ಪುತ್ತೂರು: ಕನ್ನಡದ ಆದಿಕವಿ ಪಂಪನ ಆಡುಂಬೊಲವಾದ ಬನವಾಸಿಯಲ್ಲಿ ಪಂಪ ಭವನ ನಿರ್ಮಿಸಬೇಕು. ಅದರ ಗೋಡೆಗಳಲ್ಲಿ ತಮಿಳು ಕವಿ ತಿರುವಳ್ಳುವರ್ ಸ್ಮಾರಕ ಕಟ್ಟಡದಲ್ಲಿ ತಿರುಕ್ಕುರಳ್ ನ ಪದ್ಯಗಳನ್ನು ಬರೆಸಿದ ಹಾಗೆಯೇ ಪಂಪನ ಕಾವ್ಯಗಳ ಆಯ್ದ ಮುಖ್ಯ ಪದ್ಯಗಳನ್ನು ಬರೆಸಬೇಕು. ಪಂಪ ಭವನದ ಒಳಗೆ ಪಂಪನ ಕಾವ್ಯಗಳು, ಪಂಪನ ಬಗ್ಗೆ ಬಂದ ಅಧ್ಯಯನ ಕೃತಿಗಳು, ಧ್ವನಿಸುರುಳಿಗಳು ಎಲ್ಲವನ್ನೂ ಸಂರಕ್ಷಿಸಿ ಇಡಬೇಕು. ಬನವಾಸಿಯು ಸಾಹಿತ್ಯದ ಪ್ರವಾಸಿತಾಣವಾಗಿ ಬೆಳೆಯಬೇಕು ಎಂದು ಪ್ರತಿಷ್ಠಿತ ಪಂಪ ಪ್ರಶಸ್ತಿ ಸ್ವೀಕರಿಸಿ ಪ್ರೊ.ಬಿ.ಎ.ವಿವೇಕ ರೈ ಕರೆಯಿತ್ತರು.
ಬನವಾಸಿಯಲ್ಲಿ ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ,ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಯೂರವರ್ಮ ವೇದಿಕೆಯಲ್ಲಿ ನಡೆದ ೨೦೨೫ರ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುತ್ತೂರು ಪುಣಚ ಗ್ರಾಮದ ಅಗ್ರಾಳದವರಾದ ಪ್ರೊ.ಬಿ.ಎ. ವಿವೇಕ್ ರೈ ಅವರು ಬನವಾಸಿಯು ಕ್ರಿಸ್ತ ಪೂರ್ವ ಮೂರನೇ ಶತಮಾನದಿಂದ ಬೌದ್ಧ ಧರ್ಮದ ಕೇಂದ್ರ ಆಗಿತ್ತು. ಮುಂದೆ ಕನ್ನಡದ ಮೊದಲ ರಾಜರಾದ ಕದಂಬರ ಕಾಲದಲ್ಲಿ ಶೈವ ವೈಷ್ಣವ ಧರ್ಮಗಳ ಆಶ್ರಯತಾಣ ವಾಗಿ ಜೈನಧರ್ಮದ ಕೇಂದ್ರವೂ ಆಯಿತು. ಇಂತಹ ಬಹುಧರ್ಮಗಳ ಬಹು ಸಂಸ್ಕೃತಿಗಳ ಆದರ್ಶವನ್ನು ನಾವು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ ತಂಗಡಗಿ ಅವರು ಪ್ರೊ.ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದರು. ಬನವಾಸಿ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ದಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಜಿ.ಪಂ. ಸಿಇಓ ಈಶ್ವರ ಕುಮಾರ ಕಾಂದೂ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉ.ಕ. ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಸ್ವಾಗತಿಸಿದರು.
ವಿವೇಕ ರೈಯವರು ಮಾಡಿದ ‘ಪಂಪ ಭವನ’ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕ ಸರಕಾರ ಸಿದ್ದವಿದೆಯೆಂದು ಸಚಿವ ಶಿವರಾಜ ತಂಗಡಗಿ ಅವರು ಭರವಸೆಯಿತ್ತರು.
ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಸಾಹಿತ್ಯ ಸಂಸ್ಕೃತಿ ಪ್ರಿಯರು ಭಾಗವಹಿಸಿದ್ದರು.