ಎ.ಸಿ. ಕಚೇರಿ ಎದುರು ಸಿಪಿಐಎಂ ಪ್ರತಿಭಟನೆ
ಪುತ್ತೂರು: ಇಂದು ಕಾಲಿನಡಿಗೂ,ತಲೆಗೂ ಬೆಂಕಿ ಹಾಕಿ ಭಾರತದ ಪ್ರಜೆಗಳನ್ನು ತುಳುವರ ಕೆಂಡದಡ್ಯೆ ಬೇಯಿಸುವ ರೀತಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸ್ಪರ್ಧಾತ್ಮಕ ಬೆಲೆ ಏರಿಕೆಯ ದೋರಣೆಗಳಿಂದ ಬಡ ಮತ್ತು ಸಾಮಾನ್ಯ ಜನರ ಬದುಕನ್ನು ಕಂಗಾಲಾಗಿಸಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ.ಎಂ.ಭಟ್ ಹೇಳಿದರು.
ಅವರು ಪುತ್ತೂರು ಎ.ಸಿ. ಕಚೇರಿ ಎದುರು ಅಗತ್ಯ ವಸ್ತುಗಳಿಗೆ ಮಾಡಿದ ಬೆಲೆ ಏರಿಕೆ ವಿರುದ್ದ ಸಿಪಿಐಎಂ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಎ.16ರಂದು ಮಾತನಾಡಿದರು. ಬಿಜೆಪಿ ಪಕ್ಷವು ತನ್ನ ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ಸಮರ್ಥಿಸುತ್ತ, ರಾಜ್ಯದ ಕಾಂಗ್ರೇಸ್ ಸರಕಾರದ ಬೆಲೆ ಏರಿಕೆಯನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದರೆ, ಕಾಂಗ್ರೇಸ್ ಪಕ್ಷ ತನ್ನ ರಾಜ್ಯ ಸರಕಾರದ ಬೆಲೆ ಏರಿಕೆಯನ್ನು ಸಮರ್ಥಿಸುತ್ತ ಕೇಂದ್ರದ ಬಿಜೆಪಿ ಸರಕಾರದ ಬೆಲೆ ಏರಿಕೆಯ ವಿರುದ್ದ ಹೋರಾಟ ನಡೆಸುತ್ತಿದೆ. ಆದರೆ ಎರಡೂ ಸರಕಾರಗಳು ಬೆಲೆ ಏರಿಸಿ ದೇಶದ ಜನರ ಬದುಕನ್ನು ಹೊಸಕಿ ಹಾಕುತ್ತಿರುವುದು ಖಂಡನೀಯ. ಜನರ ಬದುಕನ್ನೇ ಹೊಸಕಿ ಹಾಕುವ, ಜನರು ಬದುಕಲು ಬಿಡದಂತೆ ವರ್ತಿಸುವ ಮಾತ್ರವಲ್ಲ ಇದಕ್ಕೆಲ್ಲ ಧರ್ಮ ರಕ್ಷಣೆಯೇ ದಿವ್ಯ ಔಷಧಿ ಎಂದು ಕೃತಕ ಶತ್ರುಗಳ ಸೃಷ್ಟಿಸಿ ಜನರ ದಾರಿ ತಪ್ಪಿಸುವ ರಾಕ್ಷಸೀಯ ಪ್ರವೃತ್ತಿಯ ಜನಪ್ರತಿನಿದಿಗಳನ್ನು ಗೆಲ್ಲಿಸಿ ಕಳುಹಿಸಿದ್ದೇ ಭಾರತೀಯರಾದ ನಮ್ಮ ತಪ್ಪು ಎಂದು ಹೇಳಿದರು.
ಕೇಂದ್ರ ಸರಕಾರ ಟೋಲ್, ಗ್ಯಾಸ್, ಪೆಟ್ರೋಲ್, ಡೀಸಿಲ್, ಔಷಧ, ಕಾರು, ಶಿಕ್ಷಣ, ಹೋಟೇಲ್ ದರ, ವೀಸಾ ಶುಲ್ಕ, ಬೆಳ್ಳಿ, ರಸಗೊಬ್ಬರ, ಕಾಫಿ, ಚಹಾ, ಇತ್ಯಾದಿಗಳ ದರವನ್ನು ಏರಿಸುವುದರ ಮೂಲಕ ಮತ್ತು ತೆರಿಗೆ ಹೆಚ್ಚಿಸುವುದರ ಮೂಲಕ ವಿಪರೀತ ಬೆಲೆ ಏರಿಸಿದರೆ, ಇನ್ನೊಂದೆಡೆ ರಾಜ್ಯ ಸರಕಾರವು ಡೀಸೆಲ್, ಹಾಲು, ವಿದ್ಯುತ್, ಸಾರಿಗೆ, ಸಿ.ಎನ್.ಜಿ. ಕಸ ವಿಲೆವಾರಿ ಶುಲ್ಕ, ಮುದ್ರಾಂಕ ಶುಲ್ಕ, ತರಕಾರಿ ಇತ್ಯಾದಿಗಳನ್ನು ದುಬಾರಿಗೊಳಿಸಿದೆ. ಎರಡೂ ಸರಕಾರಗಳ ಬೆಲೆ ಏರಿಕೆ ನೀತಿ ನಮಗೆ ಹೊರೆಯಾಗಿದೆ ಎಂದು ಅವರು ಆರೋಪಿಸಿದರು.

ಬೆಲೆ ಏರಿಕೆಯ ದೆಸೆಯಿಂದ ಶಾಸಕ, ಸಂಸದರ ವೇತನ ಭತ್ಯೆಗಳು ಡಬಲ್ ಏರಿಸುವ ಮೂಲಕ ಅದನ್ನು ಸಮರ್ಥಿಸುವ ಎರಡೂ ಸರಕಾರಕ್ಕೆ ಜನ ಸಾಮಾನ್ಯರ ಕಷ್ಟಗಳೂ ಮಾತ್ರ ಅರ್ಥವಾಗುತ್ತಿಲ್ಲ ಯಾಕೆ ಎಂಬುದೇ ನಮಗೆ ನೋವಿನ ಸಂಗತಿಯಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಅವರು ಸ್ವಾಗತಿಸಿ, ಮಾತಾನಾಡಿ ಉದ್ಯೋಗ ಸೃಷಿಗೆ ಕ್ರಮ ಕೈಗೊಳ್ಳದ ಸರಕಾರಗಳು, ಜನರ ಬದುಕಿನ ಭದ್ರತೆಗೆ ಗಮನ ನೀಡುತ್ತಿಲ್ಲ ಎಂದರು. ಕಾರ್ಮಿಕರ ಹಕ್ಕು ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರಗಳು ಕಾರ್ಮಿಕರ ವೇತನ ಕಡಿತಗೊಳಿಸುತ್ತಿದೆಯಲ್ಲದೆ ಜೊತೆಗೆ ಈ ಬೆಲೆ ಏರಿಕೆ ಎಂದರು.
ಇಂದು ಬೆಲೆ ಏರಿಕಯೇ ದೇಶದ ಅತಿ ದೊಡ್ಡ ಸಮಸ್ಯೆಯಂತಾಗಿದೆ, ಅದರ ವಿರುದ್ದ ಹೋರಾಟ ನಡೆಸುವ ನೈತಿಕತೆ ಸಿಪಿಐಎಂ ಪಕ್ಷಕ್ಕೆ ಮಾತ್ರ ಎಂದು ಪುತ್ತೂರು ಸಿಪಿಐಎಂ ನಾಯಕ ಪಿ.ಕೆ.ಸತೀಶನ್ ಪ್ರಾಸ್ತಾವಿಕವಾಗಿ ಹೇಳೀದರು.
ಈ ಬೆಲೆ ಏರಿಕೆಯನ್ನು ತಡೆಯಲು ಮತ್ತು ಜನರಿಗೆ ಪೂರಕವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರ ಆದಾಯ ಹೆಚ್ಚುವಂತೆ ನೀತಿ ಬದಲಿಸಬೇಕಾದ ಸರಕಾರ ದುಡಿಯುವ ಜನರ ವೇತನ ಏರಿಕೆಗೂ ಸೂಕ್ತ ಗಮನ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಹಾಯಕ ಕಮೀಷನರ್ ಮೂಲಕ ಮನವಿ ನೀಡಲಾಯಿತು.
ಡಿ.ವೈ.ಎಫ್.ಐ. ಜಿಲ್ಲಾ ಸಮಿತಿ ಸದಸ್ಯರಾದ ಅಭಿಷೇಕ್ ವಂದಿಸಿದರು. ಹೋರಾಟದ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಜನಾರ್ಧನ ಗೌಡ, ಕೃಷ್ಣ,. ಗುಡ್ಡಪ್ಪ ಗೌಡ ಸರ್ವೆ, ನೆಬಿಸಾ, ಜಯಶ್ರೀ, ಪುಷ್ಪಾ, ಅಶ್ವಿತ, ಬಿಸಿಯೂಟ ಸಂಘದ ಮುಖಂಡರಾದ ಲೀಲಾವತಿ, ಕಾರ್ಮಿಕ ಮುಖಂಡರುಗಳಾದ ಡೊಂಬಯ ಗೌಡ, ಜಯಂತ, ಚೋಮ ಮೊದಲಾದವರು ಇದ್ದರು.