ತಾರೆ. ಅಂಗಡಿಗಳ ಮಾರ್ಕಿಂಗ್ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೇಡೆಕರ್, ಕಚೇರಿ ಸಿಬ್ಬಂದಿ ಪದ್ಮನಾಭ ಮತ್ತು ನೌಕರರು ಉಪಸ್ಥಿತರಿದ್ದರು.
ಎ.3ರಂದು ಜಾತ್ರೆ ಗದ್ದೆಯಲ್ಲಿ ಸಂತೆ ವ್ಯಾಪಾರ ನಡೆಸಲು ತಾತ್ಕಾಲಿಕ ಅಂಗಡಿಗಳ ಏಲಂ ನಡೆಯಲಿದೆ. ಒಬ್ಬರಿಗೆ ಎರಡು ಅಂಗಡಿಗಳಿಗಿಂತ ಹೆಚ್ಚು ನೀಡಲು ಅವಕಾಶವಿಲ್ಲ. ಅಂಗಡಿ ಪಡೆದವರು ಬೇರೆಯವರಿಗೆ ಒಳಬಾಡಿಗೆಗೆ ಮಾರಾಟ ಮಾಡಲೂ ಅವಕಾಶವಿಲ್ಲ. ಜೊತೆಗೆ ಈ ಬಾರಿ ದೇವಳದ ಕೆರೆಯ ಬಳಿಯ ಜಾಗದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಹಾಗಾಗಿ ಜಾತ್ರೆ ಗದ್ದೆಯಲ್ಲಿ ಸ್ಥಳಾವಕಾಶ ಹೆಚ್ಚಿಗೆ ದೊರೆಯಲಿದೆ. ಆದಾಯದ ದೃಷ್ಟಿಯಿಂದ ಹೆಚ್ಚುವರಿಯಾಗಿ 100 ಅಂಗಡಿಗಳ ಏಲಂ ಮಾಡಲಿದ್ದೇವೆ. ರಥೋತ್ಸವ ಸಂದರ್ಭದಲ್ಲೂ ಭಕ್ತರಿಗೆ ರಥೋತ್ಸವನ್ನು ಸಾವಕಾಶವಾಗಿ ನೋಡಲು ವಿಶೇಷ ಸೌಲಭ್ಯ ಮಾಡಿಕೊಡಲಾಗುವುದು.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ದೇವರ ಸೇವೆ ಮಾಡುತ್ತಿದ್ದೇವೆ
10 ಫೀಟ್‌ನ ಸ್ಟಾಲ್ ಮಾಡಲಾಗುತ್ತಿದೆ. ಇದರ ನಡುವೆ ಶಾಸಕರ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸೂಚನೆಯಂತೆ ಭಕ್ತಾದಿಗಳ ಓಡಾಟಕ್ಕೂ ತೊಂದರೆ ಆಗದ ರೀತಿಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ಸುಡುಮದ್ದಿಗೆ ಅನುಕೂಲ ಆಗುವಂತೆ ಒಂದು ಲೈನ್ ಕಡಿಮೆ ಮಾಡಿದ್ದೇವೆ. ಅನ್ನದಾಸೋಹ ಸ್ಥಳ ಬದಲಾವಣೆ ಆದ್ದರಿಂದ ಅಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ. ಅಲ್ಲಿ ಹೆಚ್ಚಿನ ಅಂಗಡಿ ಕೊಡಲು ಅವಕಾಶವಿದೆ. ವರ್ಷಂಪ್ರತಿಯಂತೆ ನಾವು ಸೇವಾ ರೀತಿಯಲ್ಲಿ ದೇವರ ಸೇವೆ ಮಾಡುತ್ತಿದ್ದೇವೆ.
ಪಿ.ಜಿ.ಜಗನ್ನಿವಾಸ ರಾವ್, ವಾಸ್ತು ಇಂಜಿನಿಯರ್