ಕಡಬ: 20ನೇ ವರ್ಷದ ಕಡಬ ಜಾತ್ರೆ ಯು ಎ.14ರಂದು ಪ್ರಾರಂಭಗೊಂಡು ಎ.22ರವರೆಗೆ ನಡೆಯಲಿದೆ.
ಎ.14ರಂದು ಕಡಬ ಮಾಡದಲ್ಲಿ ಶ್ರೀ ಕಡಂಬಳಿತ್ತಾಯ ದೈವ ಭಂಡಾರ ಹಾಗೂ ಕಡಬ ಗುತ್ತು ಮನೆಯಿಂದ ಬರುವ ಶ್ರೀ ಉದ್ರಾಂಡಿ ದೈವದ ಭಂಡಾರದೊಂದಿಗೆ ಜೊತೆ ಸೇರಿ ಮಾಡದಲ್ಲಿ ಭಂಡಾರ ಏರುವುದು.ರಾತ್ರಿ ಕೊಡಿ ಏರುವುದು ಬಳಿಕ ಮಾಡದಿಂದ ಮುಡಿಯಾಗುವ ಮಜಲಿಗೆ ಪಯ್ಯೊಲಿ ಹೋಗಿ ಬರುವುದು. ಏ.15ರಿಂದ ಏ.17ರವರೆಗೆ ಪ್ರತಿದಿನ ಬೆಳಿಗ್ಗೆ ಮುಡಿಯಾಗುವ ಮಜಲಿಗೆ ಪಯ್ಯೋಳಿ ಹೋಗಿ ಬರಲಾಗುತ್ತದೆ. ಏ.18ರಂದು ಬೆಳಿಗ್ಗೆ ಪಯ್ಯೋಳಿ ಹೋಗಿ ಬಂದು ರಾತ್ರಿ ಕಡಬ ಗುತ್ತು ಮನೆಯಿಂದ ಶ್ರೀ ಪುರುಷ ದೈವ, ಹಾಗೂ ಶ್ರೀ ಪೊಟ್ಟ ದೈವಗಳ ಭಂಡಾರ ಹಾಗೂ ಪಾಲೋಳಿಯಿಂದ ಬರುವ ಮಹಿಷಂತ್ತಾಯ, ಇಷ್ಟದೇವತೆ ಭಂಡಾರದೊಂದಿಗೆ ಜೊತೆ ಸೇರಿ ಮಾಡದಲ್ಲಿ ಭಂಡಾರ ಏರುವುದು. ರಾತ್ರಿ ಕಲ್ಲಮಾಡದಲ್ಲಿ ಶ್ರೀ ಪುರುಷ ದೈವ, ಮಹಿಂತ್ತಾಯ, ಇಷ್ಟದೇವತೆ ಮತ್ತು ಸ್ಥಾನದ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುವುದು. ಏ.19ರಂದು ಸಂಜೆ ಮಾಡದಿಂದ ಶ್ರೀ ಕಡಂಬಳಿತ್ತಾಯ ದೈವ ಮತ್ತು ಇತರ ದೈವಗಳ ಭಂಡಾರದೊಂದಿಗೆ ಪಯ್ಯೊಳಿ ಮುಡಿಯಾಗುವ ಮಜಲಿಗೆ ಹೋಗಿ ಅಲ್ಲಿಂದ ಕಡಬ ಪೇಟೆಯಲ್ಲಿರುವ ಓಲೆ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ಮಾಡಕ್ಕೆ ಬರುವುದು. ಏ.20ರಂದು ಮುಡಿಯಾಗುವ ಮಜಲಿನಲ್ಲಿ ಶ್ರೀ ಕಡಂಬಳಿತ್ತಾಯ ದೈವ ಮುಡಿಯಾಗುವುದು. ಮಧ್ಯಾಹ್ನ ಮಾಡದಲ್ಲಿ ಶ್ರೀ ಕಡಂಬಳಿತ್ತಾಯ ದೈವದ ನೇಮೋತ್ಸವ ಹಾಗೂ ಪೂರ್ವ ಪದ್ದತಿಯಂತೆ ಸರಕಾರಿ ಮೇಲಾಧಿಕಾರಿಗಳು, ಕಡಬ ಪೇಟೆಯ ವ್ಯಾಪಾರಸ್ಥರನ್ನು ಗೌರವಪೂರ್ವಕವಾಗಿ ಮಾಡಕ್ಕೆ ಕರೆದುಕೊಂಡು ಬಂದು ದೈವದ ಸಮ್ಮುಖದಲ್ಲಿ ಪ್ರಸಾದ ನೀಡುವುದು.
ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಂತರ ಶ್ರೀ ಉದ್ರಾಂಡಿ ದೈವ, ಶ್ರೀ ಗ್ರಾಮ ಪಂಜುರ್ಲಿ, ಶ್ರೀ ಪೊಟ್ಟದೈವ ಮತ್ತು ಶ್ರೀ ಪುರುಷ ದೈವಗಳ ನೇಮ, ಸಂಜೆ ಶ್ರೀ ಪುರುಷ ದೈವದ ಪೇಟೆ ಸವಾರಿ ರಾತ್ರಿ ಅನ್ನಸಂತರ್ಪಣೆ ನಡೆದು ರಾತ್ರಿ 12ಕ್ಕೆ ಕೊಡಿ ಇಳಿಸಿ ಯಥಾಪ್ರಕಾರ ದೈವದ ಭಂಡಾರ ಭಂಡಾರದ ಮನೆಗಳಿಗೆ ತೆರಳುವುದು.
ಏ.21ರಂದು ಪೂರ್ವಪದ್ದತಿಯಂತೆ ತೆಂಗಿನಕಾಯಿ ಕುಟ್ಟುವ ಸಂಪ್ರದಾಯ ನಡೆಯಲಿದೆ. ಏ.22ರಂದು ಬೆಳಿಗ್ಗೆ ಕಡಬ ಗುತ್ತುಮನೆಯಿಂದ ಶಿರಾಡಿ ದೈವದ ಭಂಡಾರವು ಹಾಗೂ ಪಾಲೋಳಿ ಕೊಪ್ಪದಿಂದ ಶ್ರೀ ಕಲ್ಕುಡ ದೈವ ಮತ್ತು ಶ್ರೀ ಕಲ್ಲುರ್ಟಿ ದೈವದ ಭಂಡಾರ ಕಡಬ ಶ್ರೀ ಅಮ್ಮನವರ ದೇವಳದ ಬಲ ಬದಿಯಲ್ಲಿರುವ ದೈವಗಳ ಕಟ್ಟೆಯಲ್ಲಿ ಭಂಡಾರ ಏರುವುದು. ಬಳಿಕ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಅಮ್ಮನವರ ಪೂಜೆ ಮತ್ತು ದೈವಗಳ ನೇಮೋತ್ಸವ ಹಾಗೂ ಮಾರಿಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕಡಂಬಳಿತ್ತಾಯ ದೈವ, ಶ್ರೀ ಪುರುಷ ದೈವ ಮತ್ತು ಇತರ ದೈವಗಳ ನೇಮೋತ್ಸವ, ಕಡಬ ಜಾತ್ರೆಯ ಪ್ರಧಾನ ಆಡಳಿತದಾರ ಕೆ. ರಾಜೇಂದ್ರ ಹೆಗ್ಡೆ ಕಡಬ ಗುತ್ತು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ನಾಯಕ್ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.