ಪಲ್ಲಪೂಜೆ ಸಂದರ್ಭ ನಡೆಯಿತು ಅಚ್ಚರಿ- 40ಸಾವಿರಕ್ಕೂ ಮಿಕ್ಕಿ ಜನರಿಗೆ ಅನ್ನಪ್ರಸಾದ
ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ದಿನ ಮಧ್ಯಾಹ್ನ ಶ್ರೀ ದೇವರ ದರ್ಶನ ಬಲಿ ಉತ್ಸವದ ಬಳಿಕ ಸುಮಾರು 40 ಸಾವಿರ ಮಂದಿಗೆ ಮಹಾ ಅನ್ನಸಂತರ್ಪಣೆ ನಡೆದಿದೆ.ಮಹಾಅನ್ನಸಂತರ್ಪಣೆಗೆ ಅನ್ನಪ್ರಸಾದ ಅಕ್ಷಯವಾಗಲೆಂದು ಕದಿಕೆ ಕಟ್ಟಿ ವಿಶೇಷ ಪಲ್ಲಪೂಜೆ ನೆರವೇರಿಸಲಾಯಿತು.ಈ ಸಂದರ್ಭ ಎರಡು ಕಾರಣಿಕ ಘಟನೆಗಳು ನಡೆಯುವ ಮೂಲಕ ಮಹಾಲಿಂಗೇಶ್ವರ ದೇವರ ಸಂಪೂರ್ಣ ಆಶೀರ್ವಾದ ಲಭಿಸಿದೆ ಎಂದು ನೆರೆದವರು ಆಡಿಕೊಂಡಿದ್ದಾರೆ.ಮಧ್ಯಾಹ್ನದ ವೇಳೆಗೆ ದರ್ಶನ ಬಲಿ ಉತ್ಸವ ಮುಗಿದ ಬಳಿಕ ಕೆರೆಯ ಬಳಿಯಿರುವ ಅನ್ನಪೂರ್ಣ ಭೋಜನ ಮಂಟಪದಲ್ಲಿ ಅನ್ನಪ್ರಸಾದ ವಿತರಣೆಗೆ ಮಹಾಪಲ್ಲಪೂಜೆ ನಡೆಯಿತು.ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು.
ಪಲ್ಲಪೂಜೆ ಸಂದರ್ಭ ನಡೆದ ಕಾರಣಿಕ ಘಟನೆ:
ಸುಮಾರು 20 ಕ್ವಿಂಟಾಲ್ ಅಕ್ಕಿಯ ಅನ್ನಶೇಖರಣೆಯ ಕದಿಕೆಯಲ್ಲಿ ಅನ್ನಪ್ರಸಾದದಲ್ಲೇ ಪರಶಿವನ ಮುಖಚಿತ್ರವನ್ನು ವರ್ಣಿಸಲಾಗಿತ್ತು.ಅದಕ್ಕೆ ಅಲಂಕಾರ ಮಾಡಿದ ಬಳಿಕ ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ಮಹಾಪಲ್ಲಪೂಜೆ ನೆರವೇರಿಸಿದರು.ಈ ಸಂದರ್ಭ ಪರಶಿವನ ಚಿತ್ರದ ಬಲಭಾಗದಿಂದ ಹೂವಿನ ಮಾಲೆಯೊಂದು ಜಾರಿದ್ದಲ್ಲದೆ ಇಡೀ ಕದಿಕೆಯೇ ಒಮ್ಮೆ ಅಲ್ಲಾಡಿ ಪರಶಿವನ ಚಿತ್ರ ಅನ್ನದ ರಾಶಿಯೊಳಗೆ ಸೇರುವ ಸ್ಥಿತಿ ನಿರ್ಮಾಣ ಆಯಿತು.ಈ ವೇಳೆ ಅರ್ಚಕರು,ಪರಮಾತ್ಮನು ಅನ್ನಪ್ರಸಾದ ಸ್ವೀಕರಿಸಿದ ರೀತಿ ಕಂಡು ಬರುತ್ತಿದೆ.ಶಿವನ ಪೂರ್ಣಾನುಗ್ರಹ ಲಭ್ಯವಾಗಿದೆ ಎಂದರು.ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕರುಣಾಕರ ರೈ ಸಹಿತ ಹಲವಾರು ಮಂದಿ ಈ ಸಂದರ್ಭಕ್ಕೆ ಸಾಕ್ಷಿಯೆನ್ನುವಂತೆ ಉಪಸ್ಥಿತರಿದ್ದರು.
40 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಅನ್ನಪ್ರಸಾದ ವಿತರಣೆ:
ಜಾತ್ರೋತ್ಸವದ ದರ್ಶನ ಬಲಿ ಉತ್ಸವದ ದಿನ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದಿದೆ.ಈ ಬಾರಿ ಕೆರೆಯ ಬಳಿ ವಿಶಾಲ ಜಾಗದಲ್ಲಿ ಅನ್ನಸಂತರ್ಪಣೆ ನಡೆದಿರುವುದರಿಂದ ಯಾವುದೇ ತೊಂದರೆ ಆಗದಂತೆ ಸಲೀಸಾಗಿ ಎಲ್ಲರೂ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.ವಿಶೇಷ ಪಲ್ಲಪೂಜೆಯೂ ನಡೆದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸಿಡಿಮದ್ದು ಪ್ರದರ್ಶನವೇ ವಿಶೇಷ:
ಪುತ್ತೂರು ಜಾತ್ರೆಯ ಬ್ರಹ್ಮರಥೋತ್ಸವದ ದಿನ ನಡೆಯುವ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧ.ಈ ಬಾರಿ ಪುತ್ತೂರು ಜಾತ್ರೆಯಲ್ಲಿ ಸಿಡಿಮದ್ದು ಪ್ರದರ್ಶನ ಭಕ್ತಾದಿಗಳಿಂದ ವಿಶೇಷ ಸೇವೆಯ ರೂಪದಲ್ಲಿ ಮೂಡಿ ಬಂದಿದೆ.ದೇವಳದ ಹುಂಡಿಯಿಂದ ಇದಕ್ಕಾಗಿ ಯಾವುದೇ ಖರ್ಚು ಮಾಡಲಾಗಿಲ್ಲ.ಮಧ್ಯಾಹ್ನ ಅನ್ನಪ್ರಸಾದ ಸೇವೆಯಲ್ಲೂ ನಿರೀಕ್ಷೆಗೂ ಮೀರಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.ಈ ಎಲ್ಲಾ ವ್ಯವಸ್ಥೆಗಳು ಶಾಸಕರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದ್ದಾರೆ.
ಮುತ್ತಪ್ಪ ರೈ ದೇರ್ಲ ಕುಟುಂಬದಿಂದ ಅನ್ನದಾಸೋಹ:
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬ್ರಹ್ಮರಥವನ್ನು ಸಮರ್ಪಿಸಿದ್ದ ದಿ.ಮುತ್ತಪ್ಪ ರೈ ದೇರ್ಲ ಅವರ ಸಹೋದರಿ, ಸಹೋದರರು, ಮಕ್ಕಳು ಹಾಗು ದೇರ್ಲ ಕುಟುಂಬಸ್ಥರಿಂದ ವರ್ಷಂಪ್ರತಿಯಂತೆ ಅನ್ನದಾಸೋಹ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ಪಲ್ಲಪೂಜೆ ನೆರವೇರಿಸಿದರು.ಮುತ್ತಪ್ಪ ರೈ ದೇರ್ಲ ಅವರ ಸಹೋದರ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಎನ್.ಕರುಣಾಕರ ರೈ, ಅಶ್ವಿನ್ ರೈ ದೇರ್ಲ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,ಸದಸ್ಯರು ಹಾಗು ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.
ಈಶ್ವರ ಭಟ್ರು ಜಾತ್ರೆ ಆರಂಭವಾದಂದಿನಿಂದ ದೇವಸ್ಥಾನ ಬಿಟ್ಟು ಮನೆಗೆ ಹೋಗದೆ ಇಲ್ಲೇ ನಿಂತು ಎಲ್ಲಾ ವ್ಯವಸ್ಥೆ ಮಾಡುತ್ತಿರುವುದರಿಂದ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.ಹಲವು ವಿಶೇಷತೆಗಳಿಗೆ ಈ ಬಾರಿಯ ಜಾತ್ರೆ ಸಾಕ್ಷಿಯಾಗಲಿದೆ.ಈ ಹಿಂದೆ ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನದ ವತಿಯಿಂದ ಸುಡುಮದ್ದು ಪ್ರದರ್ಶನ ನಡೆಯುತ್ತಿತ್ತು. ಈ ಬಾರಿ ಭಕ್ತಾದಿಗಳೇ ಸೇರಿ ಸುಡುಮದ್ದು ಪ್ರದರ್ಶನ ನಡೆಸುತ್ತಿದ್ದಾರೆ.ಬ್ರಹ್ಮರಥ ಸೇವೆಯಲ್ಲೂ ಸುಮಾರು 200 ಸೇವಾ ರಶೀದಿ ಆಗಿದೆ.ಹೊರೆಕಾಣಿಕೆಯಲ್ಲೂ ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿದೆ.ಮುಂದಿನ ವರ್ಷ ದೇವಸ್ಥಾನದ ಜೀರ್ಣೋದ್ದಾರ ನಡೆಯಲಿದೆ.ಎಲ್ಲರ ಸಹಕಾರ ಬೇಕು
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

ಪ್ರತಿ ದಿನ ಬಗೆ ಬಗೆಯ ಪಾಯಸಗಳು
ಜಾತ್ರೆ ಆರಂಭದ ದಿನದಿಂದ ನಿತ್ಯ ಅನ್ನಪ್ರಸಾದ ವಿತರಣೆಯ ಸಂದರ್ಭ ಬಗೆ ಬಗೆಯ ಪಾಯಸಗಳನ್ನು ಮಾಡಲಾಗುತ್ತಿದೆ.ಅನ್ನಪ್ರಸಾದದಲ್ಲಿ ಉಪ್ಪಿನಕಾಯಿ, ಪಲ್ಯ, ಗಸಿ, ಅನ್ನ, ಸಾರು, ಹುಳಿ ಸಾರು, ಮಜ್ಜಿಗೆ ನೀರು, ಪಾಯಸ ಇರಲಿದೆ.ಅದರಲ್ಲೂ ನಿತ್ಯ ಬಗೆ ಬಗೆಯ ಪಾಯಸಗಳನ್ನು ಮಾಡಲಾಗುತ್ತಿದೆ.ಕಡ್ಲೆಬೇಳೆ, ಹೆಸರುಬೇಳೆ, ಹಲಸಿನಹಣ್ಣು, ಗೋಧಿಕಡಿ, ಕ್ಯಾರೆಟ್, ಹಾಲು, ಸಾಗು ಸೇವಿಗೆ ಪಾಯಸಗಳನ್ನು ಏ.17ರ ತನಕ ಮಾಡಲಾಗಿದೆ.
ಮೈ ಜುಮ್ ಆಯಿತು
ಜಾತ್ರೆಯ ಸಂದರ್ಭ ಕೆರೆಯ ಬಳಿ ಅನ್ನಪ್ರಸಾದ ವಿತರಣೆ ಆರಂಭವಾದ ದಿನದಿಂದ ಒಂದಲ್ಲ ಒಂದು ಕಾರಣಿಕ ನಡೆಯುತ್ತಿದೆ.ಅನ್ನಪ್ರಸಾದಕ್ಕೆ ಪಲ್ಲಪೂಜೆ ಆದ ತಕ್ಷಣ ರಕ್ತೇಶ್ವರಿಗೆ ಪಾಯಸ ನೈವೇದ್ಯ ನೀಡಲಾಗುವುದು.ಬಳಿಕ ಗೋವುಗಳಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.ಅದಾದ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತದೆ.ಏ.17ರಂದು ದೊಡ್ಡ ಮಟ್ಟದಲ್ಲಿ ಅನ್ನಪ್ರಸಾದ ವಿತರಣೆ ಇದ್ದುದರಿಂದ ಕದಿಕೆ ಕಟ್ಟಿ ಅನ್ನ ಶೇಖರಣೆ ಮಾಡುವ ಕಾರ್ಯಕ್ಕೆ ಸಿದ್ಧತೆ ನಡೆಸಿ ರಾತ್ರಿ ಮುಹೂರ್ತ ನಡೆಸುತ್ತಿದ್ದಂತೆ ದೇವಳದಿಂದ ಶ್ರೀ ಉಳ್ಳಾಲ್ತಿ ಅಮ್ಮನವರ ಪ್ರಸಾದ ಸ್ವೀಕರಿಸುವಂತೆ ಕರೆ ಬಂತು.ಹಾಗಾಗಿ ಆರಂಭದಲ್ಲೇ ಉಳ್ಳಾಲ್ತಿ ಅಮ್ಮನವರ ಪ್ರಸಾದ ಸ್ವೀಕರಿಸಿ ಕದಿಕೆ ಕಟ್ಟಿದೆವು.ಬೆಳಿಗ್ಗೆ ಅನ್ನಶೇಖರಣೆ ಬಳಿಕ ಅನ್ನದಲ್ಲೇ ಮಹಾಲಿಂಗೇಶ್ವರ ದೇವರ ವರ್ಣಚಿತ್ರವನ್ನು ಬಿಡಿಸಲಾಯಿತು.ಅರ್ಚಕ ಶ್ರೀಧರ್ ಭಟ್ ನೆಹರುನಗರ ಅವರು ಅರಸಿನಹುಡಿ, ಕಪ್ಪು ಉಮಿಕರಿ, ಕುಂಕುಮ ಬಳಸಿ ಅನ್ನದಲ್ಲಿ ಮಹಾಲಿಂಗೇಶ್ವರನ ಚಿತ್ರ ಬಿಡಿಸಿದರು.ಶ್ರೀ ದೇವರ ಶಿರಕ್ಕೆ ಹೂವು ಮುಡಿಸಲಾಗಿತ್ತು.ಮಧ್ಯಾಹ್ನದ ಪಲ್ಲಪೂಜೆ ಸಂದರ್ಭ ಹೂವಿನ ಮಾಲೆಯೊಂದು ಜಾರಿತು.ಅದೇ ಸಂದರ್ಭ ಇಡೀ ಕದಿಕೆಯೇ ಒಮ್ಮೆ ಅಲುಗಾಡಿದೆ.ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವರ ಚಿತ್ರವು ಅನ್ನದೊಳಗೆ ಸೇರುವಂತೆ ಭಾಸವಾಗಿತ್ತು.ಇದನ್ನು ನೋಡಿ ಒಮ್ಮೆ ಮೈ ಜುಮ್ ಆಗಿದೆ
-ಹರೀಶ್ ರಾವ್ ಕೇಪುಳು ಪಾಕತಜ್ಞ