ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2024-25ನೇ ಆರ್ಥಿಕ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದೆ. ಸಂಘದ ಸದಸ್ಯರು ಸಂಘದಿಂದ ಪಡೆದುಕೊಂಡ ಸಾಲದ ಕಂತುಗಳನ್ನು ವಾಯಿದೆಗೆ ಸರಿಯಾಗಿ ಮರುಪಾವತಿ ಮಾಡಿರುವುದರಿಂದ ಸಂಘವು ಈ ಹೆಗ್ಗಳಿಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ದಯಾಕರ ರೈ ಅವರು ತಿಳಿಸಿದ್ದಾರೆ.
66ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 7 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು ಸಂಘದಲ್ಲಿ 6259 ಸದಸ್ಯರಿದ್ದು 8.73 ಲಕ್ಷ ರೂ.ಪಾಲು ಬಂಡವಾಳ ಹೊಂದಿದೆ. ಕೃಷಿ ಸಾಲಗಾರ ರೈತರಿಗೆ ಬೆಳೆ ವಿಮೆ ಯೋಜನೆ ಸೌಲಭ್ಯ ಅಳವಡಿಸಿದೆ. ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್, ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಸಾಲ ವಿತರಿಸುತ್ತಿದೆ. ಸಂಘದ ಸದಸ್ಯರಿಗೆ ಬಡ್ಡಿ ರಹಿತ ಕೃಷಿ ಸಾಲ, ಕೃಷಿಯೇತರ ಸಾಲ, ರಸಗೊಬ್ಬರ ಮಾರಾಟ, ಪಡಿತರ ವಿತರಣೆ ಮಾಡುತ್ತಿದೆ. ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ 5 ಬಾರಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಹಾಗೂ 2020ನೇ ವರ್ಷದಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ದ.ಕ.ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸಹಕಾರಿ ಇಲಾಖೆಯಿಂದ ಪಡೆದುಕೊಂಡಿದೆ. ಸಂಘವು ಕಳೆದ ಸಾಲಿನಲ್ಲಿಯೂ ಶೇ.100 ಸಾಲ ವಸೂಲಾತಿ ಮಾಡುವಲ್ಲಿ ಯಶಸ್ವಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸಂಘವು ಸದಸ್ಯರ ಪ್ರೀತಿ, ವಿಶ್ವಾಸಗಳಿಸಿದೆ;
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನಿರಂತರ 2 ವರ್ಷಗಳಿಂದ ಶೇ.100 ಸಾಲ ವಸೂಲಾತಿ ಸಾಧನೆ ಮಾಡುವ ಮೂಲಕ ಸಂಘದ ಸದಸ್ಯರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಘದ ಮೇಲಿನ ಅಭಿಮಾನದಿಂದ ಸಕಾಲದಲ್ಲಿ ಸಾಲ ಮರುಪಾವತಿಸಿದ ಸದಸ್ಯರಿಗೆ, ಸಂಘದ ಸರ್ವತೋಮುಖ ಪ್ರಗತಿ, ಅಭಿವೃದ್ಧಿ ಸಹಕರಿಸಿದ ಸದಸ್ಯರಿಗೆ, ಗ್ರಾಹಕರಿಗೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘದ ವಲಯ ಮೇಲ್ವಿಚಾರಕರಿಗೆ ಆಡಳಿತ ಮಂಡಳಿ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಬಾಲಕೃಷ್ಣ ಬಾಣಜಾಲು, ಅಧ್ಯಕ್ಷರು
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ