ಕೌಟುಂಬಿಕ ದೌರ್ಜನ್ಯ ಪ್ರಕರಣ; ಪತ್ನಿ, ಮಕ್ಕಳ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡದೆ ಇನ್ನೊಂದು ವಿವಾಹವಾಗುವುದಕ್ಕೆ ನ್ಯಾಯಾಲಯ ತಡೆ

0

ಪುತ್ತೂರು: ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ,ವ್ಯಕ್ತಿಯೋರ್ವ ಮೊದಲ ಪತ್ನಿ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇನ್ನೊಂದು ವಿವಾಹ ಆಗುವುದಕ್ಕೆ ತಡೆಯಾಜ್ಞೆ ನೀಡಿದೆ. ಆರ್ಯಾಪು ಗ್ರಾಮದ ಗೋಳಿಕಟ್ಟೆ ಅಕ್ಕರೆ ಎಂಬಲ್ಲಿ ವಾಸ್ತವ್ಯವಿರುವ ಕೆ. ಮೊಹಮ್ಮದ್‌ರವರ ಪುತ್ರಿ ಶಾಹಿದಾ ಬಾನುರವರು ತನ್ನ ಪತಿ ಮುಝಮಿಲ್ ಕೆ.ಬಿನ್ ಅಬ್ದುಲ್ಲಾ ಗೋಳಿಕಟ್ಟೆ ಅಕ್ಕರೆಯವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆ 2005 ಕಲಂ 20,23(2) ಮತ್ತು ಕಲಂ 19ರ ಅಡಿಯಲ್ಲಿ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎ-.ಸಿ ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಿಸಿದ್ದರು. ಸದ್ರಿ ದೂರಿನಲ್ಲಿ ಶಾಹಿದಾ ಬಾನುರವರು, ತನ್ನ ಗಂಡ, ಮುಝಮಿಲ್ ಕೆ., ರವರು ತನಗೆ ಮತ್ತು ಆತನಿಂದ ಜನಿಸಿದ ಇಬ್ಬರು ಮಕ್ಕಳಿಗೆ ಸೂಕ್ತ ಪರಿಹಾರ ಮತ್ತು ಜೀವನಾಂಶ ನೀಡದೆ ಇನ್ನೊಂದು ವಿವಾಹವಾಗಲು ಮುಂದಾಗಿದ್ದಾರೆ ಎಂದು ಆಪಾದಿಸಿದ್ದರು. ಈ ಕುರಿತು ಎರಡೂ ಕಡೆಯ ವಕೀಲರ ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು,ಮಹಮ್ಮದೀಯ ಕಾನೂನಿನಲ್ಲಿ ಬಹು ಪತ್ನಿತ್ವಕ್ಕೆ ಅವಕಾಶ ಇರುವುದರಿಂದ ತನ್ನ ಗಂಡ ಇನ್ನೊಂದು ವಿವಾಹ ಆಗುವ ಗುಮಾನಿ ಇದೆ ಎಂಬ ದೂರುದಾರರ ವಾದವನ್ನು ಎತ್ತಿ ಹಿಡಿದು ಸದ್ರಿ ದೂರು ಅರ್ಜಿಯನ್ನು 2025ರ ಜ.27ರಂದು ಪುರಸ್ಕರಿಸಿ ಪ್ರತಿವಾದಿ ಮುಝಮ್ಮಿಲ್ ಅವರು ಅರ್ಜಿದಾರರಾದ ಪತ್ನಿ ಶಾಹಿದಾ ಬಾನು ಮತ್ತು ಅವರ ಮಕ್ಕಳ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡದೆ ಇನ್ನೊಂದು ವಿವಾಹ ಆಗದಂತೆ ತಡೆಯಾಜ್ಞೆ ನೀಡಿ ಆದೇಶ ಮಾಡಿರುತ್ತದೆ. ಅರ್ಜಿದಾರರ ಪರ ವಕೀಲರಾದ ಗಿರೀಶ ಎಂ., ಅಶೋಕ ಸಿ.ಎಚ್. ಮತ್ತು ನಿಶಾಂತ್ ಸುವರ್ಣ ಎ.,ವಾದಿಸಿದ್ದರು.

LEAVE A REPLY

Please enter your comment!
Please enter your name here