ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ  ಯುರೇಕಾ 2025ರ ಉದ್ಘಾಟನಾ ಸಮಾರಂಭ

0
  • ವಿದ್ಯಾರ್ಥಿಗಳು ತಮ್ಮ ಅಭಿರುಚಿಯನ್ನರಿತು ಮುಂದಡಿಯಿಡಬೇಕು :ಡಾ.ಸುರೇಶ್‌ ಪುತ್ತೂರಾಯ
  • ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ
  • ರಾಜ್ಯದ ವಿವಿಧೆಡೆಗಳಿಂದ ಹಲವು ವಿದ್ಯಾರ್ಥಿಗಳು ಭಾಗಿ

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌.ಎಸ್‌.ಎಲ್‌.ಸಿ ಒಂದು ಪ್ರಮುಖವಾದ ಘಟ್ಟ. ಮುಂದಿನ ಭವಿಷ್ಯವನ್ನು ನಿರ್ಧರಿಸುವಲ್ಲಿ ಆಯ್ಕೆ ಮಾಡಿಕೊಳ್ಳಬೇಕಾದ ವಿಷಯಗಳ ಮಾಹಿತಿಯ ಕೊರತೆ ಈ ಹಂತದಲ್ಲಿರುತ್ತದೆ. ವಿದ್ಯಾರ್ಥಿಗಳು ತಮ್ಮ ಅಭಿರುಚಿಯನ್ನು ಅರಿತುಕೊಂಡು ಮುಂದಡಿ ಇರಿಸಿದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪುತ್ತೂರಿನ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಏಪ್ರಿಲ್ 7ರಿಂದ 12ರವರೆಗೆ ನಡೆಯಲಿರುವ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ-2025 ಇದರ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟು “ವಿದ್ಯಾಭ್ಯಾಸ ಎಂದರೆ ಕೇವಲ ಪಾಠ-ಪ್ರವಚನಗಳಿಗೆ ಮಾತ್ರ ಸೀಮಿತವಾಗದೆಸಂಸ್ಕಾರ, ಶಿಸ್ತು, ಜೀವನಮೌಲ್ಯ ಇವೆಲ್ಲವುಗಳನ್ನು ಒಳಗೊಂಡ ಸರ್ವತೋಮುಖ ಶಿಕ್ಷಣ ಪಡೆಯುವುದಾಗಿದೆ. ವಿವೇಕಾನಂದ ಪದವಿಪೂರ್ವ ಕಾಲೇಜು ಒಬ್ಬ ವಿದ್ಯಾರ್ಥಿ ಪಡೆದುಕೊಳ್ಳಬೇಕಾದ ಪರಿಪೂರ್ಣ ಶಿಕ್ಷಣವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಸಂಸ್ಥೆ ಒದಗಿಸುತ್ತಿರುವ ಈ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು” ಎಂದು ನುಡಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ತಂತ್ರಜ್ಞಾನ,ಕಲೆ ಮುಂತಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿದ ಸಂಪನ್ಮೂಲ ವ್ಯಕ್ತಿಗಳು ಮುಂದಿನ ಆರು ದಿನಗಳಲ್ಲಿ ಹಲವು ಅವಧಿಗಳನ್ನು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಗಳಾಗಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡು, ಮುಂದಿನ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳುವಂತೆ ಕಿವಿಮಾತನ್ನಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ ವಹಿಸಿಕೊಂಡು “ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ನಮ್ಮೊಳಗೆ ಅಂತರ್ಗತವಾಗಿರುವ ವಿಶೇಷತೆ ಏನೆಂಬುದನ್ನು ನಾವೇ ಹುಡುಕಿ ಹೊರತೆಗೆದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿದವರಿಗಿಂತ ನಾವು ಹೇಗೆ ಭಿನ್ನವಾಗಬಲ್ಲೆವು ಎಂಬುದನ್ನು ಆಲೋಚಿಸಿ ಕಾರ್ಯವೆಸಗಬೇಕಾಗಿದೆ. ವಿದ್ಯಾರ್ಥಿಗಳು ವಯೋಸಹಜವಾದ ಆಕರ್ಷಣೆಗಳಿಗೆ ಒಳಗಾಗದೆ ಮನಸ್ಸನ್ನು ನಿಗ್ರಹಿಸಿಕೊಂಡು ತಮ್ಮನ್ನು ಸತ್ಪಥದೆಡೆಗೆ ನಡೆಸಬಲ್ಲ ಅವಕಾಶಗಳ ಸದ್ಬಳಕೆಯನ್ನು ಮಾಡಿಕೊಂಡು ಬರಬಹುದಾದ ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು”ಎಂದುಹಿತನುಡಿದರು.

ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ.ಎಸ್..ಆರ್ ನ ನಿವೃತ್ತ ಹಿರಿಯ ವಿಜ್ಞಾನಿ ಹಾಗೂ ಸಲ್ಯೂಟರಿ ನ್ಯೂಟ್ರಿಫುಡ್ಸ್ ,ಮೈಸೂರು ಇದರ ಸಹ ಸಂಸ್ಥಾಪಕರು ಹಾಗೂ ತಾಂತ್ರಿಕ ನಿರ್ದೇಶಕರಾದ ಡಾ. ಅನು ಅಪ್ಪಯ್ಯ ಕೆ.ಎ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ವತ್ಸಲಾ ರಾಜ್ಞಿ, ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ ಉಪಸ್ಥಿತರಿದ್ದರು.ಮುಂದಿನ ಆರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ನುರಿತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗಾಗಿ ವ್ಯತ್ಯಸ್ತ ವಿಷಯಗಳ ಮೇಲೆ ಹಲವು ಅವಧಿಗಳನ್ನು ನಡೆಸಿಕೊಡಲಿದ್ದಾರೆ.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ.ಎನ್‌ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಸಾಯನಶಾಸ್ತ್ರವಿಭಾಗದ ಉಪನ್ಯಾಸಕಿ ದಯಾಮಣಿಟಿ.ಕೆ ಕಾರ್ಯಕ್ರಮವನ್ನುನಿರೂಪಿಸಿ ,ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here