ಗ್ರಾ.ಪಂ.ಉಪಚುನಾವಣೆ ಮುಂದೂಡಿಕೆ

0

ಪುತ್ತೂರು: ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯತ್‌ನ ಖಾಲಿ ಸ್ಥಾನಗಳಿಗೆ ಮೇ 11ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ 15 ದಿನಗಳ ಮಟ್ಟಿಗೆ ಮುಂದೂಡಿ ಆದೇಶಿಸಿದೆ.


ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಕೆಲವು ಜಿಲ್ಲೆಯ ಜಿಲ್ಲಾಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲಿಸಲು ಹಾಗೂ ಇತರೇ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ಕೋರಿ ಗ್ರಾಮ ಪಂಚಾಯಿತಿ ಉಪಚುನಾವಣೆಯನ್ನು ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿ ಗ್ರಾಮ ಪಂಚಾಯಿತಿಗಳ ಉಪಚುನಾವಣೆಯನ್ನು 15 ದಿನಗಳ ಮಟ್ಟಿಗೆ ಮುಂದೂಡಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಮರಬಳ್ಳಿ ಅವರು ಆದೇಶಿಸಿದ್ದಾರೆ.

ಕಡಬ ತಾಲೂಕಿನ ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು, ಬಾಳ್ತಿಲ ಗ್ರಾಮ ಪಂಚಾಯತ್ ಸೇರಿದಂತೆ ದ.ಕ.ಜಿಲ್ಲೆಯ 9 ಗ್ರಾಮ ಪಂಚಾಯತ್‌ಗಳ ತಲಾ 1 ಸ್ಥಾನಕ್ಕೆ ಮೇ 11ರಂದು ಉಪಚುನಾವಣೆ ನಿಗದಿಯಾಗಿತ್ತು. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ 222 ಗ್ರಾಮ ಪಂಚಾಯತ್‌ಗಳಲ್ಲಿ ತೆರವಾಗಿರುವ 260 ಸದಸ್ಯ ಸ್ಥಾನಗಳಿಗೆ ಅದೇ ದಿನ ಉಪಚುನಾವಣೆ ನಿಗದಿಯಾಗಿತ್ತು.

ಏ.22ರಂದು ಚುನಾವಣೆ ಅಧಿಸೂಚನೆ ಪ್ರಕಟಗೊಂಡು ಮೇ 11ರಂದು ಚುನಾವಣೆ ನಡೆದು ಮೇ 14ಕ್ಕೆ ಮತಗಳ ಎಣಿಕೆಗೆ ದಿನ ನಿಗದಿಯಾಗಿತ್ತು. ಇದೀಗ 15 ದಿನಗಳ ಮಟ್ಟಿಗೆ ಉಪಚುನಾವಣೆ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ. ಈ ಆದೇಶದನ್ವಯ ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯವರು ದ.ಕ.ಜಿಲ್ಲೆಯ ಸುಬ್ರಹ್ಮಣ್ಯ, ವಿಟ್ಲಮುಡ್ನೂರು, ಬಾಳ್ತಿಲ ಸಹಿತ 9 ಗ್ರಾಮ ಪಂಚಾಯತ್‌ಗಳಿಗೆ ಮೇ 11ರಂದು ನಡೆಯಬೇಕಿದ್ದ ಉಪಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here