ಥೈರಾಯಿಡ್, ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ ಉಚಿತ ತಪಾಸಣೆ
ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್‌ನಲ್ಲಿನ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಇದರ 12ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಜಂಟಿ ಸಹಯೋಗದಲ್ಲಿ ಎ.೯ ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ(ಮೂಳೆ ಸಾಂದ್ರತೆ) ಇದರ ಉಚಿತ ತಪಾಸಣೆಯು ಡಾ.ನಝೀರ್ ಅಹಮದ್‌ರವರ ಕ್ಲಿನಿಕ್‌ನಲ್ಲಿ ನಡೆಯಿತು.

ಡಾ.ನಝೀರ್‌ರವರು ಸಾಮಾಜಿಕ ಸೇವೆ ಮೆಚ್ಚಬೇಕಾದ್ದು-ಡಾ.ಶ್ರೀಪತಿ ರಾವ್:
ಮುಖ್ಯ ಅತಿಥಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಮಾತನಾಡಿ, ಡಾ.ನಝೀರ್‌ರವರೋರ್ವ ವೃತ್ತಿಯಲ್ಲಿ ವೈದ್ಯರಾಗಿದ್ದು ರೋಟರಿ ಕ್ಲಬ್ ಮುಖೇನ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ಮಾಡುವ ಮೂಲಕ ಸಾಮಾಜಿಕ ಸೇವೆಯಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ, ಕ್ಲಿನಿಕ್‌ಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವುದು ರೋಗಿಗಳು ಜಾಸ್ತಿ ಜಾಸ್ತಿ ಬರಲಿ ಎನ್ನುವ ತಪ್ಪು ಕಲ್ಪನೆ ಸಾರ್ವಜನಿಕರಲ್ಲಿದೆ. ಇಂತಹ ಶಿಬಿರಗಳು ರೋಗಿಗಳಲ್ಲಿನ ರೋಗವನ್ನು ಪ್ರಾಥಮಿಕ ಹಂತದಲ್ಲಿ ತಿಳಿದುಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಆಧುನಿಕ ಯುಗದಲ್ಲಿ ಚಿಕಿತ್ಸಾ ವಿಧಾನಗಳಲ್ಲಿ ಬಹಳ ಪ್ರಗತಿ ಹೊಂದಿದ್ದರೂ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಮಾನವನ ಜೀವನದ ಶೈಲಿಯಲ್ಲಿನ ಬದಲಾವಣೆ ಕಾರಣವಾಗಿದೆ ಎಂದರು.
ಫಲಾನುಭವಿಗಳಿಗೆ ಕ್ಲಿನಿಕ್‌ನಿಂದ ಸೂಕ್ತ ಚಿಕಿತ್ಸೆ-ಡಾ.ನಝೀರ್ ಅಹಮ್ಮದ್:
ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ವೈದ್ಯಕೀಯ ತಜ್ಞರಾದ ಡಾ.ನಝೀರ್ ಅಹಮದ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹನ್ನೊಂದು ವರ್ಷಗಳಿಂದ ನಮ್ಮ ಕ್ಲಿನಿಕ್ ರೋಟರಿ ಪುತ್ತೂರು, ರೋಟರ್ಯಾಕ್ಟ್ ಪುತ್ತೂರು ಸಹಯೋಗದಲ್ಲಿ ಹಲವಾರು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದು ಈ ಶಿಬಿರಗಳಿಗೆ ಫಲಾನುಭವಿಗಳು ಪಾಲ್ಗೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಜೊತೆಗೆ ವಿಶ್ವ ಮಧುಮೇಹ ರ‍್ಯಾಲಿಯನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದ್ದೇವೆ. ದೇಹಕ್ಕೆ ಬಾಧಿಸುವ ರೋಗಗಳ ಜೊತೆಗೆ ವ್ಯಕ್ತಿಯ ಮಾನಸಿಕ ತೊಂದರೆಗಳ ನಿವಾರಣೆಗೆ ಕ್ಲಿನಿಕ್‌ನಲ್ಲಿ ಆಪ್ತ ಸಮಾಲೋಚನೆ ಕೇಂದ್ರವನ್ನು ತೆರೆದಿದ್ದೇವೆ. ಜೀವನದ ಆಹಾರ ಶೈಲಿಯಲ್ಲಿ ವ್ಯತ್ಯಯ, ಮಾನಸಿಕ ಒತ್ತಡದಿಂದ ಬಳಲುವಿಕೆ, ವ್ಯಾಯಾಮದ ಕೊರತೆಯಿಂದ ವ್ಯಕ್ತಿಗೆ ಹಲವಾರು ರೋಗಗಳು ಬಾಧಿಸುತ್ತಿದ್ದು ಇದರಿಂದ ಮುಕ್ತವಾಗಲು ಪ್ರಯತ್ನ ಪಡಬೇಕು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಇಂಟಾಸ್ ಕಂಪೆನಿಯ ಸೃಜನ್, ಟೊರೆಂಟ್ ಕಂಪೆನಿಯ ಚೇತನ್, ಸಿಸ್ಟೋಫಿಕ್ ಕಂಪೆನಿಯ ದೀಪಕ್, ಅಲ್ಕೇಮ್ ಕಂಪನಿಯ ಭೀಮ್ ಹಾಗೂ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಸಿಬ್ಬಂದಿಗಳು ಸಹಕರಿಸಿದರು. ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಕೋಶಾಧಿಕಾರಿ ರಫೀಕ್ ಎಂ.ಜಿ, ಸದಸ್ಯರಾದ ಶ್ರೀಧರ್ ಗೌಡ ಕಣಜಾಲು, ಬಾಲಕೃಷ್ಣ ಆಚಾರ್ಯ, ದತ್ತಾತ್ರೇಯ ರಾವ್, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಸುಬ್ರಮಣಿ, ಮಾಜಿ ಅಧ್ಯಕ್ಷ ಗಣೇಶ್ ಕಲ್ಲರ್ಪೆ ಉಪಸ್ಥಿತರಿದ್ದರು.
ಉಪನ್ಯಾಸ/ಲಭ್ಯ
ಪಾದಾರ್ಪಣೆ ಪ್ರಯುಕ್ತ ಕ್ಲಿನಿಕ್‌ನಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವೈಯಕ್ತಿಕ ಸಮಾಲೋಚನೆ(ಕೌನ್ಸಿಲಿಂಗ್ ಥೆರಪಿ)ಯ ಮಹತ್ವದ ಕುರಿತು ಆಪ್ತ ಸಮಾಲೋಚನೆ ಕುರಿತು ಆಪ್ತ ಸಮಾಲೋಚನೆ ಮತ್ತು ಮನಶಾಸ್ತ್ರಜ್ಞ ಶ್ರದ್ಧಾ ಎಲ್.ರೈಯವರು ಫಲಾನುಭವಿಗಳಿಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶ್ರದ್ದಾ ಎಲ್.ರೈಯವರು ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್‌ನಲ್ಲಿ ಪ್ರತಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಲಭ್ಯರಿರುವರು ಎಂದು ಕ್ರಿನಿಕ್ ಪ್ರಕಟಣೆ ತಿಳಿಸಿದೆ.
ಸುಪ್ತ ಮನಸ್ಸು, ಸಕರಾತ್ಮಕ ಯೋಚನೆಗಳಿದ್ದಲ್ಲಿ ಆರೋಗ್ಯ ಸ್ಥಿರ
ಆಪ್ತ ಸಮಾಲೋಚನೆ ಎಂದರೆ ಕೇವಲ ಒಂದು ಸಮಸ್ಯೆಯನ್ನು ಸರಿಪಡಿಸಲು ಸಲಹೆ ನೀಡುವುದು ಮಾತ್ರವೇ ಅಲ್ಲ, ಬದಲಾಗಿ ಸಮಾಲೋಚನೆ ಪಡೆಯುವವರು ತಮ್ಮನ್ನು ತಾವೇ ಅರ್ಥ ಮಾಡಿಕೊಳ್ಳಲು ನೆರವಾಗುವ ಒಂದು ಪ್ರಕ್ರಿಯೆಯಾಗಿ ಅವರಿಗೆ ತಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆಯಲು ನೆರವಾಗುವ ಮಾರ್ಗವಾಗಿರುತ್ತದೆ. ನಮ್ಮಲ್ಲಿ ಸುಪ್ತ ಮನಸ್ಸು ಹಾಗೂ ಸಕರಾತ್ಮಕ ಯೋಚನೆಗಳಿದ್ದಲ್ಲಿ ಆರೋಗ್ಯ ಸುಸ್ಥಿರವಾಗಿರುತ್ತದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಯಾವುದೋ ವಿಷಯದಲ್ಲಿ ಮಾನಸಿಕತ್ವಕ್ಕೆ ಒಳಗಾಗುತ್ತಾರೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕತೆಯ ಬಳಲುವಿಕೆ ಕಾರಣವಾಗುತ್ತದೆ. ದೈಹಿಕ ಆರೋಗ್ಯಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಾರೆ ಆದರೆ ಮಾನಸಿಕ ಆರೋಗ್ಯಕ್ಕೆ ಮನಶಾಸ್ತ್ರಜ್ಞರು ವಿಷಯನ್ನಾಗ್ರಹಿಸಿ ತಜ್ಞ ವೈದ್ಯರುಗಳನ್ನು ಸ್ಪಂದಿಸಲು ನೆರವಾಗುತ್ತಾರೆ. ಜೀವನದಲ್ಲಿ ಕಷ್ಟ-ಸುಖ ಇವೆರಡೂ ಇದೆ ಆದರೆ ಇವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದು ನಮ್ಮ ಅಗತ್ಯವಾಗಿದೆ.
ಶ್ರದ್ಧಾ ಎಲ್.ರೈ, ಆಪ್ತ ಸಮಾಲೋಚನೆ ಮತ್ತು ಮನಶಾಸ್ತ್ರಜ್ಞರು
ಫಲಾನುಭವಿಗಳು
ಶುಗರ್-80 ಮಂದಿ, ಬಿಎಂಡಿ-45 ಮಂದಿ, ಥೈರಾಯಿಡ್-63 ಮಂದಿ, ಲಿಪಿಡ್-64 ಮಂದಿ, HBA1C-52 ಮಂದಿ