ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ಈ ಬಾರಿ ಜಾತ್ರಾಗದ್ದೆಯಲ್ಲಿ ಆಸಕ್ತ ವ್ಯಾಪಾರಸ್ಥರೆಲ್ಲರಿಗೂ ಅವಕಾಶ ಸಿಗುವ ರೀತಿಯಲ್ಲಿ ಏಲಂ ವ್ಯವಸ್ಥೆ ಮಾಡಲಾಗಿದೆ. ಇದು ಬಡವರಿಗೂ ಅನುಕೂಲವಾಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಹೇಳಿದರು.
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಲುವಾಗಿ ಏ.3ರಂದು ದೇವಳದ ಸಭಾಭವನದಲ್ಲಿ ನಡೆದ, ಜಾತ್ರಾಗದ್ದೆಯ ತಾತ್ಕಾಲಿಕ ಏಲಂ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಾ ವ್ಯಾಪಾರಸ್ಥರು ಇಲ್ಲದೆ ಜಾತ್ರೆ ಇಲ್ಲ. ಜಾತ್ರೆ ಇಲ್ಲದೆ ವ್ಯಾಪಾರಸ್ಥರೂ ಇಲ್ಲ. ಹಾಗಾಗಿ ಭೇದ-ಭಾವ ಇಲ್ಲದೆ ಎಲ್ಲರೂ ಉತ್ತಮ ವ್ಯಾಪಾರ ನಡೆಸಬೇಕು. ಏನಾದರೂ ತೊಂದರೆ ಇದ್ದರೆ ನೇರ ನಮ್ಮ ಕಚೇರಿಯನ್ನು ಸಂಪರ್ಕಿಸಿ ಅಥವಾ ನನ್ನನ್ನು ಸಂಪರ್ಕಿಸಿ ಎಂದ ಅವರು, ಇವತ್ತು ಅಂಗಡಿಗಳ ಏಲಂ ಪ್ರಕ್ರಿಯೆ ಆಗಬೇಕಾದರೆ ಅದರ ಹಿಂದೆ ಒಂದಷ್ಟು ದಿನಗಳ ಶ್ರಮವಿದೆ. ಅಲ್ಲಿ ಸರಿಯಾದ ರೀತಿಯಲ್ಲಿ ಮಾರ್ಕಿಂಗ್ ಮಾಡಿ ಎಲ್ಲಿಯೂ ತೊಂದರೆ ಆಗದಂತೆ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಸೇವಾ ರೂಪದಲ್ಲಿ ದೇವಸ್ಥಾನಕ್ಕೆ ನೀಲನಕಾಶೆ ಮಾಡಿಕೊಟ್ಟಿದ್ದಾರೆ. ಅದರಂತೆ ಆಯಾ ಜಾಗದಲ್ಲೇ ಅಂಗಡಿಗಳ ರಚನೆಯಾಗಬೇಕು ಎಂದು ಹೇಳಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ನಳಿನಿ ಪಿ ಶೆಟ್ಟಿ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್ ಏಲಂ ನಿಯಮಗಳನ್ನು ಸಭೆಗೆ ತಿಳಿಯಪಡಿಸಿದರು.ಗಿರೀಶ್ ಕುಮಾರ್ ಏಲಂ ಕೂಗುವ ಪ್ರಕ್ರಿಯೆ ನಡೆಸಿದರು.ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಚಿನ್, ಯಶವಂತ, ದಿನೇಶ್‌ರವರು ಏಲಂ ಬಿಡ್ಡುದಾರರ ಇಎಂಡಿ ಮೊತ್ತ ಸಂಗ್ರಹಿಸುವ ಪ್ರಕ್ರಿಯೆ ನಡೆಸಿದರು. ವಿನೋದ್‌ರವರು ಇಎಮ್‌ಡಿ ಮೊತ್ತ ಪಾವತಿಸಿದವರನ್ನು ಗುರುತಿಸಿ ಏಲಂ ನಡೆಯುವ ಸಭಾಭವನ ಪ್ರವೇಶಕ್ಕೆ ಅವಕಾಶ ನೀಡಿದರು. ಕೋಟಿ-ಚೆನ್ನಯ ಜೊಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉದ್ಯಮಿ ರೋಶನ್ ರೈ ಬನ್ನೂರು, ನವೀನ್‌ಚಂದ್ರ, ವಿದ್ಯಾಮಾತ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಮತ್ತಿತರ ಗಣ್ಯರು ಸಭೆಗೆ ಆಗಮಿಸಿ ತೆರಳಿದರು.
ಸ್ಥಳ ಪಡೆದುಕೊಂಡವರು ಪಾಲಿಸಬೇಕಾದ ಷರತ್ತುಗಳು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ಸ್ಥಳವಾದ್ದರಿಂದ ಷರತ್ತುಗಳಿಗೆ ವಿರುದ್ಧವಾಗಿ ವರ್ತಿಸುವುದು ಹಾಗು ಉದ್ದೇಶ ಪೂರ್ವಕ ಗಲಾಟೆ ಗೊಂದಲಕ್ಕೆ ಆಸ್ಪದ ನೀಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಆರಕ್ಷಕ ಠಾಣೆಗೆ ವರದಿ ಮಾಡಲಾಗುವುದು. ಯಶಸ್ವಿ ಬಿಡ್ಡುದಾರರು ಬಿಡ್ಡು ಮೊತ್ತವನ್ನು ಏಲಂ ನಡೆದ ದಿನದಂದೇ ಪೂರ್ತಿಯಾಗಿ ಕಚೇರಿಯಲ್ಲಿ ಪಾವತಿಸಿ ರಶೀದಿ ಪಡೆಯಬೇಕು. ತಪ್ಪಿದಲ್ಲಿ ಮುಂಗಡ ಠೇವಣಿ ಮೊಬಲಗನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡಲಾಗುವುದು. ವೆಂಕಟ್ರಮಣ ದೇವಸ್ಥಾನದಿಂದ ರಥಬೀದಿಗೆ ಬರುವ ಕಂಬಳ ಗದ್ದೆಯ ಜಾಗದಲ್ಲಿ ಹಾಗು ಕಂಬಳದ ಸ್ಟೇಜಿನ 4 ಬದಿಯಲ್ಲಿ ಅನಧಿಕೃತವಾಗಿ ಯಾವುದೇ ಸ್ಟಾಲ್‌ಗಳನ್ನು ಹಾಕಬಾರದು ಮತ್ತು ಐಸ್‌ಕ್ರೀಂ ಗಾಡಿಗಳನ್ನು ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಂತೆ ಸ್ಥಳದಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೊಟೇಲ್ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ವಚ್ಚತೆಯನ್ನು ಕಾಪಾಡಬೇಕು. ಧ್ವನಿ ವರ್ಧಕ ಅಳವಡಿಸಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಬೇಕು. ಕರ್ಕಶವಾಗಿ ಧ್ವನಿ ಬಿತ್ತರಿಸುವ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು. ಸ್ಟಾಲ್‌ನ ಹೊರಗಡೆ ಬಾಡಿಗೆ ಜನರೇಟರ್ ಅಳವಡಿಸಬಾರದು, ಜನರೇಟರ್ ಜೋಡಣೆಗೆ ಕಚೇರಿಯಿಂದ ಅಥವಾ ಅವಶ್ಯ ಬಿದ್ದಲ್ಲಿ ಮೆಸ್ಕಾಂನಿಂದ ಪರವಾನಿಗೆ ಪಡೆಯಬೇಕು. ಏಲಂನಲ್ಲಿ ಅಂಗಡಿ ವಹಿಸಿಕೊಂಡವರು ಕಚೇರಿಯಿಂದ ನೀಡುವ ಪರವಾನಿಗೆ ಪತ್ರ, ಭಾವಚಿತ್ರವನ್ನು ಅಂಗಡಿಯ ಎದುರು ಫಲಕದೊಂದಿಗೆ ಕಡ್ಡಾಯವಾಗಿ ತೂಗು ಹಾಕತಕ್ಕದ್ದು, ಏಲಂನಲ್ಲಿ ಪಡೆದುಕೊಂಡ ಸ್ಟಾಲ್ ಅನ್ನು ಯಾವುದೇ ಕಾರಣಕ್ಕೆ ಒಳಬಾಡಿಗೆಗೆ ನೀಡುವಂತಿಲ್ಲ. ಒಂದುವೇಳೆ ನೀಡಿದ್ದು ಕಂಡು ಬಂದಲ್ಲಿ ಪರವಾನಿಗೆಯನ್ನು ಯಾವುದೇ ಸೂಚನೆ ನೀಡದೆ ರದ್ದುಪಡಿಸಲಾಗುವುದು. ಜಾತ್ರೋತ್ಸವ ಬೇಸಿಗೆ ಕಾಲವಾದ್ದರಿಂದ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡದಂತೆ, ನೀರು ಮತ್ತು ಆಹಾರ ಸ್ವಚ್ಚತೆ ಕಾಪಾಡಲು ಮುಂಜಾಗೃತಾ ಕ್ರಮವಾಗಿ ಗದ್ದೆ ಬಯಲಿನಲ್ಲಿ ತೆರೆಯುವ ಹೋಟೇಲ್, ತಿಂಡಿ ತಿನಿಸುಗಳ ಅಂಗಡಿ ಮತ್ತು ಜ್ಯೂಸ್ ಅಂಗಡಿಗಳ ಮಾಲಿಕರು ಆಹಾರ ಸುರಕ್ಷತೆಯ ಪರವಾನಿಗೆಯನ್ನು ತಾಲೂಕು ಆರೋಗ್ಯ ಅಧಿಕಾರಿಯವರಿಂದ ಪಡೆಯಬೇಕು.
ವರ್ಷಹೋದಂತೆ ಜಾತ್ರಾಗದ್ದೆಯಲ್ಲಿ ವ್ಯಾಪಾರಸ್ಥರ ಸಂಖ್ಯೆ ಜಾಸ್ತಿ ಆಗುತ್ತದೆ.ಕಳೆದ ಬಾರಿ 250 ತಾತ್ಕಾಲಿಕ ಅಂಗಡಿಗಳಿದ್ದವು. ಈ ಬಾರಿ ಅನ್ನಪ್ರಸಾದ ವಿತರಣೆಯನ್ನು ಕೆರೆಯ ಬಳಿ ಸ್ಥಳಾಂತರಿಸಿರುವುದರಿಂದ ಹಿಂದಿದ್ದಲ್ಲಿ ವಿಶಾಲವಾದ ಜಾಗ ಲಭ್ಯವಾಗಿದ್ದು, ಅಲ್ಲಿ 110 ಹೆಚ್ಚುವರಿ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.ಇಲ್ಲಿ ಎಲ್ಲಾ ಬಡವರಿಗೂ ವ್ಯಾಪಾರಕ್ಕೆ ಅವಕಾಶ ಸಿಗಬೇಕೆಂಬ ನೆಲೆಯಲ್ಲಿ ಒಬ್ಬರಿಗೆ ಎರಡು ಅಂಗಡಿಗಳನ್ನು ಮಾತ್ರ ನಿಗದಿಪಡಿಸಲಾಗಿದೆ. ಇದರಿಂದಾಗಿ ಮುಂದೊಂದು ದಿನ ಪುತ್ತೂರು ಜಾತ್ರೆಯಲ್ಲಿ ಅಂಗಡಿ ಹಾಕಿ ಉತ್ತಮ ವ್ಯಾಪಾರ ನಡೆಸಿ ನನ್ನ ಮಗಳಿಗೆ ಮದುವೆ ಮಾಡಿದ್ದೇವೆ. ಮನೆ ಕಟ್ಟಿದ್ದೇವೆ ಎಂಬ ಮಾತು ಬಡ ವ್ಯಾಪಾರಸ್ಥರ ಬಾಯಲ್ಲಿ ಬರಬೇಕು. ಆಗ ನಮ್ಮ ಶ್ರಮ ಫಲಿಸಿದಂತಾಗುತ್ತದೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
392 ಸ್ಟಾಲ್ ದಾಖಲೆ ಆದಾಯ
ಈ ಬಾರಿ ಸುಮಾರು 392 ಸ್ಟಾಲ್‌ಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಮೊದಲ ದಿನ ಅಂದಾಜು 40 ಸ್ಟಾಲ್‌ಗಳು ಮಾತ್ರ ಏಲಂಗೆ ಬಾಕಿಯಿದ್ದು ಆಸಕ್ತರು ತಕ್ಷಣ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು.ಮೊದಲ ದಿನದ ಏಲಂನಲ್ಲಿ ಅಂದಾಜು 75 ಲಕ್ಷ ರೂ.ಆದಾಯ ಸಂಗ್ರಹವಾಗಿದ್ದು ಏ.4ರಂದೂ ಏಲಂ ಪ್ರಕ್ರಿಯೆ ಮುಂದುವರಿಯಲಿದೆ. ಒಟ್ಟಾರೆ ಜಾತ್ರಾಗದ್ದೆ ತಾತ್ಕಾಲಿಕ ಏಲಂ ಮೂಲಕವೂ ದೇವಾಲಯಕ್ಕೆ ದಾಖಲೆಯ ಆದಾಯ ಲಭಿಸಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.
ಗೊಂದಲವಿಲ್ಲದೆ ನಡೆದ ಏಲಂ
ಮಧ್ಯಾಹ್ನ ಗಂಟೆ 12ಕ್ಕೆ ಆರಂಭವಾದ ಏಲಂ ಪ್ರಕ್ರಿಯೆ ರಾತ್ರಿ ಗಂಟೆ 9.30ರ ತನಕ ಮುಂದುವರಿಯಿತು. ಏಲಂನಲ್ಲಿ ಭಾಗಿಯಾದ ಬಿಡ್ಡುದಾರರಿಗೆ ಮಧ್ಯಾಹ್ನ ಊಟ ಮತ್ತು ಸಂಜೆ ಚಹಾದ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಯಾವುದೇ ಗೊಂದಲವಿಲ್ಲದೆ ಏಲಂ ಪ್ರಕ್ರಿಯೆ ನಡೆದಿದೆ. ಏ.4ರಂದು ಅಮ್ಯೂಸ್‌ಮೆಂಟ್ ಪಾರ್ಕ್ ಮೊದಲಾದ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಜಾಗದ ಹಂಚಿಕೆ ಏಲಂ ನಡೆಯಲಿದೆ.