ಉಪ್ಪಿನಂಗಡಿ: ಅಶ್ಪೃಶ್ಯತೆ ಎಂಬ ಮಹಾ ಪಾಪ ಕೃತ್ಯವನ್ನು ವಿರೋಧಿಸಿ ಭರತ ಭೂಮಿಯನ್ನು ಸಮಾನತೆಯ ಸಾಮರಸ್ಯದ ನೆಲೆಬೀಡಾಗಲು ಯತ್ನಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನಾದರ್ಶವನ್ನು ಪ್ರತಿಯೋರ್ವ ಭಾರತೀಯ ಪಾಲಿಸಬೇಕಾಗಿದೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಪ್ರತಿಪಾದಿಸಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಸಾಮರಸ್ಯ ದಿನಾಚರಣೆ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾಧವ ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಮಾತನಾಡಿ, ಪ್ರತಿ ಕಣದಲ್ಲೂ ದೇವರನ್ನು ಕಾಣುವ ನಾವು ಆತ್ಮಧಾರಿಗಳಾದ ಎಲ್ಲರನ್ನೂ ಸಮಾನವಾಗಿ ಕಂಡು ಸಾಮರಸ್ಯದಿಂದ ಬಾಳಬೇಕೆಂದರು.
ಪೋಷಕ ಸಂಘದ ಸದಸ್ಯೆ ಶ್ರೀಮತಿ ಅಶ್ವಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಶಿಬಿರಾರ್ಥಿಗಳಾದ ಶ್ರೀದೇವಿ ಹಾಗೂ ಆಕಾಶ್ ನಾಯಕ್ ಶಿಬಿರದ ಅನಿಸಿಕೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಶು ಮಂದಿರದ ಮಾತಾಜಿಗಳಾದ ಚೈತ್ರ , ಕಾಂತಿಮಣಿ, ಚಂದ್ರಾವತಿಯವರು ಉಪಸ್ಥಿತರಿದ್ದರು.
ತನ್ಮಯಿ ಪ್ರಾರ್ಥಿಸಿದರು. ಮೋಕ್ಷ ಸ್ವಾಗತಿಸಿದರು. ಶ್ರವಣ್ ವಂದಿಸಿದರು. ಬಾಲಗೋಕುಲದ ಸಾನಿಕ ಕಾರ್ಯಕ್ರಮ ನಿರೂಪಿಸಿದರು.