ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಒಂಟಿ ಸಲಗದ ಉಪಟಳದಿಂದ ಕೃಷಿಕರು ಹಾಗೂ ಆಸುಪಾಸಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಈ ಒಂಟಿ ಸಲಗ ರಾತ್ರಿಯ ಸಮಯದಲ್ಲಿ ಇಲ್ಲಿನ ಓಟೆಚ್ಚಾರು ನಿವಾಸಿ ಶಾಂತಪ್ಪ ಗೌಡರ ತೋಟಕ್ಕೆ ಬಂದಿದ್ದು, ಕೃಷಿಯನ್ನು ಹಾನಿಗೊಳಿಸಿದಲ್ಲದೆ, ನೀರಿನ ಪೈಪ್‌ಗಳನ್ನು ಒಡೆದು ಹಾಕಿದೆ. ಇಲ್ಲೇ ಸಮೀಪದ ವಿ. ಮುಹಮ್ಮದ್ ಬಂದಾರು ಎಂಬವರ ಮನೆ ಕಡೆನೂ ಆಗಮಿಸಿದ ಒಂಟಿ ಸಲಗವು ಅಲ್ಲಿದ್ದ ಎರಡು ಈಂದ್ ಗಿಡಗಳನ್ನು ಮಗುಚಿ ಹಾಕಿದೆ. ಅಬ್ಬಾಸ್ ಬಟ್ಲಡ್ಕ ಎಂಬವರ ಡ್ರಮ್ ವೊಂದನ್ನು ಹುಡಿ ಮಾಡಿ ಹಾಕಿದೆ. ಬಳಿಕ ಪರಿಸರದವರು ಪಟಾಕಿ ಸಿಡಿಸಿದ್ದು, ಆಗ ಒಂಟಿ ಸಲಗವು ಘೀಳಿಟ್ಟುಕೊಂಡು ನೇತ್ರಾವತಿ ನದಿಯನ್ನು ದಾಟಿ ನೇರೆಂಕಿಮಲೆ ಕಾಡಿನತ್ತ ತೆರಳಿದೆ. ಕಳೆದ ಒಂದು ವಾರದಿಂದ ಪದೇ ಪದೇ ಒಂಟಿ ಸಲಗವು ಇಲ್ಲಿಗೆ ಆಗಮಿಸುತ್ತಿದ್ದು, ಪರಿಸರದ ಜನತೆಯ ನೆಮ್ಮದಿ ಕೆಡಿಸಿದೆ. ಈ ಬಗ್ಗೆ ವಲಯ ಅರಣ್ಯಾಧಿಕಾರಿಯವರ ಕಚೇರಿಗೆ ಮಾಹಿತಿ ನೀಡಿದರೂ ಅವರು ಭೇಟಿ ನೀಡಿ ಪರಿಶೀಲಿಸಿ ಹಿಂದಿರುಗುತ್ತಾರೆಯೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರ ಅಸಾಧ್ಯವಾಗಿದೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.