ಚಿಕ್ಕಮ್ಮ ಅನುರಾಧಾ ಮತ್ತು ರಾಕೇಶ್ ಮಲ್ಲಿ ಸಂಚು ರೂಪಿಸಿದ್ದಾರೆಂದು ಹೇಳಿಕೆ ನೀಡಿದ ರಿಕ್ಕಿ: ವಿದೇಶದಿಂದ ಬಂದ ರಾಕಿ
ರಾಕೇಶ್ ಮಲ್ಲಿ ಭಾಗಿ ಯಾಗಿರುವ ಬಗ್ಗೆ ಗೊತ್ತಿಲ್ಲ: ಡಾ. ಜಿ. ಪರಮೇಶ್ವರ್
ರಿಕ್ಕಿ ರೈ ಯೊಂದಿಗೆ ಮಾತನಾಡಿಲ್ಲ: ಡಿ.ಕೆ.ಶಿವಕುಮಾರ್
ವರದಿ: ಸಂತೋಷ್ ಕುಮಾರ್ ಶಾಂತಿನಗರ
ಪುತ್ತೂರು: ಮಾಜಿ ಭೂಗತ ದೊರೆ ಎನ್. ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಜತೆಗೆ ಬೆಂಗಳೂರು ಸಿಸಿಬಿ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ರಾಮನಗರ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.18ರಂದು ಮಧ್ಯರಾತ್ರಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಿಕ್ಕಿ ರೈ ಮೇಲೆ ಅಪರಿಚಿತ ವ್ಯಕ್ತಿ ಅವಿತು ಕುಳಿತು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ 2,000 ಕೋಟಿ ರೂ. ಮೌಲ್ಯದ ಆಸ್ತಿ ವಿವಾದ ಪ್ರಮುಖ ಕಾರಣವೇ ಎಂಬ ಪ್ರಶ್ನೆ ಬಹುಮುಖ್ಯವಾಗಿ ಎದುರಾಗಿದೆ.
ರಿಕ್ಕಿ ರೈ ಮೇಲಿನ ಶೂಟೌಟ್ ಬೆನ್ನಲ್ಲೇ ಅವರ ಹತ್ಯೆಗೆ ಯತ್ನಿಸಿದ್ದು ಯಾರು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆಯಿತಾ. ಮುತ್ತಪ್ಪ ರೈ ವಿರೋಧಿಗಳ ಪ್ರತೀಕಾರವಾ. ಮಲತಾಯಿ ಜತೆಗಿನ ಆಸ್ತಿ ವೈಷಮ್ಯ ಕಾರಣವಾ ಅಥವಾ ರಿಕ್ಕಿ ರೈ ಜತೆಗಿನ ವೈಯಕ್ತಿಕ ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಕೃತ್ಯವಾ ಎಂಬ ಸಂಶಯದ ಮೇಲೆ ಪೊಲೀಸ್ ತನಿಖೆ ನಡೆಯುತ್ತಿದೆ. ರಿಕ್ಕಿ ರೈ ರಷ್ಯಾದಿಂದ ಆಗಮಿಸಿದ್ದ ಸಂದರ್ಭದಲ್ಲೇ ಹತ್ಯೆ ಯತ್ನ ನಡೆದಿದೆ. ಈ ಕೃತ್ಯದ ಹಿಂದೆ ಮಲತಾಯಿ ಅನುರಾಧಾ ರೈ, ಮುತ್ತಪ್ಪ ರೈ ಅವರ ಆಪ್ತರಾಗಿದ್ದ ರಾಕೇಶ್ ಮಲ್ಲಿ ಮತ್ತು ರಿಯಲ್‌ಎಸ್ಟೇಟ್ ಉದ್ಯಮಿಗಳಾದ ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥ್ ಎಂಬವರ ವಿರುದ್ಧ ಶಂಕೆಯ ಮೇರೆಗೆ ದೂರು ದಾಖಲಾಗಿದೆ. ಇವರಿಗೂ ರಿಕ್ಕಿ ರೈಗೂ ಇದ್ದ ದ್ವೇಷ ಏನು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭೂಗತ ಚಟುವಟಿಕೆಗೆ ಇತಿಶ್ರೀ ಹಾಕಿ 2002ರಲ್ಲಿ ದುಬೈಯಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇರ್ಲ ಮೂಲದವರಾದ ಎನ್. ಮುತ್ತಪ್ಪ ರೈ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಖುಲಾಸೆಗೊಂಡ ಬಳಿಕ ಬಿಡದಿ ಹೊರವಲಯದಲ್ಲಿ ಮನೆ ಖರೀದಿಸಿದ್ದರು. 2004ರಿಂದ ಬಿಡದಿ ಹಾಗೂ ಸದಾಶಿವ ನಗರದ ಮನೆಯಲ್ಲಿ ರೈ ವಾಸಿಸುತ್ತಿದ್ದರು. 2013ರಲ್ಲಿ ಮೊದಲ ಪತ್ನಿ ರೇಖಾ ಎಂ.ರೈ ಅನಾರೋಗ್ಯದಿಂದ ನಿಧನ ಹೊಂದಿದ್ದರು. 2016ರಲ್ಲಿ ಉದ್ಯಮಿ ಅನುರಾಧಾ ಅವರನ್ನು ಮುತ್ತಪ್ಪ ರೈ ವಿವಾಹವಾಗಿದ್ದರು. 2020ರಲ್ಲಿ ಮುತ್ತಪ್ಪ ರೈ ನಿಧನ ಹೊಂದಿದಾಗ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದರು. 2ನೇ ಪತ್ನಿಗೆ 100 ಕೋಟಿ ರೂ. ಮೌಲ್ಯದ ಆಸ್ತಿ ನೀಡಿದ್ದರು. ಉಳಿದ ಆಸ್ತಿಯನ್ನು ತಮ್ಮ ಇಬ್ಬರು ಪುತ್ರರಿಗೆ ಹಂಚಿಕೆ ಮಾಡಿದ್ದರು.
ಮುತ್ತಪ್ಪ ರೈ ನಿಧನದ ಬಳಿಕ ಸಮಪಾಲು ಬೇಕೆಂದು ಅನುರಾಧಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಈ ಸಂಬಂಧ ಸುದೀರ್ಘ ವಿಚಾರಣೆ ನಡೆಸಿ 2024ರ ಸೆಪ್ಟಂಬರ್‌ನಲ್ಲಿ ಲೋಕ ಅದಾಲತ್‌ನಲ್ಲಿ ರಾಜಿ ಇತ್ಯರ್ಥ ನಡೆದಿತ್ತು. ಅದರಂತೆ ಮುತ್ತಪ್ಪ ರೈ ಆಸ್ತಿಯನ್ನು 9 ವಿವಿಧ ಪ್ರದೇಶಗಳಲ್ಲಿ ಅನುರಾಧಾಗೆ ನೀಡಲು ರಿಕ್ಕಿ ರೈ ಸಮ್ಮತಿಸಿದ್ದರು. ಆಸ್ತಿ ಹಂಚಿಕೆ ಅಂತಿಮವಾಗಬೇಕಿದ್ದು ಈ ಸಂಬಂಧ ಮಾತುಕತೆಗೆ ರಿಕ್ಕಿ ರಷ್ಯಾದಿಂದ ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಹಲ್ಲೆ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
ಮುತ್ತಪ್ಪ ರೈ ಆಪ್ತನಾಗಿದ್ದ ರಾಕೇಶ್ ಮಲ್ಲಿ ವಿರುದ್ಧ ಕೂಡ ಸಂದೇಹ ವ್ಯಕ್ತವಾಗಿದ್ದು 30 ವರ್ಷಗಳ ಕಾಲ ಮುತ್ತಪ್ಪ ರೈ ಜತೆಗಿದ್ದ ರಾಕೇಶ್ ಮಲ್ಲಿ 2020ರಲ್ಲಿ ಮುತ್ತಪ್ಪ ರೈ ಸಾಯುವ ಕೆಲವು ತಿಂಗಳು ಮೊದಲು ಮುತ್ತಪ್ಪ ರೈಗಳಿಂದ ತನಗೆ ಜೀವಭಯವಿದೆ ಎಂದು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. 2021ರಲ್ಲಿ ರಿಕ್ಕಿ ರೈ ಮತ್ತು ಆತನ ಸಹಚರದಿಂದ ಕೊಲೆ ಬೆದರಿಕೆ ಇದೆ ಎಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 12 ಎಕ್ರೆ ಭೂಮಿಗೆ ಸಂಬಂಽಸಿ ರಿಕ್ಕಿ ರೈ ಮತ್ತು ರಾಕೇಶ್ ಮಲ್ಲಿ ನಡುವೆ ವಿವಾದ ಇತ್ತು.
ದೇವನಹಳ್ಳಿ ಬಳಿಯ ನಿತೀಶ್ ಎಸ್ಟೇಟ್ ಬಡಾವಣೆಯ ಮಾಲಕ ನಿತೀಶ್ ಶೆಟ್ಟಿ ಹಾಗೂ ಈ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವ ವೈದ್ಯನಾಥ್ ವಿರುದ್ಧವೂ ಶೂಟೌಟ್ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನಿತೀಶ್ ಮತ್ತು ರಿಕ್ಕಿ ರೈ ನಡುವೆ ಸ್ನೇಹವಿತ್ತು. ದೇವನಹಳ್ಳಿಯ ನಿತೀಶ್ ಎಸ್ಟೇಟ್ ವ್ಯವಹಾರದಲ್ಲಿ ರಿಕ್ಕಿ ರೈ ಪಾಲುದಾರಿಕೆ ಇತ್ತು ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಇಬ್ಬರ ನಡುವೆ ವೈಮನಸ್ಸು ಬೆಳೆದಿದ್ದು ವೈಷಮ್ಯ ಬಲವಾಗಿತ್ತು. ಆದರೆ ನಿಜವಾದ ಆರೋಪಿಗಳು ಯಾರೆಂಬುದು ಪೊಲೀಸರು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಮುತ್ತಪ್ಪ ರೈ 2 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದರು. ಬೆಂಗಳೂರು, ದೇವನಹಳ್ಳಿ, ಬಿಡದಿ, ಎಚ್.ಡಿ.ಕೋಟೆ, ಮಂಗಳೂರು, ಗೋವಾ ಸಹಿತ ಹಲವೆಡೆ ಇವರಿಗೆ ಸೇರಿದ ಆಸ್ತಿಗಳು ಇತ್ತು. ವಿದೇಶದಲ್ಲೂ ಆಸ್ತಿ ಹೊಂದಿದ್ದರು. ಕ್ಯಾನ್ಸರ್‌ಗೆ ತುತ್ತಾದಾಗ ಸ್ವತಃ ಮುತ್ತಪ್ಪ ರೈ ನನ್ನ ಬಳಿ 2 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದರು. ತಮ್ಮ ಆಸ್ತಿಗೆ ಸಂಬಂಧಿಸಿ 41 ಪುಟಗಳ ವಿಲ್ ಬರೆದಿದ್ದರು ಮುತ್ತಪ್ಪ ರೈ. ಎಚ್.ಡಿ.ಕೋಟೆ ಜಮೀನು, ಸಹಕಾರ ನಗರದಲ್ಲಿ 2 ಅಂತಸ್ತಿನ ಮನೆ ಸಹಿತ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾಗೆ ನೀಡಿದ್ದರು. ಉಳಿದ ಆಸ್ತಿಯನ್ನು ತಮ್ಮ ಇಬ್ಬರು ಮಕ್ಕಳಿಗೆ ಹಂಚಿಕೆ ಮಾಡುವ ಜತೆಗೆ ಸ್ವಲ್ಪ ಆಸ್ತಿಯನ್ನು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರಿಗೆ ಹಾಗೂ ತಮ್ಮ ಆಪ್ತರಿಗೆ ನೀಡಿದ್ದರು. ಮುತ್ತಪ್ಪ ರೈ ಮೊದಲ ಪುತ್ರ ರಾಕಿ ರೈ ಕೆನಡಾದಲ್ಲಿ ನೆಲೆಸಿದ್ದು ಅವರು ತಮ್ಮ ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಮುತ್ತಪ್ಪ ರೈ ಆಸ್ತಿ ಹಾಗೂ ವಿವಿಧೆಡೆ ಇರುವ ವ್ಯವಹಾರಗಳನ್ನು ರಿಕ್ಕಿ ರೈ ನೋಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ತನಿಖೆ ನಡೆಯುತ್ತಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ:
ಶೂಟೌಟ್ ಯಾರು ಮಾಡಿದ್ದಾರೆಂದು ಪೊಲೀಸ್ ಅಽಕಾರಿಗಳು ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಊಹಾಪೋಹ ಮಾಡಲು ಆಗುವುದಿಲ್ಲ. ಗುಂಡು ಹಾರಿಸಿದವರು ಸಿಕ್ಕಿದ ನಂತರ ಗೊತ್ತಾಗುತ್ತದೆ. ರಾಕೇಶ್ ಮಲ್ಲಿ ಭಾಗಿಯಾಗಿರುವ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆಪರೇಷನ್ ನಂತರ ಸುಧಾರಿಸಿರುವ ರಿಕ್ಕಿ ರೈ ಆರೋಗ್ಯ:
ಸದ್ಯ ಮಾತಾನಾಡುವ ಸ್ಥಿತಿಯಲ್ಲಿರುವ ರಿಕ್ಕಿ ರೈ ಆಸ್ಪತ್ರೆಗೆ ಬರುವ ಹತ್ತಿರದ ಸಂಬಂಧಿಕರ ಜೊತೆ ಮಾತನಾಡುತ್ತಿದ್ದಾರೆ. ರಾತ್ರಿ ವಿದೇಶದಿಂದ ಬಂದಿರುವ ರಿಕ್ಕಿ ರೈ ಸಹೋದರ ರಾಕಿ ರೈ ಆಸ್ಪತ್ರೆಯಲ್ಲಿ ಜೊತೆಗಿದ್ದಾರೆ. ರಾಮನಗರ ಡಿವೈಎಸ್.ಪಿ ಶ್ರೀನಿವಾಸ್ ರಿಕ್ಕಿ ರೈ ಹೇಳಿಕೆ ಪಡೆದಿದ್ದಾರೆ. ಡಿವೈಎಸ್ಪಿ ಮಣಿಪಾಲ್ ಆಸ್ಪತ್ರೆಯಲ್ಲಿಯೂ ವಿಚಾರಣೆ ಮುಂದುವರಿಸಿದ್ದಾರೆ. ಆಸ್ಪತ್ರೆಯೊಳಗಿರುವ ಪೊಲೀಸರು ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣದ ಸಂಬಂಧ ತನಿಖೆ ತೀವ್ರಗೊಳಿಸಿದ್ದಾರೆ. ಫೈರಿಂಗ್ ಸಂಬಂಧ ಹಲವರ ವಿಚಾರಣೆ ನಡೆಸಿದ್ದಾರೆ. ಮನೆ ಕೆಲಸಗಾರರು, ಸಿಬ್ಬಂದಿಗಳು ಹಾಗೂ ರಿಕ್ಕಿ ರೈ ಅಂಗ ರಕ್ಷಕರ ವಿಚಾರಣೆ ನಡೆಸಲಾಗುತ್ತಿದೆ.
ಯಾವಾಗಲೂ ಐದಾರು ಮಂದಿ ಅಂಗರಕ್ಷಕರ ಜೊತೆ ಓಡಾಡುತ್ತಿದ್ದ ರಿಕ್ಕಿ ರೈ ಘಟನೆ ನಡೆಯುವ ವೇಳೆ ಓರ್ವ ಅಂಗ ರಕ್ಷಕನ ಜೊತೆ ಮಾತ್ರ ಇದ್ದರು. ಈ ವಿಷಯದಲ್ಲಿಯೂ ತನಿಖೆ ಕೇಂದ್ರೀಕೃತವಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ಮತ್ತು ಗನ್ ಮ್ಯಾನ್ ರಾಜ್ ಪಾಲ್ ವಿಚಾರಣೆ ಈಗಾಗಲೇ ನಡೆದಿದೆ.
ರಿಕ್ಕಿ ರೈ ಸ್ನೇಹಿತ ಫರ್ಹಾನ್ ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇನ್ನುಳಿದಂತೆ ಘಟನಾ ಸ್ಥಳದ ಟವರ್ ಲೋಕೇಷನ್, ಮೊಬೈಲ್ ಸಿಡಿಆರ್ ಗಳ ಪರಿಶೀಲನೆ ನಡೆಸಲಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ರಿಕ್ಕಿ ರೈ ತನ್ನ ಹತ್ಯಾ ಯತ್ನದ ಹಿಂದೆ ಚಿಕ್ಕಮ್ಮ ಅನುರಾಧ, ರಾಕೇಶ್ ಮಲ್ಲಿ ಮತ್ತಿತರರ ಕೈವಾಡ ಇದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಸಾಗಿದೆ.
ಫೈರಿಂಗ್ ಮಾಡಿದ ಶೂಟರ್ ಗಳ ಪತ್ತೆಗೆ ತೀವ್ರ ಶೋಧ:
ಬಿಡದಿ ಠಾಣಾ ಇನ್ಸ್ ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ರಿಕ್ಕಿ ರೈ ಹೇಳಿಕೆ ಪಡೆದುಕೊಳ್ಳಲಾಗಿದ್ದು ಶೂಟೌಟ್ ಪ್ರಕರಣ ಪ್ರಕರಣದ ಸುತ್ತ ವ್ಯಕ್ತವಾಗಿರುವ ಅನುಮಾನಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಪೊಲೀಸರಿಗೆ ಕಗ್ಗಂಟಾದ ಪ್ರಕರಣ ಇದಾಗಿದೆ. ತಮ್ಮದೇ ಆಯಾಮದಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು ಘಟನಾ ಸ್ಥಳ ಪರಿಶೀಲನೆ ಮಾಡಿದ್ದಾರೆ. ಭೂಗತ ಲೋಕದ ನಂಟಿನ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದ್ದು ಗೌಪ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಆರೋಪಿ ಸ್ಪಷ್ಟ ಮಾಹಿತಿ ಬಳಿಕ ರಾಮನಗರ ಪೊಲೀಸರಿಗೆ ಮಾಹಿತಿ ಸಿಸಿಬಿ ಮಾಹಿತಿ ನೀಡಲಿದೆ. ಈ ಮಧ್ಯೆ ಮುತ್ತಪ್ಪ ರೈ ರ್ಮ್ ಹೌಸ್ ಒಳಭಾಗದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಹಿನ್ನೆಲೆಯಲ್ಲಿ ಬೇರೆ ಯಾವುದಾದರೂ ವಸ್ತುಗಳು ಸಿಗಬಹುದಾ ಎಂಬ ಅನುಮಾನದಲ್ಲಿ ಶೋಧ ನಡೆಸಲಾಗಿದೆ. ಫಾರಂ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ 7 ಜನರ ವಿಚಾರಣೆ ನಡೆಸಲಾಗಿದ್ದು ಮೆನೇಜರ್, ಅಡುಗೆ ಭಟ್ಟ, ಸೆಕ್ಯೂರಿಟಿ ಗಾರ್ಡ್, ಅಕೌಂಟೆಂಟ್ ಹಾಗೂ ಇಬ್ಬರು ಗನ್ ಮ್ಯಾನ್ ಗಳ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.
ಎಲ್ಲರನ್ನೂ ಪ್ರತ್ಯೇಕ ವಿಚಾರಣೆ ಮಾಡಲಾಗಿದೆ. ಮೆಟಲ್ ಡಿಟೆಕ್ಟರ್ ಮೂಲಕ ಇಂಚಿಂಚೂ ತಪಾಸಣೆ ನಡೆಸಲಾಗಿದೆ. ಶಾರ್ಪ್ ಶೂಟರ್ ಪತ್ತೆಗೆ ವ್ಯೂಹ ರಚಿಸಲಾಗಿದೆ.
ವೈಯಕ್ತಿಕ ದ್ವೇಷಕ್ಕೆ ಕೊಲೆಗೆ ಸಂಚು..?:
ಬಿಹಾರ ಮೂಲದ ವ್ಯಕ್ತಿಯೊಂದಿಗೆ ರಿಕ್ಕಿ ರೈ ಕಿರಿಕ್ ಮಾಡಿಕೊಂಡಿದ್ದರು ಎಂಬ ಊಹಾಪೋಹದಲ್ಲಿಯೂ ತನಿಖೆ ಮುಂದುವರಿದಿದೆ. ರಾಮನಗರ ಜಿಲ್ಲೆಯ ಎಲ್ಲಾ ಇನ್ಸ್ ಪೆಕ್ಟರ್ ಗಳನ್ನು ತನಿಖೆಗೆ ಬಳಕೆ ಮಾಡಲು ಎಸ್ಪಿ ಶ್ರೀನಿವಾಸ್ ಗೌಡ ಸೂಚಿಸಿದ್ದಾರೆ. ಎಎಸ್ಪಿಗಳಾದ ಸುರೇಶ್ ಮತ್ತು ರಾಮಚಂದ್ರಯ್ಯ ನೇತೃತ್ವದಲ್ಲಿ ಒಬ್ಬೊಬ್ಬ ಇನ್ಸ್ ಪೆಕ್ಟರ್ ಗೆ ಜವಾಬ್ದಾರಿ ನೀಡಲಾಗಿದೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಘಟನೆ ನಡೆದ ಸ್ಥಳ ಪರಿಶೀಲನೆ ಸೇರಿದಂತೆ ಒಬ್ಬೊಬ್ಬ ಇನ್ಸ್ ಪೆಕ್ಟರ್ ಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ.
ಈ ಮಧ್ಯೆ ಬೆಳ್ತಂಗಡಿಯಲ್ಲಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾನು ರಿಕ್ಕಿ ರೈ ಗೆ ಕರೆ ಮಾಡಿ ಮಾತನಾಡಿಲ್ಲ. ನನ್ನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರಿಗೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ವಿಕ್ಕಿ ಶೆಟ್ಟಿ ಕೈವಾಡ?:
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಟ್ಲದವರಾಗಿದ್ದು ಸದ್ಯ ಮಲೇಶಿಯಾದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಭೂಗತ ದೊರೆ ವಿಕ್ಕಿ ಶೆಟ್ಟಿ ಅವರು ರಿಕ್ಕಿ ರೈ ಮೇಲಿನ ಫೈರಿಂಗ್ ಪ್ರಕರಣದಲ್ಲಿ ಕೈಯಾಡಿಸಿದ್ದಾರೆ ಎಂದು ವ್ಯಾಪಕ ಸುದ್ದಿಯಾಗುತ್ತಿರುವುದು ಸಂಚಲನ ಸೃಷ್ಠಿಸಿದೆ. ರಿಕ್ಕಿ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಅಂಡರ್ ವರ್ಲ್ಡ್ ಲಿಂಕ್ ಇದೆಯೇ ಎಂದು ಮಾಹಿತಿ ಸಂಗ್ರಹಿಸುತ್ತಿರುವ ಐಜಿಪಿ ಲಾಬೂರಾಮ್ ಮತ್ತು ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದ ಪೊಲೀಸ್ ತಂಡಕ್ಕೆ ವಿಕ್ಕಿ ಶೆಟ್ಟಿ ಪಾತ್ರದ ಬಗ್ಗೆ ಕ್ಲೂ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.