ಭೂಸೇನೆ ಯೋಧ ಗೋಳಿತ್ತೊಟ್ಟಿನ ಕರುಣಾಕರ ಶೆಟ್ಟಿ ನಿವೃತ್ತಿ-ನಾಳೆ ಹುಟ್ಟೂರಿನಲ್ಲಿ ಅಭಿನಂದನೆ

0

ನೆಲ್ಯಾಡಿ: ಭಾರತೀಯ ಭೂಸೇನೆಯಲ್ಲಿ ಯೋಧರಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 17 ವರ್ಷ ಸೇವೆ ಸಲ್ಲಿಸಿದ್ದ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ನಿವಾಸಿ ಕರುಣಾಕರ ಶೆಟ್ಟಿಯವರು ಮಾ.31ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಎ.6ರಂದು ಬೆಳಿಗ್ಗೆ ಹುಟ್ಟೂರಿಗೆ ಆಗಮಿಸುತ್ತಿರುವ ಕರುಣಾಕರ ಶೆಟ್ಟಿಯವರಿಗೆ ಗೋಳಿತ್ತೊಟ್ಟು ರಾಷ್ಟ್ರಭಕ್ತರ ವೇದಿಕೆ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಕರುಣಾಕರ ಶೆಟ್ಟಿಯವರು ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ನಿವಾಸಿ ಕೃಷ್ಣ ಶೆಟ್ಟಿ ಮತ್ತು ಸುಂದರಿ ದಂಪತಿಯ ಪುತ್ರ. ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗೋಳಿತ್ತಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೊಣಾಲು ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದರು. ಬಡತನದ ಹಿನ್ನೆಲೆಯಲ್ಲಿ ಬಳಿಕದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಖಾಸಗಿಯಾಗಿ ಉದ್ಯೋಗ ಮಾಡುತ್ತಿದ್ದರು.

ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದ ಕರುಣಾಕರ ಶೆಟ್ಟಿಯವರು ಸೇನಾ ನೇಮಕಾತಿ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನಾಲ್ಕನೇ ಪ್ರಯತ್ನದಲ್ಲಿ ಭಾರತೀಯ ಭೂ ಸೇನೆಗೆ ಆಯ್ಕೆಗೊಂಡಿದ್ದ ಇವರು 2008 ಮಾ.24ರಂದು ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡಿದ್ದರು. ಬಿಹಾರದ ಗಯಾದಲ್ಲಿ ಸೇನಾ ತರಬೇತಿ ಮುಗಿಸಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೇವೆ ಆರಂಭಿಸಿದ್ದರು. ಅಲ್ಲಿಂದ ಜಮ್ಮು ಕಾಶ್ಮೀರದ ಉರಿ ಸೆಕ್ಟರ್, ತಂಗ್‌ದಾರ್, ಅಸ್ಸಾಂ ರಾಜ್ಯದ ಮಿಸ್ಸಮಾರಿ, ಚೀನಾ ಗಡಿ ಪ್ರದೇಶವಾದ ಅರುಣಾಚಲ ಪ್ರದೇಶದ ತವಂಗ್ ಹೋಳಿ ವಾಟರ್, ಪಂಜಾಬ್‌ನ ಲೂದಿಯಾನ ಹಾಗೂ ಆಕ್ಸಿಜನ್ ರಹಿತ ಪ್ರದೇಶ ಮತ್ತು ಅತಿಯಾದ ಕೋರೆಯುವ ಚಳಿಯನ್ನು ಹೊಂದಿರುವ ಪ್ರಪಂಚದ ಅತೀ ಎತ್ತರದ ಯುದ್ಧ ಭೂಮಿ ಲೇ ಲಡಾಕ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಬೆಂಗಳೂರು, ನಂತರ ಅಸ್ಸಾಂ, ಮಹಾರಾಷ್ಟ್ರದ ಪುಣೆಯಲ್ಲಿ ಸೇವೆ ಸಲ್ಲಿಸಿ ಮಾ.31ರಂದು ನಿವೃತ್ತಿಯಾದರು. ಇವರ ಪತ್ನಿ ಭಾಗ್ಯಶ್ರೀ, ಪುತ್ರ ಶೌರ್ಯ ಶೆಟ್ಟಿ ಗೋಳಿತ್ತೊಟ್ಟು ಅಂಬುಡೇಲುನಲ್ಲಿ ವಾಸವಾಗಿದ್ದಾರೆ.

ನಾಳೆ ಹುಟ್ಟೂರಿಗೆ ಆಗಮನ:
ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಕರುಣಾಕರ ಶೆಟ್ಟಿ ಅವರು ಎ.6ರಂದು ಬೆಳಿಗ್ಗೆ ಹುಟ್ಟೂರಿಗೆ ಆಗಮಿಸಲಿದ್ದಾರೆ. ಇವರಿಗೆ ಗೋಳಿತ್ತೊಟ್ಟು ರಾಷ್ಟ್ರಭಕ್ತರ ವೇದಿಕೆ ವತಿಯಿಂದ ಬೆಳಿಗ್ಗೆ 9.30ಕ್ಕೆ ನೆಲ್ಯಾಡಿಯಲ್ಲಿ ಸ್ವಾಗತ ಕೋರಿ ಅಲ್ಲಿಂದ ಗೋಳಿತ್ತೊಟ್ಟು ತನಕ ವಾಹನ ಮೆರವಣಿಗೆಯಲ್ಲಿ ಕರೆತರಲಾಗುತ್ತಿದೆ. ಬೆಳಿಗ್ಗೆ 11.30ಕ್ಕೆ ಗೋಳಿತ್ತೊಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here