ಉಪ್ಪಿನಂಗಡಿ: ಗ್ರಾಮ ಪಂಚಾಯತ್ಗೆ ಅಜಿರಾಳ ಎಂಬಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ದೇಶಕ್ಕೆ ಕಾದಿರಿಸಿದ್ದ ಜಾಗಕ್ಕೆ ಅನಧಿಕೃತವಾಗಿ ಅಳವಡಿಸಿದ್ದ ಗೇಟನ್ನು ಪೊಲೀಸ್ ಭದ್ರತೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವತಿಯಿಂದ ಎ.17ರಂದು ತೆರವುಗೊಳಿಸಲಾಗಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜಿರಾಳ ಎಂಬಲ್ಲಿನ ಸ.ನಂ.104/1ಎ1ಎಪಿ1 ರಲ್ಲಿ 0.45 ಎಕ್ರೆ ಜಾಗವು ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ದೇಶಕ್ಕೆ ಕಾದಿರಿಸಿ ಜಿಲ್ಲಾಧಿಕಾರಿಯವರು 22-4-2016ರಂದು ಆದೇಶ ಮಾಡಿದ್ದರು. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಶ್ರೀಮತಿ ಸರೋಜ ಕೋಂ ಗೋವಿಂದ ನಾಯಕ್ರವರು ದಾವೆ ಹೂಡಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ಗೆ ಜಾಗ ಕಾದಿರಿಸಿದ ಜಿಲ್ಲಾಧಿಕಾರಿಯವರ ಆದೇಶವನ್ನು ಪುನ: ಪರಿಶೀಲಿಸುವಂತೆ 4-6-2024ರಂದು ಉಚ್ಚನ್ಯಾಯಾಲಯದಿಂದ ಆದೇಶವಾಗಿತ್ತು. ಈ ಸಂದರ್ಭದಲ್ಲಿ ಶ್ರೀಮತಿ ಸರೋಜ ಅವರು ಅನಧಿಕೃತವಾಗಿ ಗೇಟು ಅಳವಡಿಸಿದ್ದರು. ಈ ಆದೇಶದ ಬಗ್ಗೆ ಗ್ರಾಮ ಪಂಚಾಯತ್ನಿಂದ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ದೇಶಕ್ಕೆ ಜಾಗ ಕಾದಿರಿಸಿದ ಬಗ್ಗೆ ಶ್ರೀಮತಿ ಸರೋಜ ಕೋಂ ಗೋವಿಂದ ನಾಯಕ್ ಅವರು ಸಲ್ಲಿಸಿದ್ದ ದಾವೆಯನ್ನು ಉಚ್ಚ ನ್ಯಾಯಾಲಯವು 30-10-2024ರಂದು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಗೇಟನ್ನು ಪೊಲೀಸ್ ಭದ್ರತೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಎ.17ರಂದು ತೆರವುಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಸಿಬ್ಬಂದಿಗಳಾದ ರಕ್ಷಿತ್ ಕುಮಾರ್, ಶ್ರೀನಿವಾಸ, ಮಹಾಲಿಂಗ, ಇಸಾಕ್, ಉಮೇಶ, ಸುಂದರ ಮತ್ತು ಆನಂದ ಉಪಸ್ಥಿತರಿದ್ದರು.