ಸಂಕಲ್ಪದಂತೆ ಉತ್ತಮ ರೀತಿಯಲ್ಲಿ ದೇವರಿಗೆ ತೃಪ್ತಿಯಾಗಿದೆ-ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ
ಪುತ್ತೂರು: ಸಂಕಲ್ಪದಂತೆ ಈ ಬಾರಿ ಜಾತ್ರೋತ್ಸವ ಒಳ್ಳೆಯ ರೀತಿಯಲ್ಲಿ ದೇವರಿಗೂ ತೃಪ್ತಿಯಾಗಿದೆ. ಭಕ್ತರ ತೃಪ್ತಿ ದೇವರ ತೃಪ್ತಿ ಎಂದು ಶಾಸ್ತ್ರ ಭೋಧಿಸಿದೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಹೇಳಿದರು.

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಸಂಪನ್ನವಾದ ಬಳಿಕ ಎ.20ರಂದು ಸಂಪ್ರೋಕ್ಷಣೆ ಮತ್ತು ರಾತ್ರಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಶ್ರೀದೇವರ ಸತ್ಯ ಧರ್ಮ ನಡೆಯಲ್ಲಿ ಮಾತನಾಡಿದರು. ಶರೀರ, ಮನಸು, ಭಕ್ತಿ, ಇಂದ್ರಿಯಗಳಿಂದ ನಾವು ಏನು ಮಾಡಿಕೊಂಡು ಬಂದಿದ್ದೇವೋ ಅದೆಲ್ಲವೂ ದೇವರಿಗೆ ಸಮರ್ಪಣೆ ಆಗಿದೆ. ಮಾಡಿರುವ ಕಾರ್ಯದಲ್ಲಿ ಉತ್ಸವ ಒಬ್ಬರಿಂದಲ್ಲ ಇಡಿ ದೊಡ್ಡ ಸಮೂಹ ಸೇರಿಕೊಂಡು ಆಗಿರುವಂತಹದ್ದು, ನಾವೆಲ್ಲರು ಮಾಡಿದ ಸೇವೆ ಭಗವಂತನ ಸನ್ನಿಽಗೆ ಸಮರ್ಪಣೆಯಾಗಿರುವುದು. ಭಗವಂತನ ಅನುಗ್ರಹದಿಂದ ಇಡಿ ಲೋಕಕ್ಕೆ ಕಲ್ಯಾಣ ಆಗಬೇಕು. ಭಕ್ತರ ಮನಸ್ಸಿಗೆ ತೃಪ್ತಿಯಾಗುವಂತೆ ಉತ್ಸವ ನಡೆಯಬೇಕು. ಅದೆಲ್ಲವನ್ನು ದೇವರಿಗೆ ಸಮರ್ಪಣೆ ಮಾಡಿಕೊಂಡು ಭವಿಷ್ಯತ್‌ನಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶವನ್ನು ಮಾಡೋಣ ಎಂದ ಅವರು ಬರುವ ವರ್ಷ ಇದಕ್ಕಿಂತಲೂ ವಿಜ್ರಂಭಣೆಯಿಂದ ದೇವರ ಉತ್ಸವ ನಡೆಯಬೇಕು. ಶ್ರೀಮಹಾಲಿಂಗೇಶ್ವರ ಸಪರಿವಾರ ದೇವರ ಅನುಗ್ರಹ ಸದಾ ಇರಲೆಂದು ಹರಸಿದರು.
ದೇವರ ನಿತ್ಯ ಬಲಿ ಉತ್ಸವ, ವಸಂತ ಕಟ್ಟೆಯಲ್ಲಿ ವಸಂತ ಪೂಜೆ ನಡೆಯಿತು. ಜೊತೆಯಲ್ಲಿ ತಂತ್ರಿಯವರು ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿದರು. ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ ಪಿ.ವಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಈಶ್ವರ ಬೆಡೇಕರ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ಪ್ರಧಾನ ಅರ್ಚಕರೂ ಸದಸ್ಯರೂ ಆಗಿರುವ ವೇ.ಮೂ. ವಸಂತ ಕೆದಿಲಾಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಮಾಜಿ ಸದಸ್ಯರು, ಹಿರಿಯರಾದ ಕಿಟ್ಟಣ್ಣ ಗೌಡ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ದೇವಳದ ಪೂಜೆಯ ಆರಂಭದಲ್ಲಿ ಜಾತ್ರೋತ್ಸವದಲ್ಲಿ ವಿವಿಧ ಸೇವಾ ಕಾರ್ಯಕ್ಕೆ ಪಾತ್ರರಾದ ದೇವಳದ ಅರ್ಚಕರು, ಪರಿಚಾರಕ ವರ್ಗಕ್ಕೆ ಸಂಪ್ರದಾಯದಂತೆ ಹೊಸ ಬಟ್ಟೆಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಿತರಿಸಿದರು. ವಸಂತ ಪೂಜೆಯ ಪ್ರಸಾದವನ್ನು ದೇವಳದ ಗೋಪುರದಲ್ಲಿ ವಿತರಿಸಲಾಯಿತು.
ಅರ್ಚಕರಿಗೆ, ಚಾಕರಿಯವರಿಗೆ ವಸ್ತ್ರವಿತರಣೆ:
ಜಾತ್ರೋತ್ಸವದಲ್ಲಿ ವಿವಿಧ ರೀತಿಯಲ್ಲಿ ಸೇವಾ ಕಾರ್ಯ ನಿರ್ವಹಿಸಿದ ದೇವಳದ ಅರ್ಚಕರಿಗೆ, ಚಾಕರಿಯವರಿಗೆ ದೇವಳದ ಸತ್ಯಧರ್ಮ ನಡೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಸ್ತ್ರವಿತರಿಸಿದರು.