ಉಪ್ಪಿನಂಗಡಿ : ಇಲ್ಲಿನ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಗೆ ಸಂಬಂಧಿಸಿ ಓರ್ವನ ಬಂಧನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಏ ಟಿ ಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಅಲ್ಲಿನ ಸಿ ಸಿ ಕ್ಯಾಮರಾವನ್ನು ಕಿತ್ತೆಗೆಯಲು ಯತ್ನಿಸಿ , ಏ ಟಿ ಎಂ ಮಿಷಿನ್ ನನ್ನು ತೆರೆಯಲು ಯತ್ನಿಸಿ ಏ ಟಿ ಎಂ ಮಿಷಿನ್ ಗೆ ಹಾನಿಯನ್ನುಂಟು ಮಾಡಲಾಗಿತ್ತು. ಈ ಬಗ್ಗೆ ಇಂಡಿಯಾ ವನ್ ಕಾಲ್ ಸೆಂಟರ್ ನಿಂದ ಕಲ್ಲೇರಿಯ ಎ ಟಿ ಎಂ ಕೇಂದ್ರದಲ್ಲಿ ಯಾವುದೋ ಅನುಚಿತ ಕೃತ್ಯ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳವು ಯತ್ನ ಪ್ರಕರಣ ನಡೆದಿರುವುದು ಕಂಡು ಬಂದಿತ್ತು. ಈ ಬಗ್ಗೆ ಪ್ರಶಾಂತ್ ಡಿ ಕೋಸ್ಟಾ ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸುರಕ್ಷತೆಯ ಹೊರತಾಗಿಯೂ ಪದೇ ಪದೇ ಕಳವು ಯತ್ನ
ಖಾಸಗಿ ಎ ಟಿ ಎಂ ಕೇಂದ್ರವು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಕೇಂದ್ರದ ಚಲನವಲನಗಳ ಬಗ್ಗೆ ನಿಗಾವಿರಿಸುವ ವ್ಯವಸ್ಥೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಎ ಟಿ ಎಂ ಕೇಂದ್ರದ ಒಳ ಹೊಕ್ಕು ಮಿಷಿನ್ ತೆರೆಯಲು ಯತ್ನಿಸಿದರೂ, ಹಣತುಂಬಿದ ವಿಭಾಗದ ಬಾಗಿಲು ತೆರೆಯಬೇಕಾದರೆ ಒಟಿಪಿ ಆಧಾರಿತ ವ್ಯವಸ್ಥೆ ಅಳವಡಿಸಿದ ಪರಿಣಾಮ ಕಳ್ಳರಿಗೆ ಹಣ ಕದಿಯಲು ಅಸಾಧ್ಯವಾಗುತ್ತಿದೆ. ಕೆಲ ಸಮಯದ ಹಿಂದೆ ತೆಕ್ಕಾರು ಎಂಬಲ್ಲಿ ಇದೇ ರೀತಿ ಎಟಿಎಂ ಕೇಂದ್ರದಲ್ಲಿ ಕಳವು ಯತ್ನ ನಡೆದಿದ್ದು, ಇದೀಗ ಕಲ್ಲೇರಿಯಲ್ಲಿ ಮತ್ತೇ ಅದೇ ತೆರನಾದ ಕಳವು ಯತ್ನ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪರಿಸರದ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳ ಮೇಲೆ ನಿಗಾವಿರಿಸಿ ಕಳವಿಗೆ ಯತ್ನಿಸಿದ ವ್ಯಕ್ತಿಗಳನ್ನು ಗುರುತಿಸಲು ಶ್ರಮಿಸುತ್ತಿದ್ದಾರೆ.