ಗುಣಮಟ್ಟ ಭರವಸೆಯ ಕಾಯ್ದುಕೊಳ್ಳುವಿಕೆ ದಿನನಿತ್ಯದ ವ್ಯವಹಾರ-ಡಾ.ಪ್ರಸಾದ್ ರಾವ್
ಪುತ್ತೂರು: ಒಂದು ಸಂಸ್ಥೆಯು ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ಹಿಂದಿನ ದಿನಕ್ಕಿಂತ ಮುಂದಿನ ದಿನದಲ್ಲಿ ಹೊಸತನವನ್ನು ಬೆಳೆಸಿಕೊಂಡು ಮುಂದುವರಿಯಲು ಪ್ರಯತ್ನಿಸುವುದು ದಿನನಿತ್ಯದ ವ್ಯವಹಾರವಾಗಬೇಕೆಂದು ಬಾರ್ಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸಾದ್ ರಾವ್ ಹೇಳಿದರು.
ಅವರು ಇತ್ತೀಚೆಗೆ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಅಡಿಯಲ್ಲಿ ನಡೆದ ಶಿಕ್ಷಕರ ಪ್ರೇರೇಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲಾ ಸಂಸ್ಥೆಗಳಿಗೆ ಅದರದೇ ಆದ ವಿಶಿಷ್ಟತೆ ಇರುತ್ತದೆ. ಆ ಸಂಸ್ಥೆಗಳು ತಮ್ಮ ವಿಶಿಷ್ಟತೆಯನ್ನು ಗುರುತಿಸಿಕೊಂಡು ಆ ನೆಲೆಯಲ್ಲಿ ಗುಣಮಟ್ಟದ ವಿಸ್ತರಣೆಯನ್ನು ಮಾಡುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋಪಾಲಕೃಷ್ಣ ಕೆ.ರವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಲವಾರು ಪ್ರಗತಿಪರ ಸಾಧನೆಗಳನ್ನು ಮಾಡುತ್ತಾ ಇದೆ. ಶೀಘ್ರದಲ್ಲಿ ಕಾಲೇಜು ನಾಯ್ಕ್ ಪ್ರಕ್ರಿಯೆಗೆ ಒಳಪಡಲಿದ್ದು ಕಾಲೇಜಿನ ಎಲ್ಲಾ ಸಹೋದ್ಯೋಗಿ ಮಿತ್ರರು ಸಮೂಹ ಚಿಂತನೆಯಿಂದ ಮತ್ತು ಒಂದು ಪಂಗಡವಾಗಿ ದುಡಿಯುವ ಅಗತ್ಯತೆಯ ಕುರಿತು ತಿಳಿಸಿದರು.

ಕಾಲೇಜಿನ ಐಕ್ಯೂಏಸಿ ಘಟಕದ ಸಂಚಾಲಕರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಕಾರ್ಯಕ್ರಮ ಸಂಯೋಜಿಸಿದರು. ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ. ಸುಚಿತ್ರ ಎಸ್ ಆರ್ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೇದಶ್ರೀ ನಿಡ್ಯರವರು ವಂದಿಸಿದರು.
ಇ-ಮ್ಯಾಗಜಿನ್ ಬಿಡುಗಡೆ..
ಈ ಸಂದರ್ಭದಲ್ಲಿ ಕಾಲೇಜಿನ ಇ-ಮ್ಯಾಗಜಿನ್ “ಶಾಶ್ವತಿ”ಯನ್ನು ಹಾಗೂ ಅದರ ಮುದ್ರಿತ ಪ್ರತಿಯನ್ನು ಬಿಡುಗಡೆ ಮಾಡಲಾಯಿತು.