ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದ ವಿವಿಧ ಇಲಾಖಾ ಅಧಿಕಾರಿ, ನೌಕರರು
ಪುತ್ತೂರು: ಪ್ರತಿದಿನ ಕಚೇರಿ ಕಾರ್ಯ, ಕೆಲಸದ ಒತ್ತಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳ ನೌಕರರು ಹಾಗೂ ಅಧಿಕಾರಿಗಳು ತಮಗಾಗಿಯೇ ಏರ್ಪಡಿಸಿದ್ದ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯಿಂದ ತಾಲೂಕು ವ್ಯಾಪ್ತಿಯ ಸರಕಾರಿ ನೌಕರರಿಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಾಹಿತಿ ಕಾರ್ಯಾಗಾರವು ಎ.6ರಂದು ದರ್ಬೆ ಆಫೀಸರ್ಸ್ ಕ್ಲಬ್ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶಟಲ್ ಬ್ಯಾಡ್ಮಿಂಟನ್, ಕರೋಕೆ ಗಾಯನ ಸ್ಪಧೆ, ರಸಪ್ರಶ್ನೆ, ಆಶುಭಾಷಣ ಸ್ಪರ್ಧೆಗಳು ನಡೆಯಿತು. ಇದಲ್ಲದೆ ಹಲವು ರೀತಿಯ ಮನರಂಜನಾ ಸ್ಪರ್ಧೆಗಳು ನಡೆದಿದ್ದು ಸ್ಪರ್ಧೆಯ ಜೊತೆಗೆ ಮನರಂಜನೆ ನೀಡಿತು. ಪ್ರತಿದಿನ ಕಚೇರಿ ಕೆಲಸಗಳಲ್ಲಿ ತಲ್ಲೀನರಾಗಿರುತ್ತಿದ್ದ ಅಧಿಕಾರಿ ಹಾಗೂ ನೌಕರರು ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್. ಮಾತನಾಡಿ, ಸರಕಾರಿ ನೌಕರರಿಗೆ ಮುಖ್ಯ ಸಮಸ್ಯೆಯಾಗಿರುವ ಎನ್ಪಿಎಸ್ನ್ನು ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವಂತೆ ನಮ್ಮ ಮುಂದಿನ ಬಹುಮುಖ್ಯ ಹೋರಾಟವಾಗಿದ್ದು, ಎಲ್ಲಾ ಸರಕಾರಿ ನೌಕರರು, ಸಂಘಟನೆಗಳು ಒಟ್ಟಾಗಿ ಹೋರಾಟದಲ್ಲಿ ಕೈಜೋಡಿಸುವಂತೆ ಕರೆ ನೀಡಿದರು. ಈಗಾಗಲೇ ಜಿಲ್ಲಾ ಸಂಘದ ಪ್ರತಿಯೊಂದು ಕಾರ್ಯ ಯೋಜನೆಗಳಿರಲಿ, ಹೋರಾಟಗಳಲ್ಲಿ ಪುತ್ತೂರು ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಅವರಿಂದ ಸಹಕಾರ ದೊರೆತಿದೆ. ಸರಕಾರಿ ನೌಕರರ ಸರ್ವೋತ್ತಮ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಹಾಗೆಯೇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ತಮ್ಮ ಪ್ರಮಾಣ ಪತ್ರ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಸರಕಾರಿ ನೌಕರರ ಸಂಘದವರಿಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ನಾವೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರೆ ಕಾರ್ಯಕ್ರಮ ಯಾರಿಗೆ ಎಂದು ಪ್ರಶ್ನಿಸಿದರು. ಕಾರ್ಯಕ್ರಮ ಸಂಘದ ಸದಸ್ಯರು ಹಾಗೂ ಕುಟುಂಬದವರ ಒಳಿತಿಗಾಗಿ ಇರುವುದು ಎಂದ ಅವರು, ವೇತನ ಪ್ಯಾಕೇಜ್ ಸಂಘದ ಹೋರಾಟದ ಫಲವಾಗಿದೆ. ಈ ನಿಟ್ಟಿನಲ್ಲಿ ಇಂದು ವಿವಿಧ ಬ್ಯಾಂಕಿನವರು ಮಾಹಿತಿ ನೀಡಲು ಬಂದಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ರಾಜೇಶ್ ರೈ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್ ಕುಮಾರ್, ಉಚ್ಚ ನ್ಯಾಯಾಲದ ಜಯಕುಮಾರ್ ಶುಭಹಾರೈಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್ ಪಾಟಾಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಬ್ರಹಾಂ ಎಸ್.ಎ., ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಎಂ., ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಅಧ್ಯಕ್ಷೆ ಗಾಯತ್ರಿ, ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಲೀಲಯ್ಯ ಎಂ., ಜಿಲ್ಲಾ ಫಾರ್ಮಸಿಸ್ಟ್ ಸಂಘದ ಅಧ್ಯಕ್ಷ ಸುನಿಲ್ ವಿ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಚಂದ್ರ ನಾಯ್ಕ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ಕೆ. ವಂದಿಸಿದರು. ಕೆಯ್ಯೂರು ಕೆಪಿಎಸ್ ಶಾಲಾ ಉಪ ಪ್ರಾಂಶುಪಾಲ ವಿನೋದ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕ ವಿಮಾ ಇಲಾಖೆಯ ಸಾವಿತ್ರಿ ಪ್ರಾರ್ಥಿಸಿದರು. ತನುಜಾ ಕ್ಸೇವಿಯರ್, ಕೃಷ್ಣ ಬಿ., ಜೂಲಿಯಾನ ಮೋರಾಸ್, ರವಿಚಂದ್ರ, ಜಗನ್ನಾಥ, ಸುನಿಲ್, ಸುಧೀರ್, ಸುಜಾತ, ಎಫ್ಜಿಎಂ ಗೌಡ, ಡಾ.ಹರಿಪ್ರಸಾದ್, ರಾಮಚಂದ್ರ, ಯಶೋಧರ, ಧರ್ಣಪ್ಪ ಗೌಡ, ಶಾಲಿನಿ, ಸಂದೀಪ್, ವರುಣ್ ಕುಮಾರ್, ಜಯರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಮಾಹಿತಿ ಕಾರ್ಯಾಗಾರ:
ಸಭಾ ಕಾರ್ಯಕ್ರಮದ ಬಳಿಕ ಸರಕಾರಿ ನೌಕರರು ವೇತನ ಪಡೆಯುತ್ತಿರುವ ಉಳಿತಾಯ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು ಬೇಕಾದ ದಾಖಲೆಗಳು ಹಾಗೂ ಇದರಿಂದ ನೌಕರರಿಗೆ ದೊರೆಯುವ ಸೌಲಭ್ಯಗಳ ಕುರಿತು ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಪ್ ಬರೋಡ ಹಾಗೂ ಇಂಡಿಯನ್ ಬ್ಯಾಂಕ್ನ ಪ್ರಬಂಧಕರು ತಮ್ಮ ತಮ್ಮ ಬ್ಯಾಂಕಿನ ಕುರಿತು ಮಾಹಿತಿ ನೀಡಿದರು. ನಂತರ ಸರಕಾರಿ ನೌಕರರ ಸಂಘದ ಸದಸ್ಯರಿಗೆ ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳು ಜರಗಿತು. ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿತು.