ಪುಣಚ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ ಸಂಪನ್ನ : ಅವಭೃತ ಸ್ನಾನ, ಧ್ವಜಾವರೋಹಣ, ದೈವಗಳ ನೇಮೋತ್ಸವ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿವಿಧ ವೈಧಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 5 ದಿನಗಳ ಕಾಲ ನಡೆದ  ವರ್ಷಾವಧಿ ಜಾತ್ರೋತ್ಸವು ಎ.11ರಂದು ಅವಭೃತ ಸ್ನಾನ, ಧ್ವಜಾವರೋಹಣ ಹಾಗೂ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.

ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವ ಎ.7ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ಜಾತ್ರೋತ್ಸವದಲ್ಲಿ ಪ್ರತಿದಿನ ದೇವರ ಉತ್ಸವ ಬಲಿ ನಡೆಯಿತು.

ಜಾತ್ರೋತ್ಸವದ ಕಡೇದಿನ ಎ.11ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೀರ್ಥಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆದು ರಾತ್ರಿ ಪಡುಪೇಟೆ ಸವಾರಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಿತು. ಬಳಿಕ ನೆತ್ತರ್ ಕಣ, ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿ‌ ದೇವಿನಗರ ಇವರಿಂದ “ಸುದರ್ಶನೋಪಾಖ್ಯಾನ” ಮತ್ತು ಊರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ “ರಾವಣವಧೆ‌” ನಡೆಯಿತು. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಮಹಾಭಕ್ತರು ಸುದೀಪ್ ಪ್ರಧಾನ್ ದಂಪತಿ ಬೆಂಗಳೂರು ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಕೋಶಾಧಿಕಾರಿ ಶಂಕರನಾರಾಯಣ ಭಟ್, ಸದಸ್ಯರಾದ ಹರ್ಷ ಶಿಬರೂರಾಯ ಏರಣಿಕಟ್ಟೆ, ಜಯಶ್ಯಾಂ ನೀರ್ಕಜೆ, ಉದಯ ಕುಮಾರ್ ದಂಬೆ, ರವಿಶಂಕರ ಶಾಸ್ತ್ರೀ ಮಣಿಲ, ವಿಶ್ವನಾಥ ರೈ ಪರಿಯಾಲು, ಸುಬ್ಬ ನಾಯ್ಕ ಮೊಟ್ಟೆತ್ತಡ್ಕ, ಜಗದೀಶ್ ಮಾರಮಜಲು, ರಾಮಕೃಷ್ಣ ಮೂಡಂಬೈಲು, ಶ್ರೀಕೃಷ್ಣ ಭಟ್, ಜಯಂತ ಓ, ಹಾಗೂ ದೇವಿ ಭಜನಾ ಮಂಡಳಿ, ಗ್ರಾಮಸ್ಥರು, ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ ಜಾತ್ರೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.

LEAVE A REPLY

Please enter your comment!
Please enter your name here