ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ಅದನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸಂತ್ರಸ್ತ ಬಾಲಕಿಯ ಪೋಷಕರಿಗೆ ಬೆದರಿಕೆಗಳು ಬರುತ್ತಿದ್ದರೂ ಪೊಲೀಸರು ಮೌನವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು ಎನ್ನುವ ನಿಟ್ಟಿನಲ್ಲಿ ಈ ಹೋರಾಟ ನಡೆಸಲಾಗುತ್ತಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆರೋಪಿ ಮಹೇಶ್ ಭಟ್ ನನ್ನು ತಕ್ಷಣವೇ ಬಂಧಿಸಬೇಕು ಎಂದು ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜರವರು ಹೇಳಿದರು.
ಮಾಣಿಲ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಯಾಗಿರುವ ಭೂಮಾಲಕ ಮಹೇಶ್ ಭಟ್‌ರನ್ನು ತಕ್ಷಣ ಬಂಧಿಸಲು ಒತ್ತಾಯಿಸಿ, ಸಂತ್ರಸ್ತ ದಲಿತ ಕುಟುಂಬಕ್ಕೆ ಧೈರ್ಯ ತುಂಬಿ ಪ್ರಕರಣದ ಸಮಗ್ರ ತನಿಖೆ ನಡೆಸಲು ಮತ್ತು ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ವಿವಿಧ ದಲಿತ ಮತ್ತು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ವಿಟ್ಲದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡಿ ಬಾಲಕಿ ಮೇಲೆ ಕೇವಲ ಲೈಂಗಿಕ ಕಿರುಕುಳ ಮಾತ್ರ ನಡೆದಿಲ್ಲ, ಅತ್ಯಾಚಾರ ನಡೆದಿರುವ ಶಂಕೆ ಇದೆ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರೆ ನಂಬಲು ಅಸಾಧ್ಯ. ಪೊಲೀಸರು ಅತ್ಯಾಚಾರಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ ಧರ್ಮರಕ್ಷಣೆಯ ಹೆಸರಲ್ಲಿ ಬೊಬ್ಬಿಡುವವರು ಮಾಣಿಲ ಗ್ರಾಮದ ಕಡೆ ಯಾಕೆ ಮುಖ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ಈ ಘಟನೆಯ ಸತ್ಯಾಸತ್ಯತೆ ಹೊರಗಡೆ ಬರಬೇಕು. ಇಲ್ಲದಿದ್ದಲ್ಲಿ ಮುಂದೆ ಎಸ್ಪಿ ಕಚೇರಿ ಚಲೋ ಹೋರಾಟ ನಡೆಸಲಾಗುತ್ತದೆ ಎಂದವರು ಎಚ್ಚರಿಸಿದರು.
ಕಾರ್ಮಿಕ ಮುಖಂಡ ಶೇಖರ ಮಾತನಾಡಿ ಜಾತಿ ಧರ್ಮ ಬಿಟ್ಟು ಎಲ್ಲರೂ ಇಲ್ಲಿ ಸೇರಿದ್ದಾರೆ. ನಮ್ಮೆಲ್ಲರ ಉದ್ದೇಶವೇ ಬಡ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿದೆ. ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯಿಂದಾಗಿ ಜನರು ನ್ಯಾಯ ವಂಚಿತರಾಗುತ್ತಿದ್ದಾರೆ ಎಂದರು.

ಪ್ರತಿಭಟನೆ ಮೆರವಣಿಗೆ: ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ನಾಡಕಚೇರಿ ಬಳಿ ಪ್ರತಿಭಟನಾ ಸಭೆ ನಡೆಯಿತು.
ಕಾರ್ಮಿಕ ಮುಖಂಡ ಬಿ.ಎಂ ಭಟ್, ರೈತ ಮುಖಂಡರಾದ ಕೆ ಯಾದವ ಶೆಟ್ಟಿ, ಮಂಜುಳಾ ನಾಯಕ್, ದಿನೇಶ್ ಮೂಳೂರು, ಅಶೋಕ್ ಕೊಂಚಾಡಿ, ಬಿ.ಕೆ ಇಮ್ತಿಯಾಜ್, ಸದಾಶಿವ ಪಡುಬಿದ್ರೆ, ಸರೋಜಿನಿ, ದಿನೇಶ್, ಎಸ್.ಪಿ ಆನಂದ್, ಸೇಸಪ್ಪ ಬೆದ್ರಕಾಡ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದಲಿತ ಮುಖಂಡರಾದ ಚಂದ್ರಶೇಖರ್ ಕಿನ್ಯಾ, ವಿಶ್ವನಾಥ ಮಂಜನಾಡಿ, ಪುಷ್ಪರಾಜ್ ಮಾಣಿಲ, ಸುರೇಶ್, ಚಂದಪ್ಪ, ರಾಧಾಕೃಷ್ಣ ಬೊಂಡಂತಿಲ, ಕಮಲಾಕ್ಷ ಬಜಾಲ್, ರಾಘವೇಂದ್ರ ಪಡ್ಪು, ಶೀನ ಕನ್ಯಾನ, ರಾಮಪ್ಪ ಮಂಜೇಶ್ವರ, ಗಂಗಾಧರ ಗೋಳಿಯಡ್ಕ, ವಿಜಯ ಮೂಡಬಿದರೆ, ಡಿವೈಎಫ್ಐ ಮುಖಂಡರಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಝಾಕ್ ಮುಡಿಪು, ಅಸುಂತ ಡಿಸೋಜ, ಪ್ರಮಿಳಾ ಶಕ್ತಿನಗರ, ಸುನಿತಾ ತಣ್ಣೀರುಬಾವಿ, ಜೆಸಿಂತಾ ಜೋಕಟ್ಟೆ, ಅಭಿಷೇಕ್ ಬೆಳ್ತಂಗಡಿ, ಯೋಗಿತಾ ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ರಮೇಶ್, ಯೋಗೀಶ್ ಜಪ್ಪಿನಮೊಗರು ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಕೊಣಾಜೆ ಸ್ವಾಗತಿಸಿದರು, ಕೃಷ್ಣ ತಣ್ಣೀರುಬಾವಿ ವಂದಿಸಿದರು.